ಏನೋ ಮಾಡಿ ಏನೋ ಆದ ಪ್ರಚಂಡ ಕುಳ್ಳ

ಕನ್ನಡ ಚಿತ್ರರಂಗದಲ್ಲಿ ಕಳ್ಳ ಕುಳ್ಳ ಎಂದು ಖ್ಯಾತರಾಗಿದ್ದ ಜೋಡಿಯಲ್ಲಿ ಕುಳ್ಳ ದ್ವಾರಕೀಶ್ 81ರ ಪ್ರಾಯದಲ್ಲಿ ಈಗ ನಿಧನರಾಗಿದ್ದಾರೆ. ಪ್ರಚಂಡ ಕುಳ್ಳ ಇತ್ಯಾದಿ ಬಿರುದಾಂಕಿತ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಹಸ ಸಾಧಕರೂ ಹೌದು, ಗುಂಪುಗಾರಿಕೆಯನ್ನು ಸಾಧಿಸಿದವರೂ ಹೌದು. ಸಾಕಷ್ಟು ಯಶಸ್ಸು ಕಂಡರೂ ಕೊನೆಗೆ ಕಳೆದುಕೊಂಡುದೇ ಹಣೆಬರಹ. ಹಿಂದಿನ ಕಾಲದ 80 ಶೇಕಡಾಕ್ಕೂ ಹೆಚ್ಚು ನಟನಟಿಯರ ಪಾಡು ಇದೇ ಆಗಿತ್ತು.


ಈಗಿನ ನಟ ನಟಿಯರು ಬಹುತೇಕ ಹುಶಾರು. ಅವರು ಮುಖ್ಯವಾಗಿ ದೊಡ್ಡ ಹೋಟೆಲ್ ಮತ್ತಿತರ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಭಾರತದ ಮತ್ತು ಜಗತ್ತಿನೆಲ್ಲೆಡೆಯ ಚಿತ್ರರಂಗದಲ್ಲೂ ಇದೇ ಕತೆ. ಚಾರ್ಲಿ ಚಾಪ್ಲಿನ್‍ರನ್ನು ಕೊನೆಯ ದಿನಗಳಲ್ಲಿ ಅವರ ಕಾಲದ ನಟರು ನೀವು ಆಸ್ತಿ ಎಲ್ಲ ಹೇಗೆ ಉಳಿಸಿಕೊಂಡಿದ್ದೀರಿ ಎಂದು ಕೇಳಿದರು. ಅದಕ್ಕೆ ಚಾರ್ಲಿ ಚಾಪ್ಲಿನ್ ತನ್ನದೇ ಶೈಲಿಯಲ್ಲಿ ಆಸ್ತಿ ಕರಗಿಸುವುದನ್ನೇ ವೃತ್ತಿ ಮಾಡಿಕೊಂಡ ಸಂಸಾರಗಳಿಂದ ಕಳಚಿಕೊಂಡು ಹೊಸ ಸಂಸಾರ ಕಟ್ಟಿಕೊಳ್ಳುತ್ತ ಬಂದೆ ಎಂದು ಹೇಳಿದರಂತೆ.


ಚಾರ್ಲಿ ಚಾಪ್ಲಿನ್‍ರನ್ನು ಮಾದರಿಯಾಗಿಟ್ಟುಕೊಂಡ ನಟರು ಜಗತ್ತಿನೆಲ್ಲೆಡೆ ಕಂಡು ಬರುತ್ತಾರೆ. ಕನ್ನಡದಲ್ಲಿ ದ್ವಾರಕೀಶ್, ಗೋವಿಂದ ಮೊದಲಾದವರು ಚಾರ್ಲಿ ಮಾದರಿ ಬಗೆಗೆ ಹೇಳಿದ್ದಾರೆ. ಒಂದು ಕಾಲದಲ್ಲಿ ಯಾವುದೇ ರಂಗ ಪ್ರಯೋಗದಲ್ಲಿ ಅದು ನಾಟಕ, ಆಟ ಇಲ್ಲವೇ ದೈವ ಸೇವೆ ಎಲ್ಲದರಲ್ಲೂ ಹಾಸ್ಯದ ಒಂದು ಎಳೆಗೆ ಅವಕಾಶವಿತ್ತು. ನಾಟಕಗಳ ಮೇಲೆಯೆ ಸಿನಿಮಾಗಳು ಆರಂಭಗೊಂಡುದರಿಂದ ಅಲ್ಲೂ ಕೂಡ ಹಾಸ್ಯದ ಎಳೆ ಪ್ರಧಾನ ಕತೆಯೊಂದಿಗೆ ಹಾಸು ಹೊಕ್ಕಾಗಿ ಇಲ್ಲವೇ, ಒಡನಾಡಿಯಾಗಿ ಕೂಡಿಕೊಂಡಂತೆ ಬಂದಿದೆ.


ಎಲ್ಲ ಭಾಷೆಗಳಂತೆ ಕನ್ನಡದಲ್ಲೂ ಇದೇ ಶೈಲಿಯಲ್ಲಿ ಆಗೆಲ್ಲ ಸಿನಿಮಾಗಳು ಬಂದವು. ಕಳೆದ ಮೂರು ದಶಕಗಳಲ್ಲಿ ಕತೆ ಬದಲಾಯಿತು. ಹಾಸ್ಯ ಪಾತ್ರ ಬದಿಗೆ ಬಿದ್ದು, ನಾಯಕರೇ ಹಾಸ್ಯ ನಿಬಾಯಿಸುವುದು ಹೆಚ್ಚಾಯಿತು. ಹಾಗೆಯೇ ಪ್ರತ್ಯೇಕ ಕ್ಯಾಬರೆ ಕುಣಿತದ ಬದಲು ನಾಯಕಿಯರೆ ಆ ಕುಣಿತ ಮಾಡತೊಡಗಿದರು. ಆದರೂ ಹಾಸ್ಯದ ಕೊಂಡಿ ಮತ್ತು ಐಟಂ ಸಾಂಗ್ ಕುಣಿತದ ಕೊಂಡಿಗಳು ಅಲ್ಪ ಸ್ವಲ್ಪ ಉಳಿದುಕೊಂಡಿವೆ.
ಹಿಂದೆ ಹಾಸ್ಯ ಪಾತ್ರಕ್ಕೆ ಎಷ್ಟು ಮಹತ್ವವಿತ್ತೆಂದರೆ ಕನ್ನಡದಲ್ಲಿ ನರಸಿಂಹರಾಜು, ತಮಿಳಿನಲ್ಲಿ ನಾಗೇಶ್, ಹಿಂದಿಯಲ್ಲಿ ಮೆಹಮೂದ್ ಮೊದಲಾದವರ ಕಾಲ್‍ಶೀಟ್ ಕೂಡ ನಾಯಕ ನಟರ ಕಾಲ್‍ಶೀಟ್‍ನಷ್ಟೆ ಮುಖ್ಯವಾಗಿತ್ತು. ಕನ್ನಡ ಚಿತ್ರಲೋಕವನ್ನೇ ತೆಗೆದುಕೊಂಡರೆ ನೂರಾರು ಮಂದಿ ಹಾಸ್ಯ ನಟರು ಸಿಗುತ್ತಾರೆ, ಬಾಲ್‍ರಾಜ್, ಸಾಧುಕೋಕಿಲ ಎಂದೆಲ್ಲ ಪಟ್ಟಿ ಉದ್ದದ್ದು. ಚಾರ್ಲಿ ಚಾಪ್ಲಿನ್‍ರಂತೆ ಸಾಲು ಹಾಸ್ಯ ಚಿತ್ರಗಳಲ್ಲಿ ನಾಯಕ ಹಾಸ್ಯ ಪಾತ್ರಧಾರಿಯಾಗಿ ಮಿಂಚಿದವರು ಎಂದರೆ ಕಿಶೋರ್‍ಕುಮಾರ್.


ಹಾಸ್ಯ ಪಾತ್ರಧಾರಿಗೆ ನಾಯಕನಷ್ಟೇ ಮುಖ್ಯತ್ವವಿರುವಾಗ ಕನ್ನಡದಲ್ಲಿ ಮಿಂಚಿದ ಹೆಸರುಗಳು ಮೂರು. ಮೊದಲನೆಯದು ಬಾಲಕೃಷ್ಣ, ಎರಡನೆಯದು ನರಸಿಂಹರಾಜು ಮತ್ತು ಮೂರನೆಯದು ದ್ವಾರಕೀಶ್. ಬಾಲಕೃಷ್ಣ ಅವರು ಅನಂತರದ ದಿನಗಳಲ್ಲಿ ಪೋಷಕ, ಖಳ ಎಂದು ಎಲ್ಲ ಬಗೆಯ ಪಾತ್ರಗಳಲ್ಲೂ ಮಿಂಚಿದರು. ಹಾಗಾಗಿ ಅವರು ಹಾಸ್ಯ ಪ್ರಾಮುಖ್ಯತೆಯ ನಟ ಎಂಬುದು ಬದಿಗೆ ಬಿತ್ತು. ಅಲ್ಲದೆ ಅವರು ಆ ಕಾಲದ ರಾಜಕುಮಾರ್‍ರಿಗೆ ನಾಯಕಿಯರಾಗಿದ್ದ ಎಲ್ಲ ಪ್ರಮುಖ ನಟಿಯರೊಂದಿಗೆ ಜೋಡಿಯಾಗಿಯೂ ನಟಿಸಿ ತನ್ನದೇ ಒಂದು ಛಾಪು ಮೂಡಿಸಿಕೊಂಡಿದ್ದರು.
ನಾಯಕನಷ್ಟೇ ಹಾಸ್ಯಕ್ಕೆ ಪ್ರಾಮುಖ್ಯತೆಯಿದ್ದ ಕಾಲದ ಅತಿ ಮುಖ್ಯ ಹೆಸರು ನರಸಿಂಹರಾಜು ಅವರದು. ಕನ್ನಡದಲ್ಲಿ ಅವರಿಗೆ ಸರಿಯೆಣೆಯಾಗಿ ನಿಲ್ಲುವವರಿಲ್ಲ. ಅನಂತರದ ಕೊಂಡಿಯಾಗಿ ಬಂದವರೇ ದ್ವಾರಕೀಶ್. ಹಾಸ್ಯ ಪಾತ್ರಧಾರಿಯೂ ನಾಯಕನಷ್ಟೇ ಪ್ರಾಮುಖ್ಯ ಎಂಬ ಕಾಲದ ಕೊನೆಯ ಕೊಂಡಿ ದ್ವಾರಕೀಶ್. ನಟ, ನಿರ್ದೇಶಕರಾಗಿದ್ದ ಹುಣಸೂರು ಕೃಷ್ಣಮೂರ್ತಿಯವರ ಸೋದರಳಿಯ ಆಗಿದ್ದ ದ್ವಾರಕೀಶ್ ಸುಲಭದಲ್ಲೇ ಮಾವನ ವೀರ ಸಂಕಲ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.


ಮೈಸೂರಿನಲ್ಲಿ ಅಣ್ಣನೊಂದಿಗೆ ಪಾಲುದಾರಿಕೆಯ ಆಟೋ ಬಿಡಿಭಾಗಗಳ ಅಂಗಡಿ ಹೊಂದಿದ್ದ ದ್ವಾರಕೀಶ್ 1964ರಲ್ಲೇ 2,000 ರೂಪಾಯಿ ತಂದು ಇತರ 2,000 ರೂಪಾಯಿ ಹಾಕುವ ಆರು ಜನರೊಂದಿಗೆ ಸೇರಿಕೊಂಡು ಮಮತೆಯ ಬಂಧನ ಎಂಬ ಚಿತ್ರವನ್ನು ನಿರ್ಮಿಸಿಯೇ ಬಿಟ್ಟರು. ಉಳಿದುದೆಲ್ಲ ತೀರಿಸದ ಉದುರಿ. ಆಮೇಲೆ ರಾಜಕುಮಾರ್ ನಾಯಕರಾಗಿದ್ದ ಮೇಯರ್ ಮುತ್ತಣ್ಣ ನಿರ್ಮಿಸಿ ಹಣದ ಕುಯಿಲು ಮಾಡಿದರು.
ಇಷ್ಟು ಹೊತ್ತಿಗೆ ನಿರ್ಮಾಪಕರು ಮೋಸ ಮಾಡುತ್ತಿರುವುದು ಪಾರ್ವತಮ್ಮನವರಿಗೆ ತಿಳಿದು ಹೋಗಿ ಅವರೇ ರಂಗಕ್ಕೆ ಇಳಿದರು. ಮುಕ್ಕಾಲು ಶತಕ ಚಿತ್ರ ನಿರ್ಮಿಸಿದ್ದ ಪಾರ್ವತಮ್ಮನವರು ದ್ವಾರಕೀಶ್ ಸಹಿತ ಮುಂದೆ ಹಲವರಿಗೆ ರಾಜ್‍ಕುಮಾರ್ ಅವರ ಕಾಲ್‍ಶೀಟ್ ನೀಡಲಿಲ್ಲ. ಈ ಕಾರಣಕ್ಕೆ ವಿಷ್ಣವರ್ಧನ್, ಅನಂತನಾಗ್ ಮೊದಲಾದವರು ಹೆಚ್ಚುವರಿ ಚಿತ್ರಗಳಲ್ಲಿ ಅವಕಾಶ ಪಡೆಯುವುದು ಸಾಧ್ಯವಾಯಿತು ಎನ್ನುವುದು ಬೇರೆಯೇ ಇತಿಹಾಸ.


ಈ ಅವಧಿಯಲ್ಲಿ ಕುಳ್ಳ ಏಜೆಂಟ್ ದ್ವಾರಕೀಶ್ ತಾನೇ ನಾಯಕ ನಟನಾಗಿ ಕೆಲವು ಚಿತ್ರಗಳಲ್ಲಿ ಮಿಂಚಿದ್ದು ದಾಖಲಾಗಬೇಕಾದ ಅಂಶವಾಗಿದೆ. ದ್ವಾರಕೀಶ್ ಗುಂಪುಗಾರಿಕೆ ಬಲಿತದ್ದು ಈ ಹಂತದಲ್ಲಿ. ಅದು ಎಷ್ಟಿತ್ತು ಎನ್ನುವುದಕ್ಕೆ ಹಲವು ಉದಾಹರಣೆ ಇದ್ದರೂ ಒಂದನ್ನು ಹೇಳಬಹುದು. ಕೆಲವು ಚಿತ್ರ ಸೋತಾಗ ಅವರು ರಜನಿಕಾಂತ್‍ರನ್ನು ನೋಡಲು ಹೋಗಿದ್ದರು. ಇವರ ಗುಂಪುಗಾರಿಕೆ ತಿಳಿದಿದ್ದ ರಜನಿಕಾಂತ್ ದ್ವಾರಕೀಶ್‍ರನ್ನು ಮನೆಯಿಂದ ಹಾಗೆಯೇ ಓಡಿಸಿದ್ದರು ಎಂಬುದು ಚಿತ್ರರಂಗದವರೆಲ್ಲರೂ ತಿಳಿದಿದ್ದ ಸಂಗತಿಯಾಗಿತ್ತು. ಹಾಸ್ಯ ನಟ ಆಗಿದ್ದ ದ್ವಾರಕೀಶ್ ಕೂಡ ತಮಾಷೆಯಾಗಿ ಮನೆಗೆ ಹೋದರೆ ಓಡಿಸಿ ಬಿಡೋದೆ ಎಂದು ಹೇಳುತ್ತಿದ್ದರು.


ಆಪರೇಶನ್ ಡೈಮಂಡ್ ರಾಕೆಟ್ ನೇಪಾಳದಲ್ಲಿ ಚಿತ್ರೀಕರಣ ಕಂಡಿತ್ತು. ಆದರೆ ನಿಜವಾಗಿ ವಿದೇಶದಲ್ಲಿ ಮೊದಲು ಕನ್ನಡ ಚಿತ್ರ ಚಿತ್ರೀಕರಣ ನಡೆಸಿ ಸಿಂಗಾಪುರದಲ್ಲಿ ರಾಜಾ ಕುಳ್ಳ ಎಂದವರು ಈ ದ್ವಾರಕೀಶ್. ಆಮೇಲೆ ಆಫ್ರಿಕಾದಲ್ಲಿ ಶೀಲಾ ಮಾಡಲು ಹೋಗಿ ಕೈ ಕಾಲಿ ಮಾಡಿಕೊಂಡರು. ಒಂದು ರೀತಿಯ ವಿಚಿತ್ರ ಸ್ವಭಾವದ ದ್ವಾರಕೀಶ್ ಅರ್ಧ ಶತಕದಷ್ಟು ಚಿತ್ರ ನಿರ್ಮಿಸಿದರೂ ತನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ಸೋದರ ಮಾವ ಹುಣಸೂರು ಕೃಷ್ಣಮೂರ್ತಿಯವರಿಗೆ ಎಂದೂ ಕೆಲಸ ಕೊಟ್ಟಿಲ್ಲ.


ಎಲ್ಲ ಮುಗಿದ ಮೇಲೆ ಅವರು ಈ ಬಗೆಗೆ ಅಲವತ್ತುಕೊಂಡಿದ್ದರು. ಒಮ್ಮೆ ಹಣ ಕಾಣುವುದು, ಮತ್ತೆ ಎಡವುವುದು ಕುಳ್ಳನ ಚಿತ್ರ ಇತಿಹಾಸ. ಕೆಲವು ಯಶಸ್ಸು ಕಂಡರೂ ತಾನೇ ನಾಯಕನಾಗಬೇಕು ಎಂಬ ತೆವಲಿನಲ್ಲಿ ಕಳೆದುಕೊಂಡುದು ಹೆಚ್ಚು. ಮುಖ್ಯವಾಗಿ ತೆಲುಗಿನ ಪರಮಾನಂದಯ್ಯ ಶಿಷ್ಯುಲ ಕತಾದಿಂದ ಹಿಡಿದು ಮರು ನಿರ್ಮಾಣದ ಚಿತ್ರಗಳಲ್ಲೇ ದ್ವಾರಕೀಶ್ ಹೆಚ್ಚು ಯಶಸ್ಸು ಕಂಡವರು.


ಹೆಂಡತಿಯ ಊರಿನ ಪರಿಚಯದಿಂದ ಕೇಂದ್ರ ಮಂತ್ರಿಯಾಗಿದ್ದ ಜಾಫರ್ ಷರೀಫ್ ಮೊದಲಾದವರಿಂದ ಧನ ಸಹಾಯ ಪಡೆದರೂ ವೆಚ್ಚ ನಿಲ್ಲಿಸದ ದ್ವಾರಕೀಶ್ ಸ್ಥಿತಿ ಸುದಾರಿಸಲೇ ಇಲ್ಲ. ಮಕ್ಕಳನ್ನು ನಾಯಕರಾಗಿಸುವಲ್ಲಿ ಪೂರ್ಣ ವಿಫಲರಾದ ದ್ವಾರಕೀಶ್ ಚಿತ್ರರಂಗದ ಚದುರಂಗದಾಟದಲ್ಲಿ ಚೌಕಕ್ಕೆ ಮಾತ್ರ ಸೀಮಿತವಾದವರಲ್ಲ ಎನ್ನುವುದು ಮಾತ್ರ ಸತ್ಯ.


ಬರಹ: ಪೇರೂರು ಜಾರು, ಹಿರಿಯ ಸಂಪಾದಕರು

Related Posts

Leave a Reply

Your email address will not be published.