ಅಕ್ಷತೆ ಅಕ್ಕಿ ಪಡಿತರ ಅಕ್ಕಿ ಕಾಳಗ

ಅಕ್ಷತೆಗೆ ಮತ ಹಾಕುತ್ತೀರಾ, ಅನ್ನದ ಅಕ್ಕಿಗೆ ಮತ ಹಾಕುತ್ತೀರಾ ಎಂದು ಪ್ರಶ್ನಿಸಿದ ಮಾಗಡಿ ಶಾಸಕ ಬಾಲಕೃಷ್ಣ ಅವರು ಅಕ್ಷತೆಯ ಅಕ್ಕಿಗೆ ಮತ ಹಾಕುವುದಾದರೆ ನಿಮಗೆ ಅನ್ನದ ಅಕ್ಕಿ ಕೊಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ವಾರಣಾಸಿ ಜ್ಞಾನವಾಪಿ ಮಸೀದಿಯ ಬೀಗ ಹಾಕಿದ ಭಾಗದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಈಗ ಕೋರ್ಟು ಆದೇಶ ನೀಡಿದೆ. ಲೋಕ ಸಭೆ ಚುನಾವಣೆಗೆ ಮೊದಲು ತಾತ್ಕಾಲಿಕ ಆಯವ್ಯಯ ಆಗುವುದಕ್ಕೆ ಮೊದಲು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರ ಗಂಡ ಪರಕಾಲ ಪ್ರಭಾಕರ್‍ರು ರಾಮ ಮಂದಿರ ಆದ್ಯತೆಯ ವಿಷಯವಲ್ಲ. ಭಾರತೀಯರು ಮೋದಿಯವರ ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದರು. ಇವೆಲ್ಲದರ ಹಿಂದೆ ಯಾರದೋ ಪ್ರಚಾರಕ್ಕೆ ಮುಚ್ಚಿ ಹೋದ ಹಲವು ಕತೆಗಳು ಇವೆ.

ಅಲೆಕ್ಸಾಂಡರ್ ಕನ್ನಿಂಗ್‍ಹ್ಯಾಮ್ ಎಎಸ್‍ಐ- ಭಾರತೀಯ ಪುರಾತತ್ವ ಸರ್ವೆ ಇಲಾಖೆಯನ್ನು ಸ್ಥಾಪಿಸುವವರೆಗೆ ಭಾರತೀಯರಿಗೆ ತಮ್ಮ ಇತಿಹಾಸದ ಪುರಾಣ ಹೊರತು ದಾಖಲೆ ಇರಲಿಲ್ಲ. ಅನಂತರ ಬುದ್ಧ ಲೋಕ, ಮರೆತೇ ಹೋಗಿದ್ದ ಅಶೋಕ ಚಕ್ರವರ್ತಿ, ಸಿಂಧೂ ನಾಗರಿಕತೆ ಎಂದು ಅದೆಷ್ಟೋ ಚಾರಿತ್ರಿಕ ಅಂಶಗಳು ಕನ್ನಿಂಗ್‍ಹ್ಯಾಮ್ ಕಟ್ಟಿದ ತಂಡದಿಂದ ಹೊರಬಿತ್ತು. ಅವುಗಳಲ್ಲಿ ಅಯೋಧ್ಯೆಯ ವಿಷಯವೂ ಒಂದು. ಬಾಬರಿ ಮಸೀದಿ ಪಕ್ಕ ಒಂದು ಆಲಯ ಇತ್ತು ಎನ್ನುವುದೂ ಅವುಗಳಲ್ಲಿ ಒಂದು. ಆದರೆ ಅಲ್ಲಿ ಆಗ ಯಾವುದೇ ಧರ್ಮದ ಅರ್ಚನೆ ಇರಲಿಲ್ಲ.

1930ರ ಸುತ್ತಿನಲ್ಲಿ ಹಿಂದೂ ಮಹಾಸಭಾದವರು, ಆರೆಸ್ಸೆಸ್‍ನವರು ಅಯೋಧ್ಯೆಗೆ ಹೋಗಿದ್ದರು. ಆದರೆ ಬ್ರಿಟಿಷ್ ಸೇನೆಯ ಹಿಂದೂ ಸೈನಿಕರು ಚೆನ್ನಾಗಿ ತದುಕಿದ್ದರಿಂದ ಅತ್ತ ಮುಖ ಹಾಕುವುದನ್ನು ಬಿಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿದ್ದರೂ ಸ್ವಾತಂತ್ರ್ಯ ಸಿಗುತ್ತಲೇ ಇವರು 1949ರಲ್ಲಿ ಬಾಬರಿ ಮಸೀದಿಯ ಪಕ್ಕದಲ್ಲಿ ರಾಮ ಸೀತೆ ಬೊಂಬೆ ಇಟ್ಟರು. ನೆಹರು ಸರಕಾರವು ಅದಕ್ಕೆ ಬೀಗ ಜಡಿಯಿತು. ಅಲ್ಲಿ ಮುಸ್ಲಿಮರಾಗಲಿ, ಹಿಂದೂಗಳಾಗಲಿ ಹೋಗಲಿಲ್ಲ. 1977ರಲ್ಲಿ ಜನತಾ ಸರಕಾರ ಬಂದಾಗ ಸಂಘ ಪರಿವಾರದವರು ಒಂದಷ್ಟು ಅಧಿಕಾರ ಅನುಭವಿಸಿದರು. ಅನಂತರ ಮತ್ತೆ ಬಾಬರಿ ಮಸೀದಿ, ರಾಮ ಮಂದಿರ ವಿವಾದ ಮುಂದೆ ಬಂತು. ಕೋರ್ಟು ಮೆಟ್ಟಿಲು ಕೂಡ ಹತ್ತಿತು. ಅಲಹಾಬಾದ್ ಹೈಕೋರ್ಟ್ ಸಮಾನ ಅವಕಾಶ ನೀಡಲು ಹೇಳಿತು. ರಾಜೀವ್ ಗಾಂಧಿಯವರ ಸರಕಾರವು 1985ರಲ್ಲಿ ರಾಮ ಮಂದಿರದ ಬೀಗ ತೆರೆಯಲು ತೀರ್ಮಾನಿಸಿತು. 1986ರ ಜನವರಿಯಲ್ಲಿ ಬೀಗ ತೆರೆದ ಮೇಲೆ ಎರಡೂ ಕಡೆ ಎರಡೂ ಧರ್ಮದವರು ತಂತಮ್ಮ ಆರಾಧನೆ ಆರಂಭಿಸಿದರು.

1990ರ ಹೊತ್ತಿಗೆ ಮಾಯಾವತಿ ಮೊದಲಾದವರ ಸಖ್ಯದಿಂದ ಮತ್ತು ಮುಂದೆ ಸ್ವತಂತ್ರವಾಗಿ ಬಿಜೆಪಿ ಉಪ್ರದಲ್ಲಿ ಅಧಿಕಾರಕ್ಕೆ ಬಂತು. 1992ರಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರಕಾರವು ಮಸೀದಿ ಒಡೆಯಲು ಅವಕಾಶ ನೀಡುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟಿತ್ತು. ಆದರೆ ಡಿಸೆಂಬರ್ 6ರಂದು ರಾಮಾನುಯಾಯಿಗಳು ಬಾಬರಿ ಮಸೀದಿ ಉರುಳಿಸಿದರು. ಆಗಿನ ಮಾಧ್ಯಮಗಳು ಬಿಜೆಪಿ ರಾಜ್ಯ ಸರಕಾರದ ಬಗೆಗೆ ಚಕಾರ ಎತ್ತದೆ ಪ್ರಧಾನಿ ನರಸಿಂಹರಾವ್ ಬಾಬರಿ ಮಸೀದಿ ಉರುಳಿಸಲು ಬಿಟ್ಟರು ಎಂದು ಪ್ರಚಾರ ಮಾಡಿದವು.

ಈ ದೇಶದಲ್ಲಿ ಪ್ರಚಾರ ತಂತ್ರಗಳು ಹೇಗೆಲ್ಲ ಇರುತ್ತವೆ ಎನ್ನುವುದಕ್ಕೆ ಇದು ಉದಾಹರಣೆ. ಪರಕಾಲ ಪ್ರಭಾಕರ್ ಹೇಳುವಂತೆ ಆದ್ಯತೆಯ ವಿಚಾರವಲ್ಲದ ರಾಮ ಮಂದಿರ 1,800 ಕೋಟಿ ವೆಚ್ಚದಲ್ಲಿ ತೆರೆದುಕೊಂಡಿದೆ. ಅತಿ ಮುಖ್ಯ ಪ್ರಚಾರ ಅದು ಮೋದಿಯವರ ಸಾಧನೆ. ಮೋದಿಯವರು ಹೆಸರು ಬದಲಿಸಿ ಪ್ರಚಾರ ಪಡೆಯುವುದರಲ್ಲಿ ಮಹಾ ಶೂರರು. ಪಿಎಂ ಬಿಜೆಪಿ ನೋಡಿ, ಮನಮೋಹನ್ ಸಿಂಗ್‍ರ ಸರಕಾರವು 2008ರಲ್ಲಿ ಜೆನೆರಿಕ್ ಮದ್ದುಗಳನ್ನು ಮೂಲ ಬೆಲೆಗೆ ಕೊಡಲು ಜನೌಷಧಿ ಯೋಜನೆ ಆರಂಭಿಸಿತು. ಬ್ರಾಂಡೆಡ್ ಮದ್ದುಗಳು ಸೇರಿಕೆ ಮದ್ದುಗಳಾಗಿದ್ದು ದುಬಾರಿ ಇದ್ದವು. ಒಂದೇ ಮೂಲ ಮದ್ದಾದ ಜನೆರಿಕ್ ಮದ್ದನ್ನು ಮೂಲ ಬೆಲೆಯಲ್ಲಿ ಅಗ್ಗಕ್ಕೆ ಕೊಡಲು ಸಾಧ್ಯ. ಅದಕ್ಕೆ ಫಾರ್ಮಾ ಪಬ್ಲಿಕ್ ಸೆಕ್ಟರ್ ಅಂಡರ್‍ಟೇಕಿಂಗ್ ಆಫ್ ಇಂಡಿಯಾ ಸ್ಥಾಪನೆ ಆಯಿತು.

ಮೋದಿಯವರು ಪ್ರಧಾನಿ ಆದ ಮೇಲೆ 2015ರಲ್ಲಿ ಅದರ ಹೆಸರನ್ನು ಪ್ರಧಾನ ಮಂತ್ರಿ ಜನೌಷಧಿ ಯೋಜನೆ ಎಂದು ಬದಲಾಯಿಸಿದರು; ತನ್ನ ಫೆÇೀಟೋ ಹಾಕಿದರು. ಅಷ್ಟಕ್ಕೆ ತೃಪ್ತರಾಗದೆ 2016ರ ನವೆಂಬರ್‍ನಲ್ಲಿ ಹೆಸರನ್ನು ಪಿಎಂಬಿಜೆಪಿ- ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಎಂದು ಬದಲಿಸಿದರು. ಪರಿಯೋಜನಾ ಮಾದರಿಯ ಶಬ್ದದ ಮೂಲಕ ಜನರನ್ನು ಮರುಳು ಮಾಡುವುದು ಬಿಜೆಪಿಯ ತಂತ್ರ ಎಂದು ಕೂಡ ಪರಕಾಲ ಪ್ರಭಾಕರ್ ಹೇಳಿದ್ದಾರೆ. ಮನಮೋಹನ್ ಸಿಂಗ್ ಅವರ ಸರಕಾರವು ಬ್ಯಾಂಕ್ ಖಾತೆ ಇಲ್ಲದವರಿಗೆ ಬ್ಯಾಂಕ್ ಖಾತೆ ಹಣವಿಲ್ಲದೆ ತೆರೆಯಲು 2011ರಲ್ಲಿ ಜನ್‍ಧನ್ ಯೋಜನೆ ಆರಂಭಿಸಿತು. ಸಬ್ಸಿಡಿ ಹಣ ಖಾತೆಗೆ ಹಾಕಲು ಇದು ಸಹಾಯಕ. ಮೋದಿಯವರು ಪ್ರಧಾನಿ ಆಗಿ ಅದನ್ನು ಪ್ರಧಾನ ಮಂತ್ರಿ ಜನ್‍ಧನ್ ಮಾಡಿದರು. ಬ್ಯಾಂಕ್ ಖಾತೆ ಇರುವವರು ಸಹ ಜನ್‍ಧನ್ ಖಾತೆ ತೆರೆಯಿರಿ ಎಂದರು. 2013ರಲ್ಲಿ ಮನಮೋಹನ್ ಸಿಂಗ್ ಸರಕಾರವು ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದು ಅದಕ್ಕೆ ಅಡಿಪಾಯ ಹಾಕಿತು. ಅದು ಈಗ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಕಾಸು ಕೊಟ್ಟರೂ ಕೊಡದ ಮಟ್ಟಕ್ಕೆ ರಾಜಕೀಯ ಕಂಡಿದೆ.

ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಗೆದ್ದವರಿಗೂ ಊಟವಿಲ್ಲ, ಸೋತವರಿಗೂ ಊಟವಿಲ್ಲದ ಸ್ಥಿತಿ. ಆಗ ಬ್ರಿಟಿಷರಿಂದ ಜಾರಿಗೆ ಬಂದುದು ಪಡಿತರ ಪದ್ಧತಿ. ಅದು ಜಗತ್ತಿನಲ್ಲಿ ನಾನಾ ರೂಪದಲ್ಲಿ ಮುಂದುವರಿದಿದೆ. ತೆರಿಗೆ ಹಣದ ಒಂದು ಭಾಗವನ್ನು ಸಾಮಾಜಿಕ ನ್ಯಾಯದಡಿ ಹಂಚುವ ವಿಧಾನಗಳಲ್ಲಿ ಪಡಿತರ ಕೂಡ ಒಂದು. ಇಂದಿರಾ ಕ್ಯಾಂಟೀನ್‍ಗಳನ್ನು ಬಿಜೆಪಿ ವಿರೋಧಿಸಿತ್ತು. ಆದರೆ ಅದನ್ನು ಎಲ್ಲ ಮುಚ್ಚಲು ಅದಕ್ಕೆ ಆಗಲಿಲ್ಲ. ಬಿಜೆಪಿ ಶಾಸಕರಾಗಿದ್ದ ಸೋಮಣ್ಣನವರು ಬೆಂಗಳೂರಿನ ತನ್ನ ಕ್ಷೇತ್ರದ ಇಂದಿರಾ ಕ್ಯಾಂಟೀನ್ ಮೇಲೆ ತನ್ನ ಮತ್ತು ತನ್ನ ಅನುಯಾಯಿ ಕೌನ್ಸಿಲರ್ ಫೆÇೀಟೋ ಹಾಕಿಸಿದ್ದರು. ಅವರು ಸೋತು ಅದೀಗ ಬದಲಾಗಿದೆ. ಪುತ್ತೂರು ತಾಲೂಕಿನಲ್ಲಿ ಹಿಂದಿನ ಬಿಜೆಪಿ ಶಾಸಕರು ಉದ್ಘಾಟಿಸಿದ್ದನ್ನು ಈಗಿನ ಕಾಂಗ್ರೆಸ್ ಶಾಸಕರು ಮತ್ತೆ ಉದ್ಘಾಟನೆ ಮಾಡಿದರು ಎಂಬ ತಕರಾರು ಎದ್ದಿತ್ತು. ಇದು ಇಡೀ ದೇಶದಲ್ಲಿ, ಇತಿಹಾಸದ ಉದ್ದಕ್ಕೂ ನಡೆಯುತ್ತ ಬಂದಿದೆ. ಒಂದು ಯೋಜನೆ ಮುಗಿಯುವಾಗ ಹೊಸ ಸರಕಾರ ಬಂದು ಹೊಸಬರದೇ ಎಂಬಂತೆ ಉದ್ಘಾಟಿಸಿದ್ದು ಸಾಕಷ್ಟು ಇದೆ.

ಗಯಾದ ಬುದ್ಧ ಮಂದಿರದಲ್ಲಿ ಬ್ರಾಹ್ಮಣ ಪೂಜಾರಿ, ತುಳುನಾಡಿನ ಶಕ್ತಿ ಪೀಠ, ಶೈವ ಮಂದಿರಗಳಲ್ಲಿ ವೈಷ್ಣವ ಪೂಜಾರಿ, ಕಾನ್‍ಸ್ಟಂಟಿನೋಪಲ್ ಇಗರ್ಜಿ ಮಸೀದಿ ಆದುದು, ಜಗತ್ತಿನ ನಾನಾ ಬುಡಕಟ್ಟು ಆರಾಧನಾಲಯಗಳು ಪರ ವಶವಾದುದು, ಆದಿ ಧರ್ಮಗಳು ದೇವರು ಮರೆತು ಹೋಗಿ ಪಾಳು ಬಿದ್ದಿರುವುದು. ನವದೆಹಲಿ ನಿರ್ಮಿಸಿದ ಒಂದು ದಶಕದಲ್ಲೇ ಬ್ರಿಟಿಷರು ಭಾರತ ಬಿಟ್ಟರು. ಅವರು ವೈಸರಾಯ್‍ರಿಗೆಂದು ಕಟ್ಟಿದ್ದು ರಾಷ್ಟ್ರಪತಿ ಭವನ ಆಯಿತು. ಇವೆಲ್ಲದಕ್ಕೆ ಕಾರಣ ಹೊಸ ಗೆದ್ದ ಅಧಿಕಾರದ ಹೇರಿಕೆ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.