ಮೃತ್ಯುಕೂಪದಂತಿರುವ ರಾಷ್ಟ್ರೀಯ ಹೆದ್ದಾರಿ, ಪ್ರತಿನಿತ್ಯ ಹೆದ್ದಾರಿಗಳಲ್ಲಿ ಅಪಘಾತಗಳ ಸರಮಾಲೆ
ಜಿಲ್ಲೆಯ ಸಾವಿರಾರು ಪ್ರಯಾಣಿಕ ವಾಹನಗಳಿಗೆ ನಿತ್ಯ ಆಸರೆಯಾಗುವ ಹೆದ್ದಾರಿಯು ಮರಣ ಗುಂಡಿಗಳಾಗಿ ಬದಲಾಗುತ್ತಿದೆ. ಹೆದ್ದಾರಿಯ ಬಹುತೇಕ ಭಾಗಗಳಲ್ಲಿ ಹೊಂಡಗಳೇ ತುಂಬಿಕೊಂಡಿದ್ದು, ಸಂಚಾರ ಕಷ್ಟಕರವಾಗಿದೆ.ಇಲ್ಲಿರುವ ಗುಂಡಿಗಳು ಸವಾರರ ಮತ್ತು ಪ್ರಯಾಣಿಕರ ಹೃದಯಬಡಿತ ಹೆಚ್ಚಿಸುವಂತಿದೆ.ಸ್ವಲ್ಪ ಎಚ್ಚರ ತಪ್ಪಿದ್ರೆ ಸಾಕು ವಾಹನ ಹೊಂಡಕ್ಕೆ ಬೀಳುವುದು ಖಚಿತ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೃಹತ್ತಾಕಾರದ ಹೊಂಡಗುಂಡಿಗಳಿಂದ ವಾಹನ ಸವಾರ ನರಕಯಾತನೆ ಅನುಭವಿಸುವಂತಾಗಿದೆ. ದಿನಬೆಳಗಾದರೆ ಅದೇಷ್ಟೋ ಅಪಘಾತಗಳ ಸರಮಾಲೆ ಕಣ್ಮುಂದೆ ಕಾಣುತ್ತಿವೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹೆದ್ದಾರಿಗಳಲ್ಲಿ ಹೊಂಡಗುಂಡಿಗಳು ಆವೃತವಾಗಿರುವುದರಿಂದ ಪ್ರಯಾಣಿಕರು ಮತ್ತು ವಾಹನ ಸವಾರ ಪಾಡು ಹೇಳತೀರದಂತಿದೆ.
ಯಾವ ರಸ್ತೆಯಲ್ಲಿ ಎಲ್ಲೆಲ್ಲಿ ಎಷ್ಟು ಗುಂಡಿಗಳಿವೆ ಎಂದು ಲೆಕ್ಕ ಹಾಕಲು ಸಾಧ್ಯವಿಲ್ಲ. ಯಾಕೆಂದ್ರೆ ಅರೆಕ್ಷಣಕ್ಕೊಂದು ಗುಂಡಿ ಧುತ್ತೆಂದು ಎದುರುಗೊಳ್ಳುತ್ತಿದೆ. ಅದರಲ್ಲೂ ಮಂಗಳೂರು ವ್ಯಾಪ್ತಿಯ ಹೆದ್ದಾರಿಯ ಸ್ಥಿತಿ ಭೀಕರ ಅನ್ನಿಸುವಂತಿದೆ. ಇಂಚಿ ಇಂಚಿಗೂ ರಸ್ತೆಯಲ್ಲಿ ಹೊಂಡಗಳು ರಾರಾಜಿಸುತ್ತಿದ್ದು, ಪ್ರಯಾಣ ದುಸ್ಥರವಾಗಿದೆ.ಗುಂಡಿಯಲ್ಲೇ ಎದ್ದು ಬಿದ್ದು ಸಂಚರಿಸಬೇಕಾದ ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದಂತಿದೆ. ಗುಂಡಿ ತಪ್ಪಿಸಲು ಹೋದರೆ ಅಪಘಾತ ನಡೆಯುವ ಸಾಧ್ಯತೆಯೇ ಹೆಚ್ಚು.
ಇನ್ನು ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಿಂದಾಗಿ ಅಪಘಾತಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಿಗೆ ಸೇರುವವರ ಸಂಖ್ಯೆಯೂ ಹೆಚ್ಚಾಳವಾಗುತ್ತಿದೆ. ಮೃತ್ಯು ಕೂಪದಂತಿರುವ ಹೆದ್ದಾರಿಗಳನ್ನು ಸಂಭಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸರಿಪಡಿಸದಿದ್ದರೆ ಇನ್ನೇಷ್ಟು ಜೀವವನ್ನು ಬಲಿಪಡೆಯಲಿದೆಯೋ ಎಂಬ ಆತಂಕ ಸಾರ್ವಜನಿಕರದ್ದು.