ಮತ ಗರ್ಜನೆಯ ಗೃಹಿಣಿ

ಹದಿನೆಂಟನೆಯ ಲೋಕ ಸಭೆಗೆ ಚುನಾವಣೆ ಪ್ರಕ್ರಿಯೆ ಮುಂದುವರಿದಿದೆ. ಭಾರತದಲ್ಲಿ ಚುನಾವ್ ಎಂದರೆ ಆಯ್ಕೆ ಎಂಬ ಶಬ್ದದಿಂದ ಈ ಚುನಾವಣೆ ಎಂಬ ಶಬ್ದವನ್ನು ಕನ್ನಡದವರು ಎರವಲು ಪಡೆದುಕೊಂಡಿದ್ದಾರೆ. ಆಯ್ಕೆ, ಅಜಪು, ತೇರ್ವು, ತೇರ್ಗಡೆ ಮೊದಲಾದ ದ್ರಾವಿಡ ನುಡಿಗಳಿದ್ದು ಅವುಗಳಿಂದಲೇ ತಮ್ಮ ನುಡಿ ಟಂಕಿಸಿಕೊಳ್ಳಲಾಗದ ಶಬ್ದ ಬ್ರಹ್ಮರೆಲ್ಲ ಕನ್ನಡದಲ್ಲಿ ಬಂದು ಹೋಗಿದ್ದಾರೆ. ಅದು ಅಲ್ಲೇ ಇರಲಿ ಈ ಚುನಾವಣೆ ಎಲ್ಲಿ, ಯಾವಾಗ ಆರಂಭವಾಯಿತು; ಏಕೆ ಆರಂಭವಾಯಿತು ಎಂದು ತಿಳಿಯುವುದು ಮುಖ್ಯ.


ಕ್ರಿಸ್ತ ಪೂರ್ವ 508ರಲ್ಲಿ ಈ ಚುನಾವಣಾ ಪ್ರಕ್ರಿಯೆ ಗ್ರೀಸ್‍ನಲ್ಲಿ ಆರಂಭವಾಗಿದೆ. ಆಗ ಗಂಡಸು ಭೂ ಒಡೆಯರು ಮಾತ್ರ ಮತ ಚಲಾಯಿಸಿ ತಮ್ಮ ಕ್ಯಾಂಡಿಡೇಟ್‍ಗಳನ್ನು 10 ವರುಷದ ಅವಧಿಗೆ ಆಯ್ಕೆ ಮಾಡುತ್ತಿದ್ದರು. ಗ್ರೀಸಿನಲ್ಲಿ ಮೊದಲು ಓಸ್ಟ್ರಕ ಎಂಬ ಮಡಕೆಗೆ ಹೀಗೆ ಮತಪತ್ರ ಹಾಕುತ್ತಿದ್ದರು. ಅದು ಗಂಡಸರದೇ ಅಧಿಕಾರವಾಗಿದ್ದು, ಹೆಣ್ಣುಮಕ್ಕಳಿಗೆ ಗೃಹಿಣಿ ಪಟ್ಟ ಮಾತ್ರ ಇದ್ದ ಚುನಾವಣೆ. 13ನೇ ಶತಮಾನದಲ್ಲಿ ವೆನಿಸ್‍ನ 40 ಸದಸ್ಯರ ಆಡಳಿತ ವ್ಯವಸ್ಥೆಗೆ ಆಧುನಿಕ ರೀತಿಯ ಮತದಾನ ನಡೆದಿದೆ.


1776ರಲ್ಲಿ ಅಮೆರಿಕದಲ್ಲಿ 21 ದಾಟಿದವರಿಗೆ ಮತದಾನದ ಹಕ್ಕು ಆರಂಭವಾಯಿತು. ಆಗಲೂ ಕತೆ ಅದೇ. ಗಂಡಸರಿಗೆ ಮಾತ್ರ ಮತದಾನದ ಹಕ್ಕು, ಅದೂ ಬಿಳಿಯರಿಗೆ ಮಾತ್ರ ಕರಿಯ ಗಂಡಸರಿಗೆ ಇಲ್ಲ. ಹೆಂಗಸರು ಯಥಾಪ್ರಕಾರ ಗೃಹಿಣಿ. 1860ರ ಯುಎಸ್‍ಎ ಅಂತರ್ಯುದ್ಧದ ಬಳಿಕ ಅಮೆರಿಕದಲ್ಲಿ ಕರಿಯ ಗಂಡಸರು ಕೂಡ ಮತದಾನದ ಹಕ್ಕು ಪಡೆದರು. ಮಹಿಳೆ ಮನೆಯೊಡತಿ. ಕಡೆಗೂ 1920ರಲ್ಲಿ 19ನೇ ತಿದ್ದುಪಡಿಯ ಮೂಲಕ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮಹಿಳೆಯರು ಮತದಾನದ ಹಕ್ಕು ಪಡೆದರು. 1971ರಲ್ಲಿ ಸ್ವಿಜರ್‍ಲ್ಯಾಂಡಿನಲ್ಲಿ ಮಹಿಳೆಯರು ಮತದಾನದ ಹಕ್ಕು ಪಡೆಯುವವರೆಗೆ ಈ ಮಹಿಳಾ ಮತದಾನದ ಹಕ್ಕಿನ ಹೋರಾಟ ಜಗತ್ತಿನ ನಾನಾ ಕಡೆ ನಡೆದಿದೆ.


1971ರಲ್ಲಿ ವಿಯೆಟ್ನಾಂ ಯುದ್ಧ ಕಾಲದಲ್ಲಿ ಮಿಲಿಟರಿ ಹಿತ ದೃಷ್ಟಿಯಿಂದ ಅಮೆರಿಕವು ಮತದಾನದ ಹಕ್ಕಿನ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿತು. ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು 1988ರಲ್ಲಿ ಭಾರತದಲ್ಲಿ ಮತದಾನದ ಹಕ್ಕಿನ ಪ್ರಾಯವನ್ನು 21ರಿಂದ 18ಕ್ಕೆ ಇಳಿಸಿದರು. ಇದು ಜಗತ್ತಿನ ಬಹುತೇಕ ಕಡೆ ನಡೆದಿದೆ, ಕೆಲವು ಕಡೆ ಈಗಲೂ ಮತದಾನಕ್ಕೆ 21ರ ಪ್ರಾಯ ಆಗಲೇಬೇಕು. 18ರ ಪ್ರಾಯದವರು ಇನ್ನೂ ನಾಯಕನ ಆಯ್ಕೆ ಮಾಡುವಷ್ಟು ಪ್ರಬುದ್ಧರಲ್ಲ ಎನ್ನುವುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಯುವಜನರ ಮತದಾನವೇ ಕೆಲವರಿಗೆ ಜೀವಾಳ ಎನ್ನುವವರಿಗೇನೂ ಕೊರತೆಯಿಲ್ಲ.


ಏನೇ ಇದ್ದರೂ ಎಥೆನ್ಸ್ ಮತ್ತು ರೋಮ್ ನಗರಗಳೇ ಚುನಾವಣೆಯ ಮೂಲಕ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡ ಮೊದಲಿಗರು ಎಂಬುದರಲ್ಲಿ ಎರಡು ಮಾತಿಲ್ಲ. 17ನೇ ಶತಮಾನದಲ್ಲಿ ಅಮೆರಿಕ ಮತ್ತು ಯೂರೋಪಿನ ಹಲವು ಕಡೆ ಚುನಾವಣಾ ಆಧುನಿಕ ಪ್ರಕ್ರಿಯೆ ಆರಂಭವಾಯಿತು. ಅವುಗಳಲ್ಲಿ ಮುಖ್ಯವಾದುದು ಬಿಟಿಷ್ ಪಾರ್ಲಿಮೆಂಟ್. ಭಾರತದ ಪ್ರಜಾಪ್ರಭುತ್ವವು ಕೂಡ ಬಹುತೇಕ ಬ್ರಿಟಿಷ್ ಪ್ರಜಾಪ್ರಭುತ್ವ ಮತ್ತು ಚುನಾವಣಾ ವಿಧಾನವನ್ನು ಅನುಸರಿಸುತ್ತಿದೆ. ಅಲ್ಲೂ ಮಹಿಳೆಯರಿಗೆ ಅಡುಗೆ ಮನೆಯ ಮೀಸಲಾತಿ ನೀಡಿದ್ದರು. ಇಷ್ಟಕ್ಕೂ ಇಲ್ಲೆಲ್ಲ ಮಹಿಳಾ ರಾಣಿಯರೂ ಆಡಲಿತ ನಡೆಸಿದ್ದಾರೆ. 1928ರಲ್ಲಿ ಬ್ರಿಟನ್ನಿನಲ್ಲಿ, 1944ರಲ್ಲಿ ಫ್ರಾನ್ಸಿನಲ್ಲಿ, 1949ರಲ್ಲಿ ಬೆಲ್ಜಿಯಂನಲ್ಲಿ, 1971ರಲ್ಲಿ ಸ್ವಿಜರ್‍ಲ್ಯಾಂಡಿನಲ್ಲಿ ಎಂದು ಮಹಿಳೆಯರು ಮತದಾನದ ಹಕ್ಕುಗಳನ್ನು ಪಡೆದರು; ರಾಜಕೀಯದಲ್ಲಿ ವ್ಯಾಪಕವಾಗಿ ಈಡುಗೊಂಡರು. ಅದಕ್ಕೆ ಮಹಿಳೆಯರು ಸಾಕಷ್ಟು ಬೀದಿ ಗರ್ಜನೆ ಮಾಡಬೇಕಾಯಿತು. ಆದರೂ ಮಹಿಳೆಯರ ಪ್ರಮಾಣಕ್ಕೆ ಈಗಲೂ ಮಿತಿ ಇದೆ.


ಮೊದಲ ಮಹಾಯುದ್ಧದ ಬಳಿಕ ಲ್ಯಾಟಿನ್ ಅಮೆರಿಕದ, ಆಫ್ರಿಕಾದ ಕೆಲವು ದೇಶಗಳು, ಬ್ರಿಟಿಷ್ ವಸಾಹತುಗಳಲ್ಲಿ ಒಂದು ಮಟ್ಟಿನ ಚುನಾವಣೆ ಆರಂಭವಾಯಿತು, ಎರಡನೇ ಮಹಾಯುದ್ಧದ ಬಳಿಕ ಎಲ್ಲ ದೇಶಗಳೂ ಚುನಾವಣೆ, ಮತದಾನದತ್ತ ವಾಲಿದವು. ಪ್ರಜೆಗಳ ಹಕ್ಕು, ಮತದಾನದ ಹಕ್ಕು, ಮೂಲಭೂತ ಹಕ್ಕುಗಳು ಇತ್ಯಾದಿ ಚಳವಳಿಗಳು ಬಲಗೊಂಡವು. ಚುನಾವಣಾ ರಾಜಕೀಯದಲ್ಲಿ ಅಧ್ಯಕ್ಷೀಯ ಮಾದರಿಯ ಮತ್ತು ಪ್ರಧಾನಿ ಪ್ರಾಮುಖ್ಯದ ಮತ್ತು ಪ್ರಾಂತೀಯ ಪಾತ್ರದ, ಒಕ್ಕೂಟ ಸರಕಾರದ ಎಂದು ನಾನಾ ಬಗೆಯಲ್ಲಿ ಸುಧಾರಣೆ ಕಂಡವು, ಕಮ್ಯೂನಿಸ್ಟ್ ದೇಶಗಳಲ್ಲಿ ಕಮ್ಯೂನ್ ಮಟ್ಟದಲ್ಲಿ ಚುನಾವಣೆಗಳು ಇದ್ದು, ಮೇಲು ಮಟ್ಟದಲ್ಲಿ ಸಾರ್ವತ್ರಿಕವಾಗಿ ಮತದಾನ ನಡೆಯುವುದಿಲ್ಲ. ಕಮ್ಯೂನ್‍ನಲ್ಲಿ ಗೆದ್ದ ಪ್ರತಿನಿಧಿಗಳ ಮೂಲಕ ಅಧ್ಯಕ್ಷ, ಪ್ರಧಾನಿಗಳ ಆಯ್ಕೆ ನಡೆಯುತ್ತದೆ.


ಬ್ರಿಟಿಷ್ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯು 1920ರಲ್ಲಿ ನಡೆಯಿತು. ಮತ ಹಕ್ಕು ಎಲ್ಲರಿಗೂ ಇರಲಿಲ್ಲ. ಬ್ರಿಟಿಷರಿಗೆ ತೆರಿಗೆ ಕಟ್ಟುವ ಕುಳಗಳಿಗೆ ಮಾತ್ರ ಮತ ಚಲಾಯಿಸುವ ಹಕ್ಕು ಇತ್ತು. ಹಾಗೆಯೇ ಬ್ರಿಟಿಷ್ ಉನ್ನತ ಶಿಕ್ಷಣ ಪಡೆದವರಿಗೂ ಮತದ ಹಕ್ಕು ಇತ್ತು. 1946ರಲ್ಲಿ ವಯಸ್ಕರಿಗೆ ಮತದಾನ ಎನ್ನುವ ಪದ್ಧತಿ ಭಾರತದಲ್ಲಿ ರೂಢಿಗೆ ಬಂತು. 1945ರಲ್ಲಿ ನಡೆದ ಚುನಾವಣೆಯಲ್ಲಿ 105 ಕ್ಷೇತ್ರಗಳಲ್ಲಿ 57 ಕಡೆ ಗೆದ್ದ ಕಾಂಗ್ರೆಸ್ ಪಕ್ಷವು ಅಲ್ಪ ಬಹುಮತವನ್ನು ಪಡೆಯಿತು. ಉಳಿದಂತೆ ಮುಸ್ಲಿಂ ಲೀಗ್ ಒಂದಷ್ಟು ಪ್ರಭಾವ ಬೀರಿತ್ತು. 1947ರಲ್ಲಿ ಭಾರತ ವಿಭಜನೆ ಆದಾಗ ಮುಸ್ಲಿಮರು ಮಾತ್ರವಲ್ಲ ಮುಸ್ಲಿಂ ಲೀಗ್ ಪ್ರಾಬಲ್ಯದ ಪ್ರದೇಶಗಳು ಎಂಬುದು ಕೂಡ ಪಾಕಿಸ್ತಾನ ಎಷ್ಟು ದೊಡ್ಡದಿರಬೇಕು ಎಂಬುದಕ್ಕೆ ಒಂದು ಪ್ರಮಾಣವಾಗಿತ್ತು.
ಭಾರತೀಯ ಸಂವಿಧಾನವು ಜಾರಿಗೊಂಡ ಮೇಲೆ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತು. ಆಗ 21 ದಾಟಿದ ಎಲ್ಲ ಹೆಣ್ಣು ಗಂಡುಗಳಿಗೆ ಮತದಾನದ ಹಕ್ಕು ನೀಡಲಾಗಿತ್ತು. ಭಾರತದಲ್ಲಿ ಚುನಾವಣಾ ಆಯೋಗವು ಒಂದು ಸ್ವಾಯುತ್ತ ಸಂಸ್ಥೆಯಾಗಿದೆ. ಚುನಾವಣಾ ಕಾಲದಲ್ಲಿ ಆ ಸಂಸ್ಥೆ ನಿರ್ಣಾಯಕವಾದುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಚುನಾವಣಾ ಆಯೋಗವು ತನ್ನ ಹಿಡಿತವನ್ನು ಸಡಿಲಿಸಿ ಕುಳಿತಿದೆ ಎಂಬ ಆರೋಪವಿದೆ. ಭಾರತದಲ್ಲಿ ಸಂಸತ್ತು ಭಾರತಕ್ಕೆ ಪ್ರಧಾನಿಯನ್ನು ನೀಡಿದರೆ ವಿಧಾನ ಸಭೆಗಳು ರಾಜ್ಯಗಳಿಗೆ ಮುಖ್ಯಮಂತ್ರಿಗಳನ್ನು ನೀಡುತ್ತದೆ. ಇವರು ತಮ್ಮ ಮಂತ್ರಿಮಂಡಲಗಳ ಮೂಲಕ ಆಡಳಿತ ನಡೆಸುತ್ತಾರೆ.


ಭಾರತದಲ್ಲಿ ಇಂದು ಚುನಾವಣೆಯು ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ರಾಜ್ಯ, ಒಕ್ಕೂಟ ಸರಕಾರ ಎಂದು ಐದು ಮಜಲಿನ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಈ ಐದೂ ಮಜಲಿನ ಚುನಾವಣೆಗಳಲ್ಲಿ 18ರ ಪ್ರಾಯ ದಾಟಿದ ಎಲ್ಲ ಹೆಣ್ಣು ಗಂಡುಗಳು ಮತ ಚಲಾವಣೆಯ ಹಕ್ಕು ಪಡೆದಿರುತ್ತಾರೆ. ಕರ್ನಾಟಕದಲ್ಲಿ ಸ್ಥಳೀಯ ಆಡಳಿತ ಮಟ್ಟದ ಚುನಾವಣೆ ಕಳೆದೆರಡು ವರುಷಗಳಿಂದ ನಡೆದಿಲ್ಲ. ಜಮ್ಮು ಕಾಶ್ಮೀರದಲ್ಲಿ ಐದು ವರುಷಗಳಿಂದ ವಿಧಾನ ಸಭೆಗೇ ಚುನಾವಣೆ ನಡೆದಿಲ್ಲ. ಇವೆಲ್ಲ ನಮ್ಮ ಪ್ರಜಾಪ್ರಭುತ್ವದ ಕೆಲ ಮಟ್ಟದ ಸೋಲು ಎನ್ನದೆ ಬೇರೆ ವ್ಯಾಖ್ಯಾನ ನೀಡಲಾಗದು.


ಬರಹ: ಪೇರೂರು ಜಾರು, ಹಿರಿಯ ಸಂಪಾದಕರು

Related Posts

Leave a Reply

Your email address will not be published.