ಹಿಂದೂ ವಿರೋಧಿ ನಿಲುವುಗಳ ವಿರುದ್ಧ ಬೀದಿಗಿಳಿದು ಹೋರಾಟ :ಕಣಿಯೂರು ಶ್ರೀ ಮಹಾಬಲೇಶ್ವರ ಸ್ವಾಮೀಜಿ ಎಚ್ಚರಿಕೆ
ಪುತ್ತೂರು: ಮತಾಂತರದ ಪಿಡುಗು ಸಾಮಾನ್ಯವಾದುದಲ್ಲ. ಇದರ ವಿರುದ್ಧ ತಂದ ಕಾನೂನುಗಳನ್ನು ರದ್ದು ಮಾಡುವ ಮೂಲಕ ನಮ್ಮ ಮನೆಯಲ್ಲಿ ನಮಗೇ ಸ್ವಾತಂತ್ರ್ಯ ಇಲ್ಲದ ಸ್ಥಿತಿಯನ್ನು ರಾಜ್ಯ ಸರಕಾರ ಮಾಡುತ್ತಿದೆ. ಸಂತರಿಗೆ ಹಿಂದೂ ಎಂಬುದು ಮಾತ್ರ ಪಕ್ಷ. ಹಿಂದೂ ವಿರೋಧಿ ನಿಲುವುಗಳ ವಿರುದ್ಧ ಯಾವುದೇ ಸರಕಾರ ಕೆಲಸ ಮಾಡಿದರೂ ಬೀದಿಗಿಳಿದು ಹೋರಾಟ ಮಾಡಲು ಸಂತರೆಲ್ಲರೂ ಈಗಾಗಲೇ ತೀರ್ಮಾನ ಮಾಡಿದ್ದೇವೆ ಎಂದು ಕಣಿಯೂರು ಶ್ರೀ ಮಹಾಬಲೇಶ್ವರ ಸ್ವಾಮೀಜಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮತಾಂತರ ನಿಷೇಧ ಕಾಯಿದೆ ಹಾಗೂ ಗೋಹತ್ಯೆ ಪ್ರತಿಬಂಧಕ ಕಾಯಿದೆಯನ್ನು ರಾಜ್ಯ ಕಾಂಗ್ರೆಸ್ ಸರಕಾರ ರದ್ದು ಮಾಡಲು ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ವಿಹಿಂಪ, ಬಜರಂಗದಳದ ವತಿಯಿಂದ ಪುತ್ತೂರು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಎಲ್ಲವೂ ಉಚಿತ ಎನ್ನುತ್ತಾ ಮತಾಂತರವನ್ನೂ ಫ್ರೀ ಮಾಡುವ ಯೋಚನೆಯನ್ನು ಸರಕಾರ ಹೊಂದಿದೆ. ಯಾವುದೇ ತ್ಯಾಗ ಮಾಡಿಯಾದರೂ ಕೈಗೆ ಕೈ ಜೋಡಿಸಿ ಕಾಂಗ್ರೆಸ್ ಸರಕಾರದ ದಬ್ಬಾಳಿಕೆ ವಿರುದ್ಧ ಹೋರಾಡುತ್ತೇವೆ. ಹಿಂದೂ ಸಮಾಜ ಎಂದಿಗೂ ಜಾಗೃತವಾಗಿಯೇ ಇದೆ ಎನ್ನುವ ಎಚ್ಚರ ಸರಕಾರಕ್ಕಿರಲಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಮಾತನಾಡಿ, ಮತಾಂತರದಿಂದ ಶಾಂತಿಯ ಬದುಕು ಸಾಧ್ಯವಿಲ್ಲ ಎಂದ ಗಾಂಧೀಜಿಯವರ ಹೆಸರನ್ನು ಬಳಸಿಕೊಳ್ಳುವ ಕಾಂಗ್ರೆಸ್ ನವರು ಮತಾಂತರಕ್ಕೆ ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿರುವ ಹಿಂದೂಗಳ ಸಮ್ಮತಿ ಇದಕ್ಕೆ ಇದೆಯೇ ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ,ಜಿ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸಂಘಟನೆ ಹಾಗೂ ಬಿಜೆಪಿ ಪಕ್ಷದ ಪ್ರಮುಖರಾದ ವಿದ್ಯಾ ಆರ್. ಗೌರಿ, ಜಯಶ್ರೀ ಶೆಟ್ಟಿ, ಶ್ರೀಧರ್ ತೆಂಕಿಲ, ಸತೀಶ್ ಬಿ.ಎಸ್., ಭಾಮಿ ಅಶೋಕ್ ಶೆಣೈ, ಹರೀಶ್ ಬಿಜತ್ರೆ, ನಿತೀಶ್ ಕುಮಾರ್ ಶಾಂತಿವನ, ದಿನೇಶ್ ಪಂಜಿಗ, ಅಜಿತ್ ರೈ ಹೊಸಮನೆ,ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ನವೀನ್,ಬಜರಂಗದಳದ ವಿಶಾಖ್ ಸಸಿಹಿತ್ಲು ಮೊದಲಾದವರು ಪಾಲ್ಗೊಂಡರು.