SSLC ವಾರ್ಷಿಕ ಪರೀಕ್ಷೆ: ಪುತ್ತೂರು, ಕಡಬದಲ್ಲಿ ಪ್ರಥಮ ದಿನ 42 ವಿದ್ಯಾರ್ಥಿಗಳು ಗೈರು
ಪುತ್ತೂರು:2023-24ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯು ಮಾ.25ರಂದು ಪ್ರಾರಂಭಗೊಂಡಿದ್ದು ಪ್ರಥಮ ದಿನದ ಪರೀಕ್ಷೆಗೆ ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಒಟ್ಟು 42 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಉಭಯ ತಾಲೂಕಿನಲ್ಲಿ ಒಟ್ಟು 4732 ಮಂದಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಒಟ್ಟು 4690ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ಶೇ.99.11ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದಾರೆ.
ಪ್ರಥಮ ದಿನವಾದ ಮಾ.25ರಂದು ಪ್ರಥಮ ಭಾಷಾ ಪರೀಕ್ಷೆ ನಡೆದಿದೆ. ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ತೆರೆಯಲಾಗಿರುವ 13 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿರುತ್ತದೆ. ಈ ಪೈಕಿ ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ-3, ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆ-1, ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗ-5, ಸಂತ ವಿಕ್ಟರಣ ಬಾಲಿಕ ಪ್ರೌಢಶಾಲೆ-1, ಕಡಬ ಸರಕಾರಿ ಪ್ರೌಢಶಾಲೆ-3, ನೆಲ್ಯಾಡಿ ಸೈಂಟ್ ಜಾರ್ಜ್ ಪ್ರೌಢಶಾಲೆ-1, ರಾಮಕುಂಜದ ಶ್ರೀರಾಮಕುಂಜೇಶ್ವರ ಪ್ರೌಢಶಾಲೆ-2, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ-6, ಸವಣೂರು ವಿದ್ಯಾರಶ್ಮಿ ಪ್ರೌಢಶಾಲೆ-6, ಈಶ್ವರಮಂಗಲ ಗಜಾನನ ಪ್ರೌಢಶಾಲೆ-7 ಹಾಗೂ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪರೀಕ್ಷಾ ಕೇಂದ್ರದಲ್ಲಿ 6 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಗೈರಾಗಿರುವ ಒಟ್ಟು ವಿದ್ಯಾರ್ಥಿಗಳಲ್ಲಿ 28 ಮಂದಿ ಹೊಸದಾಗಿ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಹಾಗೂ 14 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ.