ಸತ್ತಾಗಲಾದರೂ ತೊಗಲು ದಾನ ಮಾಡಿ, ಬೇರೆಯವರ ತೊಗಲಾಗಿ ಆನಂದ ಪಡೆಯಿರಿ
ಫಾದರ್ ಮುಲ್ಲರ್‍ನಲ್ಲಿ ಈಗ ಚರ್ಮದ ಬ್ಯಾಂಕು ಆರಂಭವಾಗಿದೆ. ನೆತ್ತರ ಬ್ಯಾಂಕು ಮತ್ತು ಕಣ್ಣಿನ ಬ್ಯಾಂಕಿನಂತೆಯೇ ಇದೂ ಕೂಡ. ಸತ್ತ ವ್ಯಕ್ತಿಯ ಚರ್ಮವನ್ನು ಐದಾರು ಗಂಟೆಯ ಒಳಗೆ ತೆಗೆದು ಆರು ತಿಂಗಳ ಕಾಲ ಕಾಪಿಡುವುದು ಸಾಧ್ಯ. ಸುಟ್ಟ ಗಾಯಕ್ಕೆ ಒಳಗಾಗಿ ಚರ್ಮ ಕಳೆದುಕೊಂಡವರಿಗೆ ಈ ಚರ್ಮವನ್ನು ಕಸಿ ಮಾಡಬಹುದು. ಅದೇ ವ್ಯಕ್ತಿಯ ಚರ್ಮವನ್ನು ಒಂದು ಕಡೆಯಿಂದ ತೆಗೆದು ಇನ್ನೊಂದು ಕಡೆ ಹೊದಿಸುವುದು ಕೂಡ ಸಾಧ್ಯ. ಆದರೆ ಆಸಿಡ್ ದಾಳಿಗೆ ಈಡಾದ ಚರ್ಮಕ್ಕೆ ಇದು ಪರಿಹಾರವಾಗದು. ಅವರಿಗೆ ಪ್ಲಾಸ್ಟಿಕ್ ಸರ್ಜರಿಯೊಂದೇ ಮದ್ದು. ಸಂತ ಅಲೋಸಿಯಸ್‍ನಲ್ಲಿ ಕಿಣ್ವ ಬಂಧ ಇಲ್ಲವೇ ಎನ್‍ಜೈಮ್ ಬ್ರಿಡ್ಜ್ ಬಗೆಗೆ ನಡೆದ ವಿಚಾರಗೊಟ್ಟಿ ಮಹತ್ತರವಾದುದು. ಆದರೆ ಸ್ವಲ್ಪ ಕ್ಲಿಷ್ಟವಾದ ಈ ವಿಷಯಗಳೆಲ್ಲ ಜನಸಾಮಾನ್ಯರನ್ನು ತಲುಪುವುದು ಕಷ್ಟ. ಹಾಗಾಗಿ ಅರಿವು ಹರಡುವ ಕೆಲಸ ಆಗಬೇಕು ಎಂಬ ಅರಿವು ನಮಗೆಲ್ಲ ಇರಬೇಕು.
ಈಗ ಮಂಗಳೂರಿನಲ್ಲಿ ಕಿಣ್ವ ಮತ್ತು ತೊಗಲು ಆರೋಗ್ಯದ ಹೊದಿಕೆಯ ವಿಚಾರ ಗೊಟ್ಟಿಗಳು, ಕಾಪಿಡುಗಳು ಆರಂಭವಾಗುತ್ತಿವೆ. ಎನ್‍ಜೈಮ್ ಎಂಬ ಕಿಣ್ವವು ನಮ್ಮ ದೇಹದ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖವಾದುದು. ಚಯಾಪಚಯ ಎಂದರೆ ಏನು? ದೇಹದ ಕಣಗಳು ಆಹಾರವನ್ನು ಶಕ್ತಿಯಾಗಿ ಬದಲಿಸುವಂತೆ ರಾಸಾಯನಿಕ ಪರಿಣಾಮ ಬೀರುವುದೇ ಚಯಾಪಚಯ ಎನ್ನಬಹುದು. ಅದನ್ನು ಕನ್ನಡದಲ್ಲಿ ಕಣಾಹಾರಬಲ ಎಂದು ಹೇಳಬಹುದು. ದೇಹದಲ್ಲಿ ಎನ್‍ಜೈಮ್ ಸೇತುವೆ ಇಲ್ಲವೇ ಬಂಧವು ದೇಹದ ಶಕ್ತಿ ಸಮತೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಮಾನವನ ದೇಹದಲ್ಲಿ ಆಹಾರವು ನಾನಾ ವಿಧಗಳಲ್ಲಿ ನಡೆಯುವ ಸಮಸ್ತ ರಾಸಾಯನಿಕ ಕ್ರಿಯೆಗಳು ಹೇಗೆ ಮಾನವನ ಚಟುವಟಿಕೆಗೆ ದಾರಿ ಮಾಡುತ್ತವೆ ಎನ್ನುವುದು ಈ ಪ್ರಕ್ರಿಯೆಯ ಮುಖ್ಯಾಂಶವಾಗಿದೆ. ಒಂದು ಮನೆಯನ್ನು ಕಟ್ಟುವುದು ಮತ್ತು ಅದು ಹಳತಾದಾಗ ಒಡೆಯುವುದು ನಮಗೆ ತಿಳಿದಿದೆ. ನಮ್ಮ ದೇಹವು ಕಣಗಳೆಂಬ ಇಟ್ಟಿಗೆಯಿಂದ ಆಗಿದೆ. ಈ ಶರೀರದಲ್ಲಿನ ಕಣಗಳನ್ನು ಹೊಸದಾಗಿ ಕಟ್ಟುವ ಮತ್ತು ಹಳತಾದಾಗ ಒಡೆಯುವ ಕೆಲಸವನ್ನು ಕಿಣ್ವಗಳು ಮಾಡುತ್ತವೆ. ಅದು ನಮ್ಮ ಶರೀರ ಸೌಖ್ಯದ ಸಹಜ ಪ್ರಕ್ರಿಯೆಯಾಗಿದೆ.
ಮನೆ ಕಟ್ಟುವಾಗ ಸ್ವಲ್ಪ ಸ್ವಲ್ಪ ಮತ್ತು ಮನೆ ಒಡೆಯುವಾಗ ಹಂತ ಹಂತವಾಗಿ ಒಡೆಯುತ್ತೇವೆ. ಹಾಗೆಯೇ ಎನ್‍ಜೈಮ್‍ಗಳು ನಮ್ಮ ದೇಹ ಕಣಗಳನ್ನು ಸ್ವಲ್ಪ ಸ್ವಲ್ಪ ಕಟ್ಟಿ ದೊಡ್ಡದಾಗಿಸುವ ಮತ್ತು ಹಂತ ಹಂತವಾಗಿ ಒಡೆದು ಕಿರಿದಾಗಿಸುವ ಕೆಲಸವನ್ನು ಮಾಡುತ್ತವೆ. ಅಮೈನೋ ಆಮ್ಲಗಳು, ನ್ಯೂಕ್ಲಿಯಿಕ್ ಆಮ್ಲಗಳು ನಮ್ಮ ಕೊಬ್ಬು ಕರಗಿಸಿ ಶಕ್ತಿ ತಯಾರಿಸುತ್ತವೆ. ನಾವು ಉಪವಾಸ ಇದ್ದೇವೆ, ಆದರೂ ಕೆಲಸ ಮಾಡುತ್ತಿದ್ದೇವೆ ಎಂದರೆ ಏನರ್ಥ? ಮೇಲಿನ ಆಮ್ಲಗಳು ಎನ್‍ಜೈಮ್‍ಗಳ ಕ್ರಿಯೆಯಿಂದ ನಮ್ಮ ದೇಹದಲ್ಲಿ ಶೇಖರವಾಗಿರುವ ಕೊಬ್ಬನ್ನು ಕರಗಿಸಿ ಶಕ್ತಿಯಾಗಿಸುತ್ತದೆ. ಕೊಬ್ಬು ಶೇಖರಣೆಯೇ ಇಲ್ಲದ ದೇಹವಾಗಿದ್ದಲ್ಲಿ ದೇಹವು ಕುಸಿದು ಬೀಳುತ್ತದೆ.
ಮೆಟಬಾಲಿಸಮ್ ಕ್ರಿಯೆಯು ಕಣಾಹಾರಬಲ ಎನಿಸುವಲ್ಲಿ ಹಲವು ಮಜಲುಗಳು ಇವೆ. ದೇಹದ ಕಣಗಳು ಸತ್ತಾಗ, ಅದನ್ನು ಭರ್ತಿ ಮಾಡಲು ಎಂದರೆ ಶರೀರದ ರಿಪೇರಿ ಮಾಡಲು ಹೊಸ ದೇಹ ಕಣಗಳ ಅಗತ್ಯ ಬೀಳುತ್ತದೆ. ನಾವು ತಿನ್ನುವ ಪಿಷ್ಟಾಂಶ ಇಲ್ಲವೇ ಹಿಟ್ಟಿನ ಅಂಶವು ಕರಗಿ ಕಿಣ್ವದ ಸಹಾಯದಿಂದ ಗ್ಲೂಕೋಸ್ ಆಗಿ ಸಿಕ್ಕಾಗ ಕಣವು ವಿಭಜನೆಗೊಂಡು ಹೊಸ ಕಣಗಳು ಹುಟ್ಟುತ್ತವೆ. ಮುಂದೆ ಆ ಗ್ಲೂಕೋಸ್ ಇಂಗಾಲವಾಗಿ ಹೊರಬೀಳುತ್ತದೆ. ಮೆಟಬಾಲಿಸಮ್ ಎನ್ನುವುದು ಒಂದು ಆಹಾರ ಪಚನದ ಚಕ್ರ. ನಾವು ತಿನ್ನುವ ಆಹಾರವು ವಿಭಿನ್ನವಾಗಿರುವಂತೆ ಈ ಕಣಾಹಾರಬಲ ಚಕ್ರವು ಕೂಡ ವಿಭಿನ್ನ ರೀತಿಯಲ್ಲಿ ವರ್ತಿಸುತ್ತದೆ.
ಜೈವಿಕ ಕ್ರಿಯೆ ಇದರಲ್ಲಿನ ಮುಖ್ಯ ಅಂಶವಾಗಿದ್ದು, ಹಾಲಿನ ಉತ್ಪನ್ನದ ಆಹಾರಕ್ಕೂ, ಮೀನಿನ ಊಟಕ್ಕೂ ತುಂಬ ವಿಭಿನ್ನ ರೀತಿಯಲ್ಲಿ ಈ ಮೆಟಬಾಲಿಸಮ್ ಇರುತ್ತದೆ. ಹಾಲಿನ ಕೆಲವು ಅಂಶಗಳು ಭಾರತೀಯರಲ್ಲಿ ಕರಗದೆಯೇ ಹೊರಬೀಳುತ್ತದೆ ಎಂದೂ ಹೇಳಲಾಗಿದೆ. ಯೂರೋಪಿಯನರು ಒಂದು ಲೀಟರ್ ಹಾಲು ಕುಡಿದು ಅರಗಿಸಿಕೊಳ್ಳಬಲ್ಲರು. ಆದರೆ ಬಹುತೇಕ ಭಾರತೀಯರಿಂದ ಅದು ಸಾಧ್ಯವಿಲ್ಲ ಎನ್ನಲಾಗಿದೆ. ನೂರು ಗ್ರಾಂ ಅಕ್ಕಿಯಲ್ಲಿ ಇಲ್ಲವೇ 100 ಗ್ರಾಂ ರಾಗಿಯಲ್ಲಿ ಇರುವ ಹಿಟ್ಟಿನ ಅಂಶ ಸಮಾನವಾದರೂ ಸಕ್ಕರೆ ಕಾಯಿಲೆಯವರಿಗೆ ವೈದ್ಯರು ಅನ್ನ ಕಡಿಮೆ ಮಾಡಿ, ರಾಗಿ ತಿನ್ನಿ ಎಂದು ಏಕೆ ಹೇಳುತ್ತಾರೆ? ಅನ್ನವು ಮುಕ್ಕಾಲು ಗಂಟೆಯಲ್ಲಿ ಕರಗಿ ಗ್ಲೂಕೋಸ್ ಆಗುತ್ತದೆ. ಸಕ್ಕರೆ ಕಾಯಿಲೆಯಲ್ಲಿ ನಮ್ಮ ಪ್ಯಾಂಕ್ರಿಯಾಸ್ ಗ್ರಂಥಿಯು ಇನ್ಸುಲಿನ್ ಸ್ರವಿಸದಿರುವುದರಿಂದ ಗ್ಲೂಕೋಸ್ ಆದ ಆಹಾರವು ಕೂಡಲೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ರಾಗಿಯು ಕರಗಲು ಅದರ ಕಣ ರಚನೆಯಿಂದಾಗಿ ಎರಡೂವರೆ ಗಂಟೆ ತೆಗೆದುಕೊಳ್ಳುವುದರಿಂದ ಮೆಟಬಾಲಿಸಂ ನಡೆದು ಹಿಟ್ಟು ಗ್ಲೂಕೋಸ್ ಆಗಲು ಸಮಯ ತೆಗೆದುಕೊಳ್ಳುತ್ತದೆ. ಅದು ಒಂದು ಮಟ್ಟಿಗೆ ಸಿಹಿಮೂತ್ರಕ್ಕೆ ತಾತ್ಕಾಲಿಕ ಲಗಾಮು ಅಷ್ಟೆ; ಪರಿಹಾರ ಅಲ್ಲ. ಕೆಲವರು ಸಕ್ಕರೆ ತಿನ್ನುವುದಿಲ್ಲ. ಅದೊಂದು ಭ್ರಮೆ ಮಾತ್ರ. ನಾವು ತಿನ್ನುವ ಆಹಾರವು ದೇಹದಲ್ಲಿ ಗ್ಲೂಕೋಸ್, ಸುಕ್ರೋಸ್, ಫ್ರುಕ್ಟೋಸ್ ಸಹಿತ ನಾನಾ ರೂಪದ ಸಕ್ಕರೆಯಾಗಿ ನಮ್ಮ ದೇಹವನ್ನು ಸೇರುತ್ತದೆ. ಸಕ್ಕರೆ ಇಲ್ಲದಿದ್ದರೆ ನಾವು ಶಕ್ತಿ ಹೀನರಾಗಿ ಕುಸಿದು ಬೀಳುತ್ತೇವೆ. ನೇರ ಸಕ್ಕರೆ ತಿನ್ನುವುದನ್ನು ಮಿತಿಯಲ್ಲಿ ಇಟ್ಟುಕೊಳ್ಳಬಹುದು ಅಷ್ಟೆ.
ಒಟ್ಟಾರೆ ಕಿಣ್ವಗಳು ಇಲ್ಲವೇ ಎನ್‍ಜೈಮ್‍ಗಳು ದೈಹಿಕ ರಾಸಾಯನಿಕ ಕ್ರಿಯೆಗಳನ್ನು ವೇಗವಾಗಿಸುವ ಜೈವಿಕ ಕ್ರಿಯೆಯ ಪ್ರೋಟೀನುಗಳಾಗಿವೆ. ಈ ಪ್ರೋಟೀನುಗಳು ನಮಗೆ ಕಾಳು, ಮೊಟ್ಟೆ, ಮೀನು, ಮಾಂಸ, ಹಾಲು ಮೊದಲಾದವುಗಳಿಂದ ಸಿಗುತ್ತವೆ. ಇವು ಅಮಿನೋ ಆಮ್ಲಗಳಿಂದ ರಚಿತವಾಗಿದ್ದು ದೇಹದ ಎಲುಬು ಕೂದಲು ಮಾಂಸದಿಂದ ಹಿಡಿದು ಚರ್ಮದವರೆಗೆ ಎಲ್ಲವನ್ನೂ ಸರಣಿಯಲ್ಲಿ ಒಂದಕ್ಕೊಂದು ಆವರಿಸಿಕೊಂಡು, ಆತುಕೊಂಡು ಇವೆ. ಏಕೆಂದರೆ ಇಡೀ ದೇಹವೇ ಅಣು ರಚನೆಯಾಗಿದೆ. ನಮ್ಮ ಅಣುವಿನ ಕಟ್ಟು ಕುಟ್ಟು ಎರಡೂ ಕಜ್ಜಗಳನ್ನು ಎನ್‍ಜೈಮ್‍ಗಳು ಮಾಡುವುದರಿಂದ ಅದು ಬಲೆ ಹೆಣೆದಂತೆ ನಮ್ಮ ದೇಹವನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುತ್ತದೆ.
ಅಂದರೆ ಚರ್ಮವೂ ಕೂಡ ಸಾಯುವ ಕಣ ಎಂಬ ಹೊರಾವರಣ ಸಹಿತ ಮೂರು ಪದರದ್ದಾಗಿದೆ. ಆ ಕಣಗಳು ಕೂಡ ಕಿಣ್ವ ಸೇತುವೆ ಬಂಧದ್ದಾಗಿದೆ. ಹೊರ ಚರ್ಮವು ಸತ್ತ ಕಣಗಳನ್ನು ಹೊಂದಿರುವುದರಿಂದ ಚಲಿಸುವ ಬೆಂಕಿ ಸುಡುವುದಿಲ್ಲ ಎಂಬ ವೈಜ್ಞಾನಿಕ ಸತ್ಯವು ರೂಪುಗೊಂಡಿದೆ. ಬೆಂಕಿಯು ನಮ್ಮ ದೇಹಕ್ಕೆ ಸೋಕಿದಾಗ ಅದು ಚರ್ಮದ ಒಳ ಪದರಕ್ಕೆ ತಾಕಿದರೆ ಮಾತ್ರ ನಮಗೆ ಬಿಸಿಯ ಸುಡುವ ಅನುಭವ ಆಗುತ್ತದೆ. ಹೊರಾವರಣದಲ್ಲಿಯೇ ಚಲಿಸಿದಲ್ಲಿ ನಮಗೆ ಬಿಸಿಯ ಅನುಭವ ಆಗುವುದಿಲ್ಲ. ಏಕೆಂದರೆ ಹೊರಾವರಣದ ಬಿಸಿ ಒಳಾವರಣಕ್ಕೆ ದಾಟುವುದರೊಳಗೆ ಅಲ್ಲಿಂದ ಬೆಂಕಿಯು ದೇಹದ ಬೇರೆ ಕಡೆಗೆ ಚಲಿಸಿರುತ್ತದೆ. ಇದನ್ನು ಕೆಲವರು ಪವಾಡದಂತೆ ದುರುಪಯೋಗಿಸಿಕೊಳ್ಳುತ್ತಾರೆ.
ಸುಟ್ಟ ಚರ್ಮಕ್ಕೆ ನೀರು ತಾಗಿಸಬಾರದು ಎಂಬ ಮೂಢನಂಬಿಕೆಯೊಂದು ನಮ್ಮ ಸಮಾಜದಲ್ಲಿದೆ. ಆದರೆ ಬೆಂಕಿಗೆ ಚರ್ಮ ಸುಟ್ಟಾಗ ಎಷ್ಟು ಸಾಧ್ಯವೋ ಅಷ್ಟು ತಣ್ಣನೆಯ ನೀರು ಅದಕ್ಕೆ ಸುರಿಯಬೇಕು ಇಲ್ಲವೇ ನೀರಿನಲ್ಲಿ ಕೂರಿಸಬೇಕು. ಇದೇ ಪ್ರಥಮ ಚಿಕಿತ್ಸೆಯಾಗಿದ್ದು ಆದಷ್ಟು ಬೇಗ ಈ ಮೊದಲ ಉಪಚಾರದ ಬಳಿಕ ವೈದ್ಯರಲ್ಲಿಗೆ ಹೋಗಬೇಕು. ಆಗ ಬೇಗ ಗುಣಪಡಿಸುವುದು ಸಾಧ್ಯ. ನಮ್ಮ ದೇಹವು ತೊಗಲಿನ ತಡಿಕೆ. ತೊಗಲು ಸಮಗ್ರವಾಗಿ ದೇಹದ ಅತಿ ದೊಡ್ಡ ಅಂಗವಾಗಿದೆ. ಸತ್ತಾಗಲಾದರೂ ತೊಗಲು ದಾನ ಮಾಡಿ, ಬೇರೆಯವರ ತೊಗಲಾಗಿ ಆನಂದ ಪಡೆಯಿರಿ.
ಬರಹ: ಪೇರೂರು ಜಾರು