ಗಂಗೊಳ್ಳಿ : ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದ ಜೆಟ್ಟಿ ನಿರ್ಮಾಣ ಕಾರ್ಯ

ಕರಾವಳಿಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿ ಸಂಪೂರ್ಣ ನಿರ್ಲಕ್ಷ್ಯಕ್ಕೊಗಾದ ಸ್ಥಿತಿಗೆ ತಲುಪಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಇಲ್ಲಿನ ಜೆಟ್ಟಿಯ ಒಂದು ಭಾಗ ಕುಸಿದು ಮೀನುಗಾರಿಕೆಗೆ ತೊಂದರೆಯಾಗಿದ್ದರೂ ಜೆಟ್ಟಿಯ ಮರು ನಿರ್ಮಾಣದ ಕಾರ್ಯ ಕನಸಾಗಿಯೇ ಉಳಿದಿದೆ.
ಗಂಗೊಳ್ಳಿಯಲ್ಲಿ 2013ರಲ್ಲಿ 10 ಕೋಟಿ ವೆಚ್ಚದಲ್ಲಿ ಜೆಟ್ಟಿ ನಿರ್ಮಿಸಲಾಗಿತ್ತು. ಇದು 2016ರಲ್ಲಿ ಹಾನಿಗೊಳಗಾಯಿತು. 2018 ರಲ್ಲಿ ದುರಸ್ತಿಗಾಗಿ ಹೆಚ್ಚುವರಿ 3 ಕೋಟಿ ರೂ ಬಿಡುಗಡೆಯಾಗಿತ್ತು. ಗುತ್ತಿಗೆ ಪಡೆದ ಸೈಂಟ್ ಆಂಥೋನಿ ಡಿ’ಕೋಸ್ಟಾ ಕನ್‍ಸ್ಟ್ರಕ್ಷನ್ಸ್ ಹಳೆಯ ಜೆಟ್ಟಿಯನ್ನು ಕೆಡವಿ ಮೊದಲ ಹಂತದಲ್ಲಿ 210 ಮೀಟರ್ ಉದ್ದದ ಜೆಟ್ಟಿಯನ್ನು ಪೂರ್ಣಗೊಳಿಸಿತ್ತು. ಎರಡನೇ ಹಂತದ ಕಾಮಗಾರಿ ಆರಂಭಗೊಂಡಾಗ 2022ರ ಸೆಪ್ಟೆಂಬರ್ 28 ರಂದು ನಿರ್ಮಾಣ ಕೆಲಸ ನಡೆಯುತ್ತಿದ್ದಂತೆಯೇ ಹೊಸದಾಗಿ ನಿರ್ಮಿಸಿದ್ದ 50 ಮೀ. ಉದ್ದದ ಸ್ಲ್ಯಾಬ್ ಕುಸಿದು ಬಿದ್ದಿತ್ತು.

ಅಂದಿನ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್ ಅಂಗಾರ ಕಟ್ಟಡದ ಕುಸಿತದ ಪರಿಶೀಲನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವುದಾಗಿ ಭರವಸೆ ನೀಡಿ ತೆರಳಿದ್ದು ಮಾತ್ರ. ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಕಂಚುಗೋಡು ಮಾತನಾಡಿ, ಬಳಿಕ ಹಲವು ಬಾರಿ ಮನವಿ ಸಲ್ಲಿಸಿದ ನಂತರ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಅಂದಿನ ಶಾಸಕ ಸುಕುಮಾರ್ ಶೆಟ್ಟಿ ಒಟ್ಟು 12 ಕೋಟಿ ರೂ.ವೆಚ್ಚದಲ್ಲಿ ಜೆಟ್ಟಿ ಪುನರ್ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಜೆಟ್ಟಿ ಕಾಮಗಾರಿಯ ಮರು ನಿರ್ಮಾಣಕ್ಕೆ ಕಾಲ ಕೂಡಿ ಬಂದಿಲ್ಲ ಎಂದರು.

ಸಾಮಾಜಿಕ ಕಾರ್ಯಕರ್ತ ವೆಂಕಟ್ ಗಂಗೊಳ್ಳಿ ಮೀನುಗಾರಿಕಾ ದೋಣಿಗಳಿಗೆ ಲಂಗರು ಹಾಕುವಾಗ ಮೀನುಗಾರರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮೀನು ಹಿಡಿಯುವವರನ್ನು ಬೋಟ್‍ನಿಂದ ಜೆಟ್ಟಿಗೆ ಸ್ಥಳಾಂತರಿಸಲು ಮೀನುಗಾರರು ಪರದಾಡುವಂತಾಗಿದೆ. ಇಲ್ಲಿ ಹೂಳು ತುಂಬಿದ್ದು, ಸಮಸ್ಯೆ ಹೆಚ್ಚಾಗಿದೆ ಎಂದರು.
ಇನ್ನಾದರೂ ಮೀನುಗಾರಿಕಾ ಮತ್ತು ಬಂದರು ಸಚಿವರಾದ ಮಾಂಕಾಳ್ ವೈದ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜೆಟ್ಟಿ ಮರು ನಿರ್ಮಾಣಕ್ಕೆ ಮನಸ್ಸು ಮಾಡಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
