ಬೆಳ್ತಂಗಡಿ ಶಾಸಕನ ವಿರುದ್ಧ ಪೊಲೀಸರಿಗೆ ದೂರು
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರು 24 ಮಂದಿ ಜನರನ್ನು ಹತ್ಯೆ ಮಾಡಿರುವುದಾಗಿ ಸುಳ್ಳು ಆರೋಪ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ನಗರಸಭೆ ಸದಸ್ಯ ಮೊಹಮ್ಮದ್ ರಿಯಾಝ್ ಕೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೇ 22ರಂದು ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿಯ ವಿಜಯೋತ್ಸವ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 24 ಜನರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಕುರಿತು ವೀಡಿಯೋ ಚಿತ್ರಣವೂ ಇದೆ. ಮುಖ್ಯಮಂತ್ರಿಗಳ ವಿರುದ್ಧ ಈ ರೀತಿಯ ಆರೋಪ ಮಾಡಿರುವುದು ಸರಿಯಲ್ಲ. ಆದ್ದರಿಂದ ಹರೀಶ್ ಪೂಂಜ ಅವರನ್ನು ತನಿಖೆ ಮಾಡಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರು ನೀಡುವ ಸಂದರ್ಭ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ ಜೊತೆಗಿದ್ದರು.