ಹೊಸ ಬದುಕು ಹುಟ್ಟುವ ಈಸ್ಟರ್ ಮೊಟ್ಟೆ

ನಲವತ್ತು ದಿನಗಳ ಉಪವಾಸದ ಬಳಿಕ ಯೇಸು ಕ್ರಿಸ್ತನ ಪುನರುತ್ಥಾನವನ್ನು ಕ್ರಿಶ್ಚಿಯನರು ಮನೆ ಮನ ತುಂಬಿಕೊಳ್ಳುವ ಹಬ್ಬ ಈಸ್ಟರ್. ಯೇಸು ಕ್ರಿಸ್ತನು ನಲವತ್ತು ದಿನಗಳ ಜಪ ತಪಗಳಲ್ಲಿ ಕಳೆದ ಉಲ್ಲೇಖ ಬೈಬಲಿನ ಹೊಸ ಒಡಂಬಡಿಕೆಯಲ್ಲಿ ಇದೆ. ಬೂದಿ ಬುಧವಾರದಿಂದ ಶುಭ ಶುಕ್ರವಾರದವರೆಗೆ ಉಪವಾಸ. ಇದು ವಸಂತ ಕಾಲದಲ್ಲಿ ಬರುತ್ತದೆ. ಇದರ ಮುಖ್ಯ ಉದ್ದೇಶ ದೇಹ ದಂಡನೆ. ಆ ಮೂಲಕ ಬದುಕಿನ ತಪ್ಪುಗಳಿಂದ ತಪ್ಪಿಸಿಕೊಳ್ಳುವುದು. ಪ್ರಕೃತಿದತ್ತ ಮಿತಾಹಾರ ಸೇವೆನೆಗೆ ಆದ್ಯತೆ. ಕಾಲ ಬದಲಾದಂತೆ ಬೂದಿ ಬುಧವಾರ ಶುಭ ಶುಕ್ರವಾರಕ್ಕೆ ಬಹುತೇಕರ ಉಪವಾಸ ವ್ರತಾಚರಣೆ ಮಿತಗೊಂಡಿದೆ.

ಯೇಸು ಕ್ರಿಸ್ತರು ಸತ್ತು ಬದುಕಿದರು ಎಂಬುದು ನಂಬಿಕೆ. ಅವರು ತೀವ್ರ ಗಾಯಗೊಂಡು ಪ್ರಜ್ಞೆ ತಪ್ಪಿದ್ದರು. ಉಪಚಾರದಿಂದ ಮತಿ ತಿಳಿದೆದ್ದರು ಎಂಬುದು ವೈಜ್ಞಾನಿಕರ ಅಭಿಮತ. ಯೇಸು ಕ್ರಿಸ್ತ ಚಾರಿತ್ರಿಕ ವ್ಯಕ್ತಿಯಾಗಿದ್ದು, ಉಳಿದಂತೆ ಎರಡು ಸಾವಿರ ವರುಷಗಳಿಂದ ಸಾಕಷ್ಟು ನಂಬಿದವರ ಮನೋಭಿಲಾಷೆಗಳು ಆ ಚರಿತ್ರೆಯೊಳಕ್ಕೆ ಸೇರಿಕೊಂಡಿವೆ. ರೋಮನರಲ್ಲಿ ಒಂದು ಕೆಟ್ಟ ಅಭ್ಯಾಸವಿತ್ತು. ಮೂಗಿನ ಮಟ್ಟ ತಿನ್ನುವುದು. ಆ ಮೇಲೆ ಒಳ ನಾಲಗೆಗೆ ಕೈ ಹಾಕಿ ಅದನ್ನು ವಾಂತಿ ಮಾಡುವುದು. ಇತಿಹಾಸದಲ್ಲಿ ದಾಖಲಾಗಿರುವ ಸಂಗತಿ ಇದು.

ಕ್ರೈಸ್ತ ಧರ್ಮವು ಮೊದಲು ಅಧಿಕೃತಗೊಂಡುದು ರೋಮನರಿಂದ. ಅವರು ತಮ್ಮ ಭೂರಿ ಭೋಜನದ ಚಟವನ್ನು ಬಿಡಲು ಕ್ರಿಸ್ತನ ನಲವತ್ತು ದಿನಗಳ ಉಪವಾಸ ಮಾರ್ಗವನ್ನು ತಮ್ಮ ಮಾರ್ಗವಾಗಿಸಿಕೊಂಡು ಸುಧಾರಿಸಿಕೊಂಡಂತೆ ಕಾಣುತ್ತದೆ. ಆ ಮೂಲಕ ಎಲ್ಲರಿಗೂ ಆಹಾರ, ಎಲ್ಲರಿಗೂ ವಸಂತ. ದೇಹ ಮತ್ತು ಆಹಾರದ ದುರುಪಯೋಗ ತಡೆಯುವುದು ಈ ಉಪವಾಸದೊಳಗಿನ ತಥ್ಯ ಎಂದು ಕಂಡು ಬರುತ್ತದೆ. ಅದು ಇಂದಿಗೂ ಸತ್ಯವಾಗಬೇಕಾಗಿದೆ. ನಗರಗಳಲ್ಲಿ ಕೆಲವರು ಆಹಾರವನ್ನು ತಿಪ್ಪೆಗೆ ಎಸೆದರೆ ಕೆಲವರು ಅರೆಹೊಟ್ಟೆಯಲ್ಲಿ ದಿನ ದೂಡುತ್ತಾರೆ. ಈ ನಗರ ಸಂಸ್ಕøತಿ ಈಗ ಹಳ್ಳಿಗಳಿಗೂ ಹಬ್ಬುತ್ತಿದೆ. ಅದನ್ನು ತಡೆಯುವಲ್ಲೂ ಈ ಉಪವಾಸ ಸಹಕಾರಿ. ಮುಸ್ಲಿಮರ ರಮದಾನ್ ಉಪವಾಸ, ಕೆಲವು ಜನ ಸಮುದಾಯದ 48 ದಿನಗಳ ಉಪವಾಸದ ನಂಬಿಕೆ, ಹಿಂದೂ ಮಂದಿಯ ಉಪವಾಸ ಎಂದು ಎಲ್ಲ ಉಪವಾಸಗಳ ಮೂಲ ತಿರುಳು ಒಂದೇ ಆಗಿರಬೇಕು. ಶಿಲುಬೆಗೇರಿಸಿದರೂ ಮತ್ತೆ ಪುನರುತ್ಥಾನ ಆದ ಮರು ಹುಟ್ಟು ಎನ್ನುವುದು ಉಪವಾಸ ಮತ್ತು ಊಟ, ವನವಾಸ ಮತ್ತು ವಸಂತ ಮಾಸ ಇವುಗಳ ಮುಖಗಳನ್ನು ಅರ್ಥ ಮಾಡಿಕೊಳ್ಳಲು ತೆರೆದುಕೊಳ್ಳುವ ದಾರಿಗಳಾಗಿವೆ. ಈಸ್ಟರ್ ಎಂದಾಗ ಎರಡು ಮುಖ್ಯವಾಗಿ ನೆನಪಾಗುತ್ತವೆ. ಒಂದು ಈಸ್ಟರ್ ದ್ವೀಪ ಮತ್ತು ಇನ್ನೊಂದು ಈಸ್ಟರ್ ಮೊಟ್ಟೆ. ಈ ಈಸ್ಟರ್ ಎಂಬುದರ ನಿಜವಾದ ಮೂಲ ಉಚ್ಚಾರ ಈಸ್ಟುಹ್ ಎಂಬುದಾಗಿದೆ ಎಂದು ತಿಳಿದು ಬರುತ್ತದೆ.

ಅದು ಸರಿ, ಏನಿದು ಈಸ್ಟರ್ ದ್ವೀಪ. ಶಾಂತ ಸಾಗರದಲ್ಲಿರುವ ಈಸ್ಟರ್ ದ್ವೀಪವು ಚಿಲಿ ದೇಶಕ್ಕೆ ಸೇರಿದೆ, ಇದನ್ನು ಸ್ಪಾನಿಶ್ ಭಾಷೆಯಲ್ಲಿ ಐಸ್ಲ್ವೋ ಪಾಸ್ಕ್ವಾ ಎಂದು, ಸ್ಥಳೀಯವಾಗಿ ರಪಾ ನುಯಿ ಎಂದೂ ಕರೆಯುತ್ತಾರೆ. ಇದು ಚಿಲಿ ದೇಶದ ವಿಶೇಷ ಸ್ಥಾನಮಾನದ ಪ್ರದೇಶವೆನಿಸಿದೆ. ಈ ದ್ವೀಪವು ಭಾರೀ ಆಕಾರದ ಹಲವು ಮೂರ್ತಿಗಳಿಂದಾಗಿ ಜಗತ್ತಿನ ಗಮನ ಸೆಳೆದಿದೆ. ಇಂತಾ 1,000ದಷ್ಟು ಮೂರ್ತಿಗಳು ಇಲ್ಲಿ ಇವೆ. ವಿಶ್ವ ಸಂಸ್ಥೆಯು 1955ರಲ್ಲಿ ಈ ದ್ವೀಪವನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಣೆ ಮಾಡಿದೆ. ಇಲ್ಲಿನ ಜನರು ಮೋಅಯಿಗಳು.

ಕ್ರಿಸ್ತ ಶಕ 8ನೇ ಶತಮಾನದಲ್ಲಿ ಈ ದ್ವೀಪಕ್ಕೆ ಯಾವುದೋ ಕಾರಣದಿಂದ ಕೆಲವರು ಬಂದು ಸೇರಿದರೆಂದು ಹೇಳಿಕೆ. ದಾರಿ ತಪ್ಪಿ, ಹಡಗು ಮುಳುಗಿ ಇಲ್ಲವೇ ಅನ್ವೇಷಿಸುತ್ತ. ಹಾಗೆ ಬಂದವರು ಪಾಲಿನೇಶಿಯನರು ಎನ್ನಲಾಗುತ್ತದೆ. ಆದರೆ ಅದನ್ನು ಕೆಲವರು ಒಪ್ಪುವುದಿಲ್ಲ. 1722ರಲ್ಲಿ ಯೂರೋಪಿಯನರು ಈ ದ್ವೀಪಕ್ಕ ಬಂದಾಗ ದ್ವೀಪವಾಸಿಗಳ ಜನಸಂಖ್ಯೆ 2,500ರಷ್ಟಿತ್ತು. ಮುಂದೆ ಪೆರುವಿನ ದಸ್ಯು ವ್ಯಾಪಾರಿಗಳ ದಾಳಿಯಿಂದ ಮೂಲ ಜನರ ಸಂಖ್ಯೆಯು 1877ರ ಹೊತ್ತಿಗೆ 110ಕ್ಕೆ ಇಳಿದಿತ್ತು. 1888ರಲ್ಲಿ ಇದು ಚಿಲಿ ದೇಶದ ಭಾಗವಾಯಿತು. ಈಗ ಈಸ್ಟರ್ ದ್ವೀಪದಲ್ಲಿ 7,750 ಜನರು ಇದ್ದಾರೆ. ಅವರಲ್ಲಿ 3,512 ಮಂದಿ ಮೂಲ ನಿವಾಸಿಗಳು ಎನ್ನಲಾಗಿದೆ.

1722ರ ಏಪ್ರಿಲ್ 5, ಈಸ್ಟರ್ ಹಬ್ಬದಂದು ಜಾಕೋಬ್ ರಾಗ್ಗೊವೀನ್ ಎಂಬ ಡಚ್ಚರವನು ಇಲ್ಲಿಗೆ ಬಂದ ಮೊದಲ ಯೂರೋಪಿಯನ್. ಇದನ್ನು ಈಸ್ಟರ್ ಐಲ್ಯಾಂಡ್ ಎಂದು ಕರೆದವನು ಅವನು. ಈ ದ್ವೀಪಕ್ಕೆ ಮೊದಲು ದೋಣಿಗಳಲ್ಲಿ ಬಂದವರು ಕುಕ್ ದ್ವೀಪದ ಪಾಲಿನೇಶಿಯನರು. ಆದರೆ ಅವರ ಆಗಮನ ಕ್ರಿಶ್ತ ಶಕ ಮೂರನೆಯ ಶತಮಾನದಿಂದ ಎಂಟನೆಯ ಶತಮಾನದವರೆಗೆ ಆಯಿತು ಎಂಬುದು ಹೊಸ ಅಧ್ಯಯನವಾಗಿದೆ. ಗ್ಯಾಂಬಿಯರ್, ಮಾರ್ಕ್ಯೂಸ್ ದ್ವೀಪದಿಂದಲೂ ಬಂದಿರಬೇಕು. ಅವೆಲ್ಲ ಎರಡೂವರೆ ಸಾವಿರ ಕಿಲೋಮೀಟರಿನಷ್ಟು ದೂರ ಇವೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

ಒಬ್ಸಿಡಿಯನ್ ಎಂಬ ಜ್ವಾಲಾಮುಖಿ ಶಿಲೆಯ ಗಾಜು ಬಾಯಿಯ ಕಲ್ಲು ಬಳಸಿ ಬಸಾಲ್ಟ್‍ನಂಥ ಗಟ್ಟಿ ಶಿಲೆಗಳನ್ನು ಕತ್ತರಿಸಿ ಮೂರ್ತಿಗಳನ್ನು ರಚಿಸಿದ್ದಾರೆ. ಬಹುತೇಕ ದೊಡ್ಡ ಗಾತ್ರದ ಎದೆಯ ಮೇಲಿನ ಭಾಗದ ಮಾನವ ಮೂರ್ತಿಗಳು. ಸೂಕ್ಷ್ಮ ಕೆತ್ತನೆಗಳ ಸಲಕರಣೆಗಳು ಇರಲಿಲ್ಲವಾದ್ದರಿಂದ ಕುಸುರಿ ಕೆಲಸಗಳು ಈ ಶಿಲೆಗಳಲ್ಲಿ ಕಂಡು ಬರುವುದಿಲ್ಲ. ಮೂರ್ತಿಗಳನ್ನು ಕೆತ್ತುವಾಗ ಚೌಕ ಆಯತ ರಚನೆಯನ್ನು ಹೆಚ್ಚಾಗಿ ನೆಚ್ಚಿಕೊಳ್ಳಲಾಗಿದೆ. ಉದಾಹರಣೆಗೆ ಚೌಕದ ಮುಖ, ಹಣೆ, ಆಯತದ ಎದೆ ಇತ್ಯಾದಿ. ಮೊದಲಿಗೆ ಇವೆಲ್ಲ ಭಾರೀ ಗಾತ್ರದವು ಎಂದು ತಿಳಿದಿರಲಿಲ್ಲ. ನೆಲದಾಳದಲ್ಲಿ ಅರ್ಧ ಮುಕ್ಕಾಲು ಹೂತಿದ್ದ ಮೂರ್ತಿಗಳನ್ನು ಮೇಲೆತ್ತಿದ ಮೇಲೆಯೇ ಅವುಗಳ ಗಾತ್ರಗಳು ಸ್ಪಷ್ಟಗೊಂಡುದು.

ಆಹು ಎಂಬ ಕಲ್ಲಿನ ವೇದಿಕೆ ಇದ್ದು, ಅಲ್ಲಿ ಸಾಲಾಗಿ ಮೂರ್ತಿಗಳನ್ನು ಇಟ್ಟ ರಚನೆಗಳೂ ಇವೆ. ಕಲ್ಲಿನ ಗೋಡೆ, ಕಲ್ಲಿನಲ್ಲಿ ರೇಖಾಚಿತ್ರ, ಮುಖ್ಯವಾಗಿ ರೋಂಗೋರೋಂಗೋ ಎಂಬ ಲಿಪಿ ಕೂಡ ಕಲ್ಲಿನಲ್ಲಿ ಕೆತ್ತಿ ಬಳಕೆಯಲ್ಲಿತ್ತು. ಈ ಚಿತ್ರ ಲಿಪಿಯ ಸಾಹಿತ್ಯ ಯಾವುದೂ ಸಿಕ್ಕಿಲ್ಲ. ಈ ಬರವಣಿಗೆ ಬಳಕೆಯಲ್ಲೂ ಉಳಿದಿಲ್ಲ. ಆಳುವವರು ಆ ಕಾಲದಲ್ಲಿ ಕೆಲವು ಸಂದೇಶ ನೀಡಿರಬಹುದು ಎನ್ನಲಾಗಿದೆ. ಇನ್ನು ಈಸ್ಟರ್ ಬಂದರೆ ಬಣ್ಣದ ಈಸ್ಟರ್ ಮೊಟ್ಟೆಗಳ ಅಲಂಕಾರ, ಪ್ರದರ್ಶನ ನಡೆಯುತ್ತಿರುತ್ತದೆ.

ಕೋಳಿ ಮೊಟ್ಟೆಗೆ ಸಣ್ಣ ತೂತು ಮಾಡಿ ಒಳ ಲೋಳೆಗಳನ್ನೆಲ್ಲ ತೆಗೆದೆಸೆದು. ಮೊಟ್ಟೆಯ ಹೊರಾವರಣವನ್ನು ಗಾಢ ಬಣ್ಣದಿಂದ ಇಲ್ಲವೇ ಬಣ್ಣದ ಚಿತ್ರದಿಂದ ಅಲಂಕರಿಸುತ್ತಿದ್ದರು. ಇದು ವಸಂತ ಮಾಸದ ಫಲಗಳಿಗೆ ಸೂಚಕವಾಗಿದೆ. ಮುಂದೆ ಕೆಲವರಲ್ಲಿ ಇದು ಸಂಪತ್ತಿನ ಕುರುಹಾಗಿ ಕುಸುರಿ ಕೆತ್ತನೆಯ ಚಿನ್ನದ, ಬೆಳ್ಳಿಯ ಈಸ್ಟರ್ ಮೊಟ್ಟೆಯಾಗಿ ಬಂದುದೂ ಇದೆ. ಆಧುನಿಕವಾಗಿ ಈಸ್ಟರ್ ಮೊಟ್ಟೆಯೆಂಬುದು ಚಾಕಲೇಟ್ ಆಗಿರುವುದೇ ಹೆಚ್ಚು. ಮೊಟ್ಟೆಯಿಂದ ಮರಿ ಎಂದರೆ ಹೊಸ ಜೀವನ ಆರಂಭ ಎನ್ನುವುದು ಇದರ ಮೂಲ ಅರ್ಥ. ಚಾಕೊಲೇಟ್ ಈಸ್ಟರ್ ಮೊಟ್ಟೆ ತಿಂದು ಹೊಸ ಕಾಲವನ್ನು ಇಂದೆಲ್ಲ ಆನಂದಿಸಬಹುದು. ಹೊಸತು ಎನ್ನುವುದು ಹಳತು ಮೊಟ್ಟೆಯಿಂದ ಕಳಚಿ ಬರುವುದೂ ಇದರ ಸಂದೇಶವಾಗಿದೆ.

,,,,,,,,,,,,,,,,,,,,,,,,,,,,,,,

ಬರಹ: ಪೇರೂರು ಜಾರು, ಹಿರಿಯ ಸಂಪಾದಕರು

Related Posts

Leave a Reply

Your email address will not be published.