ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆ
ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂತರರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಚಿನ್ನ ಹಾಗೂ ವನ್ಯಜೀವಿಗಳ ಕಳ್ಳಸಾಗಾಣೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.
ಅಂತರರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆಯನ್ನು ಕೋಸ್ಟ್‌ಗಾರ್ಡ್ ಕರ್ನಾಟಕದ ಕಮಾಂಡೆಂಟ್ ಪ್ರವೀಣ್ ಕುಮಾರ್ ಮಿಶ್ರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾರತೀಯ ಕಸ್ಟಮ್ಸ್ ಹಾಗೂ ಕೋರ್ಸ್ಟ್‌ಗಾರ್ಡ್ ಎರಡೂ ಇಲಾಖೆಗಳೂ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿವೆ ಎಂದರು.
ಕರ್ನಾಟಕ ವಲಯ ಮುಖ್ಯ ಕಸ್ಟಮ್ಸ್ ಆಯುಕ್ತರಾದ ವಿ. ಉಷಾ ಅವರು ಮಾತನಾಡಿ, ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಾಟ ತಡೆಯುವಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದ ಅವರು, ವಿದೇಶಗಳಿಂದ ಅಂಚೆ ಮೂಲಕ ಆಮದು ಮಾಡಿಕೊಂಡ ಪಾರ್ಸೆಲ್‌ಗಳಿಗೆ ಅನುಮತಿ ನೀಡಲು ದೇಶಾದ್ಯಂತ ವಿದೇಶಿ ಅಂಚೆ ಕಚೇರಿಗಳಲ್ಲಿ ಶೀಘ್ರವೇ ಹೊಸ ವಿಧಾನವನ್ನು ಜಾರಿಗೆ ತರಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರದ ಕಸ್ಟಮ್ಸ್ ಕಮಿಷನರ್ ಅಮಿತೇಶ್ ಭರತ್ ಸಿಂಗ್ ಅವರು ಮಾತನಾಡಿ, ಈ ಹಿಂದಿನಿಂದಲೂ ಕಸ್ಟಮ್ಸ್ ಹಾಗೂ ಕೋಸ್ಟ್‌ಗಾರ್ಡ್ ಅನೇಕ ಕಾರ್ಯಾಚರಣೆಗಳನ್ನು ಜಂಟಿಯಾಗಿ ಕೈಗೊಂಡಿವೆ. ಸಾಗರ ಕವಚ್, ಸೀ ವಿಜಿಲ್ ಇತ್ಯಾದಿ ಪ್ರಮುಖ ಕಾರ್ಯಾಚರಣೆಗಳನ್ನು ನಿರಂತರ ಕೈಗೊಂಡು ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ ಎಂದರು.
ಇದೇ ವೇಳೆಯಲ್ಲಿ ಚಿನ್ನ ಹಾಗೂ ವನ್ಯಜೀವಿಗಳ ಕಳ್ಳಸಾಗಾಣೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು. ಕೆಐಒಸಿಎಲ್ ಅತ್ಯುತ್ತಮ ರಫ್ತುದಾರ ಸಂಸ್ಥೆ, ವೋಲ್ವೊ ಗ್ರೂಪ್ ಆಫ್ ಇಂಡಿಯಾ, ಯು.ಆರ್. ಸ್ಯಾಟಲೈಟ್ ಸೆಂಟರ್ ಅತ್ಯುತ್ತಮ ಆಮದುದಾರ ಸಂಸ್ಥೆ ಎಂಬ ಹೆಗ್ಗಳಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಅತ್ಯುತ್ತಮ ಸಂರ್‍ಷಕಕ ಗೌರವಕ್ಕೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ವಿಭಗದ ಪ್ರಧಾನ ಆಯುಕ್ತೆ ಕಾಜಲ್ ಸಿಂಗ್, ಮಂಗಳೂರು ಕಸ್ಟಂಸ್ ಆಯುಕ್ತೆ ವಿನೀತಾ ಶೇಖರ್ ಉಪಸ್ಥಿತರಿದ್ದರು.