ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ದಂತ ವೈದ್ಯರ ಪಾತ್ರ’
ಒಂದು ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದಲ್ಲಿ ಆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪಾಲುದಾರನಾಗುತ್ತಾನೆ ಮತ್ತು ಹೊಣೆಗಾರನಾಗುತ್ತಾನೆ. ಅಂತಹ ಪ್ರತಿ ಪ್ರಜೆಗಳ ಆರೋಗ್ಯವನ್ನು ಕಾಪಾಡುವಲ್ಲಿ ವೈದ್ಯರು ಬಹುಮುಖ್ಯ ಭೂಮಿಕೆ ವಹಿಸುತ್ತಾರೆ. ಅದು ಕುಟುಂಬ ವೈದ್ಯರೇ ಇರಬಹುದು, ಅಲೋಪತಿ, ಆಯುರ್ವೇದ, ಹೊಮಿಯೋಪತಿ, ಯುನಾನಿ ಅಥವಾ ದಂತ ವೈದ್ಯರೂ ಇರಬಹುದು. ಒಟ್ಟಿನಲ್ಲಿ ವೈದ್ಯರು ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ನೇರವಾದ ಮತ್ತು ಪ್ರತ್ಯಕ್ಷವಾದ ಪರಿಣಾಮ ಬೀರುವ ವ್ಯಕ್ತಿ ಅಂದರೆ ವೈದ್ಯರೇ ಆಗಿರುತ್ತಾರೆ. ಇನ್ನು ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಹಲ್ಲಿನ ಆರೋಗ್ಯವೂ ಅತೀ ಅವಶ್ಯಕ. ಬಾಯಿ ಎನ್ನುವುದು ನಮ್ಮ ದೇಹದ ಪ್ರವೇಶ ದ್ವಾರವಿದ್ದಂತೆ. ಜೀರ್ಣಾಂಗ ವ್ಯೂಹದ ಹೊಸ್ತಿಲೇ ನಮ್ಮ ಬಾಯಿ ಆಗಿರುತ್ತದೆ. ಇಂತಹ ಬಾಹಿಯಲ್ಲಿ ಆರೋಗ್ಯವಂತ ಹಲ್ಲುಗಳು ಇಲ್ಲದಿದ್ದಲ್ಲಿ ಪ್ರಥಮ ಚುಂಬನಂ ದಂತಭಗ್ನಂ ಎಂಬಂತೆ ಜೀರ್ಣಾಂಗ ವ್ಯವಸ್ಥೆಯ ಹಳಿ ತಪ್ಪುವುದಂತೂ ಖಂಡಿತಾ. ಹಲ್ಲಿನ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಪರಿಪೂರ್ಣವಾಗಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಹಲ್ಲುಗಳ ಆರೋಗ್ಯ ನಿರ್ಲಕ್ಷಿಸಿದರೆ, ನಿಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುವುದು ಸಹಜ.
ದಂತ ವೈದ್ಯರ ಪಾತ್ರ:
ಬಾಯಿ ಎನ್ನುವುದು ಬ್ಯಾಕ್ಟೀರಿಯಾಗಳ ಗುಂಡಿ. ಲಕ್ಷಾಂತರ ಬ್ಯಾಕ್ಟೀರಿಯಗಳು ಮತ್ತು ವೈರಾಣುಗಳು ಬಾಯಿಯಲ್ಲಿ ಮನೆ ಮಾಡಿ ಸಂಸಾರ ನಿರ್ವಹಣೆ ಮಾಡಿಕೊಂಡಿರುತ್ತದೆ. ಯಾವಾಗ ದೇಹದ ರಕ್ಷಣಾ ವ್ಯವಸ್ಥೆ ಕುಸಿದಾಗ, ಅವುಗಳು ತಮ್ಮ ನಿಜರೂಪ ತೋರಿಸುತ್ತದೆ ಮತ್ತು ರೋಗ ಬರುವಂತೆ ಮಾಡುತ್ತದೆ. ಒಬ್ಬ ರೋಗಿ ಬಾಯಿ ತೆರೆದಾಗ, ದಂತವೈದ್ಯರು ಆತನ ಬಾಯಿಯಲ್ಲಿ ಬರೀ ಹಲ್ಲನ್ನು ಮಾತ್ರ ನೋಡುವುದಿಲ್ಲ. ಯಶೋಧಯು ಕೃಷ್ಣನ ಬಾಯಿಯನ್ನು ತೆರೆಸಿ (ಮಣ್ಣುತಿಂದಾಗ) ಬ್ರಹ್ಮಾಂಡವನ್ನು ಕಂಡಳು ಎಂಬುದಾಗಿ ನಮ್ಮ ಪುರಾಣ ಕಥೆಗಳಲ್ಲಿ ದಾಖಲಾಗಿದೆ. ಅದೇ ರೀತಿ ಕಲಿಯುಗದಲ್ಲಿ ರೋಗಿಯು ಬಾಯಿ ತೆರೆದಾಗ ದಂತ ವೈದ್ಯರು ರೊಗಿಯ ಬಾಯಿಯಲ್ಲಿ ಹತ್ತು ಹಲವಾರು ರೋಗದ ಲಕ್ಷಣಗಳನ್ನು ಗುರುತಿಸಿ ರೊಗವನ್ನು ಪತ್ತೆ ಹಚ್ಚುತ್ತಾರೆ. ರೋಗಿಯ ಬಾಯಿಯಲ್ಲಿ ದಂತ ವೈದ್ಯರು ಪತ್ತೆ ಹಚ್ಚಬಹುದಾದ ರೋಗಗಳು ಯಾವುದೆಂದರೆ
- ಮಧುಮೇಹ ರೋಗ
- ಅಧಿಕ ರಕ್ತದೊತ್ತಡ
- ಅನೀಮಿಯಾ ಅಥವಾ ರಕ್ತಹೀನತೆ
- ಬಾಯಿ ಕ್ಯಾನ್ಸರ್
- ರಕ್ತದ ಕ್ಯಾನ್ಸರ್
- ವಿಟಮಿನ್ ಕೊರತೆ
- ಶಿಲೀಂದ್ರಗಳ ಸೋಂಕು
- ಲಿವರ್ ತೊಂದರೆ
- ಗ್ಯಾಸ್ಟ್ರಿಕ್ ಸಮಸ್ಯೆ
- ಶ್ವಾಸಕೋಶದ ಕೀವು
- ಏಡ್ಸ್ ರೋಗ
- ರಕ್ತದ ಕಾಯಿಲೆಗಳು
- ಮಾನಸಿಕ ಒತ್ತಡ
- ಔಷದಿಗಳ ದುಷ್ಪರಿಣಾಮ
- ಅಪಸ್ಮಾರ ರೋಗ
- ಹೆಪಟೈಟಿಸ್
- ಜಾಂಡೀಸ್
- ವೈರಾಣು ಸೋಂಕು
- ಥೈರಾಯ್ಡ್ ಸಮಸ್ಯೆ
- ರಸದೂತಗಳ ಏರುಪೇರು
- ಡೆಂಗ್ಯೂ ಜ್ವರ
- ಚಿಕನ್ ಗುನ್ಯಾ ಜ್ವರ
- ನಿದ್ರಾಹೀನತೆ
ಈ ಎಲ್ಲಾ ರೋಗಗಳು ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಬಾಯಿಯಲ್ಲಿ ಪ್ರಕಟಗೊಳ್ಳುತ್ತದೆ.
ಉದಾಹರಣೆಗೆ ಮಧುಮೇಹ ರೋಗದಲ್ಲಿ ಹಲ್ಲಿನ ವಸಡಿನ ಸುತ್ತ ಕೀವು ತುಂಬಿ, ಹಲ್ಲಿನ ಸುತ್ತಲಿನ ದಂತದಾರ ಎಲುಬು ಕರಗಿ ಹಲ್ಲು ಅಲುಗಾಡುತ್ತದೆ ಮತ್ತು ಬಾಯಿ ವಿಪರೀತ ವಾಸನೆ ಹೊಂದಿರುತ್ತದೆ. ರಕ್ತಹೀನತೆ ಇರುವವರಲ್ಲಿ ಬಾಯಿ ಒಳ ಭಾಗದ ಪದರ ಬಿಳಿಚಿಕೊಂಡಿರುತ್ತದೆ. ಬಾಯಿ ಕ್ಯಾನ್ಸರ್ ಇದ್ದಲ್ಲಿ ಬಾಯಿಯೊಳಗೆ ಗಡ್ಡೆ ಅಥವಾ ಒಣಗದ ಹುಣ್ಣು ಇರುತ್ತದೆ. ರಕ್ತದ ಕ್ಯಾನ್ಸರ್ ಇದ್ದಲ್ಲಿ ವಸಡಿನಲ್ಲಿ ರಕ್ತ ಒಸರುತ್ತಿರುತ್ತದೆ. ವಿಟಮಿನ್ ಸಿ ಕೊರತೆ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ, ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ ಇದ್ದಲ್ಲಿ ಬೋಳು ನಾಲಗೆ ಇರುತ್ತದೆ. ಶಿಲೀಂಥ್ರಗಳ ಸೋಂಕು ಇದ್ದಲ್ಲಿ ನಾಲಿಗೆ ಮೇಲೆ ಬಿಳಿ ಪದರ ಇರುತ್ತದೆ. ಅದನ್ನು ಕ್ಯಾಂಡಿಡಿಯೋಸಿಸ್ ಎನ್ನುತ್ತಾರೆ. ಸಾಮಾನ್ಯವಾಗಿ ಅತೀ ಹೆಚ್ಚು ಆಂಟಿಬಯೋಟಿಕ್ ಬಳಸುವವರಲ್ಲಿ, ಸ್ಟೀರಾಯ್ಡ್ ಸೇವಿಸುವವರಲ್ಲಿ, ದೇಹದ ರಕ್ಷಣಾ ವ್ಯವಸ್ಥೆ ಕುಸಿದವರಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಅಧಿಕ ರಕ್ತದೊತ್ತಡ ಮತ್ತು ಅಪಸ್ಮಾರ ರೋಗಕ್ಕೆ ಔಷದಿ ಸೇವಿಸುವವರಲ್ಲಿ ವಸಡುಗಳು ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿದೆ. ಲಿವರ್ ತೊಂದರೆ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ, ಮಾನಸಿಕ ಒತ್ತಡ ಇದ್ದಲ್ಲಿ ಬಾಯಿಯಲ್ಲಿ ಹುಣ್ಣು, ಜಾಂಡಿಸ್ ಇದ್ದಲ್ಲಿ ಬಾಯಿ ನಾಲಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಡೆಂಗ್ಯೂ ಜ್ವರ ಮತ್ತು ಚಿಕನ್ ಗುನ್ಯಾ ಜ್ವರ ಇದ್ದಲ್ಲಿ ಪ್ಲೇಟ್‍ಲೇಟ್‍ಗಳ ಸಂಖ್ಯೆ ಕಡಿಮೆಯಾಗಿ ವಸಡಿನಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಗ್ಯಾಸ್ಟ್ರೀಕ್ ಸಮಸ್ಯೆ ಇದ್ದಲ್ಲಿ ಹಲ್ಲು ಸವೆದು ಹೋಗಿ ದಂತ ಅತಿ ಸಂವೇದನೆ ಇರುತ್ತದೆ. ಶ್ವಾಸಕೋಶದ ಕೀವು ಮತ್ತು ಸೋಂಕು ಇದ್ದಲ್ಲಿ ವಿಪರೀತ ಬಾಯಿ ವಾಸನೆ ಇರುತ್ತದೆ. ಏಡ್ಸ್ ರೋಗ ಇದ್ದಲ್ಲಿ ನಾಲಗೆ ಮೇಲೆ ಬಿಳಿ ಕೂದಲು ಬೆಳೆಯುತ್ತದೆ.
ಬದಲಾದ ದಂತ ಚಿಕಿತ್ಸೆಯ ಸ್ವರೂಪ
ಹಿಂದಿನ ಕಾಲದಲ್ಲಿ ದಂತ ವೈದ್ಯರು ಎಂದರೆ ಕೇವಲ ಹಲ್ಲು ತೆಗೆಯಲು ಮಾತ್ರ ಸೀಮಿತವಾಗಿದ್ದರು. ಆದರೆ ಈಗ ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಬಂದಿದೆ. ಮೂರನೇ ದವಡೆ ಹಲ್ಲಿನ ಒಳಭಾಗ ದಂತ ಮಜ್ಜೆಯ ಒಳಗಿನ ಆಕಾರ ಕೋಶ ಜೀವಕೋಶಗಳಿಂದ ಹೊಸತಾದ ಹಲ್ಲನ್ನು ಸೃಷ್ಟಿ ಮಾಡುವಲ್ಲಿಯವರೆಗೆ ದಂತ ವೈದ್ಯ ವಿಜ್ಞಾನ ಬೆಳೆದಿದೆ. ಈಗ ದಂತ ಚಿಕಿತ್ಸೆ ಕೇವಲ ರೋಗ ಚಿಕಿತ್ಸೆ ಪದ್ಧತಿಯಾಗಿ ಉಳಿಯದೆ, ರೋಗ ಬರದಂತೆ ತಡೆಯುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ನಿಯಮಿತವಾದ ದಂತ ತಪಾಸಣೆ, ದಂತ ಶುಚಿಗೊಳಿಸುವಿಕೆ, ಹಲ್ಲು ತುಂಬಿಸುವಿಕೆಯಿಂದ ಹಲ್ಲು ಹುಳುಕಾಗದಂತೆ ಮಾಡುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಜೊತೆಗೆ ಸೌಂದರ್ಯ ವರ್ಧಕ ಚಿಕಿತ್ಸೆಯಾಗಿ ಬದಲಾಗಿದೆ. ಹಲ್ಲಿನ ಅಂದವನ್ನು ವಿನೀರ್, ಕಿರೀಟ(ಕ್ರೌನ್) ಮತ್ತು ಹೊಸತಾದ ಸಿಮೆಂಟ್ಗಳಿಂದ ತುಂಬಿಸಿ, ವ್ಯಕ್ತಿಯ ನಗುವಿನ ವಿನ್ಯಾಸವನ್ನೇ ಬದಲಿಸಿ, ಆತನ ಜೀವನದ ದೃಷ್ಟಿಕೋನವನ್ನೇ ಬದಲಾಯಿಸುವ ಕಾಲದಲ್ಲಿ ನಾವಿದ್ದೇವೆ. ಹಿಂಜರಿಕೆ, ಕೀಳರಿಮೆ ಹೋಗಿ ಹೊಸ ಆತ್ಮ ವಿಶ್ವಾಸ ಬಂದು, ಆ ವ್ಯಕ್ತಿಯ ಜೀವನದ ದೃಷ್ಟಿಕೋನ ಬದಲಾಗಿ, ಆತ್ಮ ವಿಶ್ವಾಸ ಹೆಚ್ಚಿ, ಹೊಸತಾದ ಮರುಜನ್ಮ ನೀಡಲಾಗುತ್ತದೆ. ಚಿಕಿತ್ಸೆಗೆ ಹೆಚ್ಚು ಒತ್ತು ನೀಡುತ್ತಿದ್ದ ದಂತ ಚಿಕಿತ್ಸಾ ಪದ್ಧತಿ ಈಗ ಹೆಚ್ಚು ರೋಗ ತಡೆಯುವ ಚಿಕಿತ್ಸೆಯಾಗಿ ಪರಿವರ್ತನೆಯಾಗಿದೆ. ದಂತ ಚಿಕಿತ್ಸಾಲಯಗಳು ಬದಲಾಗಿ ಈಗ ದಂತ ಸ್ಪಾಗಳು ಹುಟ್ಟಿಕೊಂಡಿದೆ. ಒಟ್ಟು ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಪರಿಪೂರ್ಣ ಬೆಳವಣಿಗೆಯಲ್ಲಿ ಹಲ್ಲುಗಳ ಪಾತ್ರ ಬಹಳ ಮುಖ್ಯವಾಗಿದೆ. ಒಟ್ಟಿನಲ್ಲಿ ಸುಂದರ ಸದೃಢವಾದ ಹಲ್ಲುಗಳು ಮನುಷ್ಯನ ಆತ್ಮ ವಿಶ್ವಾಸದ ಮತ್ತು ವ್ಯಕ್ತಿತ್ವದ ಪ್ರತೀಕ. ಸುಂದರವಾಗಿ ನಗಲು, ಆಹಾರ ಜಗಿಯಲು, ಸ್ಪಷ್ಟವಾಗಿ ಮಾತನಾಡಲು ಮತ್ತು ದೇಹದ ಆರೋಗ್ಯದ ಸಮತೋಲನವನ್ನು ಕಾಪಾಡಲು ಹಲ್ಲಿನ ಆರೋಗ್ಯ ಅತೀ ಅವಶ್ಯಕ. ಈ ನಿಟ್ಟಿನಲ್ಲಿ ವ್ಯಕ್ತಿಯ ಆರೋಗ್ಯ ಪಾಲನೆಯಲ್ಲಿ ದಂತ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಕೊನೆಮಾತು:
ಆರೋಗ್ಯ ಎಂದರೆ ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲ ಎಂಬ ಸತ್ಯವನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮಾತ್ರೆ ಅಥವಾ ಗುಳಿಗೆ ತಿಂದು ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿದರೆ ಅದು ಮೂರ್ಖತನದ ಪರಮಾವಧಿ “ Health is not absence of disease” “Health is enthusiasm to work” ರೋಗವಿಲ್ಲದವನೇ ಆರೋಗ್ಯವಂತ ಎನ್ನುವುದು ತಪ್ಪುಕಲ್ಪನೆ. ರೋಗವಿದ್ದರೂ ಜೀವನದಲ್ಲಿ ಉಲ್ಲಾಸ, ಉಲ್ಲಸಿತನಾಗಿ ಇರುವವನು ಮತ್ತು ತಾನು ಮಾಡುವ ಕೆಲಸದಲ್ಲಿ ಸಂತಸ ಮತ್ತು ನೆಮ್ಮದಿ ಪಡೆಯುವವನೇ ನಿಜವಾದ ಆರೋಗ್ಯವಂತ. ವಿಶ್ವ ಸಂಸ್ಥೆಯ ವರದಿ ಪ್ರಕಾರ ನಮ್ಮ ಭಾರತ ದೇಶದಲ್ಲಿ ಪ್ರತಿ 10 ರಲ್ಲಿ ಒಬ್ಬ ಮಧುಮೇಹ ಮತ್ತು 15 ರಲ್ಲಿ ಒಬ್ಬ ಅಧಿಕ ರಕ್ತದೊತ್ತಡ ಹೊಂದಿರುತ್ತಾನೆ. ಬರೀ ಆಸ್ಪತ್ರೆ ಕಟ್ಟಿಸಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದರೆ ಅದು ಭ್ರಮೆಯಾದೀತು. ವೈದ್ಯಕೀಯ ಕಾಲೇಜುಗಳನ್ನು ಇನ್ನಷ್ಟು ಹೆಚ್ಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ಉತ್ಪಾದಿಸಿ ದೇಶದ ಆರೋಗ್ಯವನ್ನು ವೃದ್ಧಿಸಬಹುದು ಎನ್ನುವುದೂ ಕೂಡಾ ಮೂರ್ಖತನ, ಈಗ ನಮಗೆ ಬೇಕಾಗಿರುವುದು ಶುದ್ಧ ಗಾಳಿ, ಶುದ್ಧ ನೀರು ಮತ್ತು ಸುಂದರ ಪರಿಸರ. ಎಲ್ಲರಿಗೂ ಶುದ್ಧ ನೀರು, ಕಲುಷಿತವಲ್ಲದ ಗಾಳಿ ಮತ್ತು ಆಹಾರ ದೊರಕಿ, ಜೊತೆಗೆ ಹಸಿರು ತುಂಬಿದ ಪರಿಸರ ನಿರ್ಮಿಸಿದರೆ, ಆರೋಗ್ಯವಂತ ಸಮಾಜ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಇಲ್ಲದಿದ್ದರೆ ಎಲ್ಲರಿಗೂ ಆರೋಗ್ಯ ಎನ್ನುವುದು ಮರಿಚಿಕೆಯಾಗಿಯೇ ಉಳಿಯಬಹುದು. ಜೀವನ ಶೈಲಿ ಬದಲಾವಣೆ, ಆಹಾರ ಪದ್ಧತಿ ಬದಲಾವಣೆ, ಪರಿಶುದ್ಧ ಪರಿಸರ ನಿರ್ಮಿಸಿದರೆ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಇದರ ಜೊತೆಗೆ ಎಲ್ಲ ವೈದ್ಯ ಪದ್ಧತಿಗಳಾದ ಆಯುರ್ವೇದ, ಹೊಮಿಯೋಪತಿ, ಯುನಾನಿ, ಅಲೋಪತಿ ಎಲ್ಲರೂ ಒಟ್ಟು ಸೇರಿ ಪರಸ್ಪರ ಪೂರಕವಾಗಿ ಕೆಲಸ ಮಾಡಿದರೆ ಮಾತ್ರ, ಸ್ವಾಸ್ಥ್ಯ ಭಾರತದ ನಿರ್ಮಾಣ ಸಾಧ್ಯವಾಗಬಹುದು.
ಡಾ|| ಮುರಲೀ ಮೋಹನ್‍ಚೂಂತಾರು MDS,DNB,MOSRCSEd(U.K), FPFA, M.B.A
ಮೊ : 9845135787 [email protected]