“ಪ್ರಶ್ನೆಯಾದ ಜಯಲಲಿತಾ ವಜ್ರಾಭರಣ”

ತಮಿಳುನಾಡು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದ ಭ್ರಷ್ಟಾಚಾರ ಸಂಬಂಧ ಆರೋಪ ಸಾಬೀತಾಗಿದ್ದ ದಿವಂಗತ ಜಯಲಲಿತಾ ಅವರ ಚಿನ್ನಾಭರಣ ಒಯ್ಯಲು ಬೆಂಗಳೂರಿನ 36ನೇ ಸಿಟಿ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಲಯವು ಮಾರ್ಚ್ 6 ಮತ್ತು 7ನೇ ದಿನಾಂಕಗಳನ್ನು ನೀಡಿದೆ. ಜಯಲಲಿತಾರ ಭ್ರಷ್ಟಾಚಾರ ಪ್ರಕರಣ ಬೆಂಗಳೂರಿನಲ್ಲಿ ವಿಚಾರಣೆ ಆಗಿದ್ದು ಅವರು ಮತ್ತು ಅವರ ಮೂವರು ಸಹಚರರಿಗೆ ತಲಾ 4 ವರುಷ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಆಗ ಜಯಲಲಿತಾರಿಂದ ವಶಪಡಿಸಿಕೊಂಡಿದ್ದ ಕೋಟಿ ಕೋಟಿ ಮೌಲ್ಯದ ವಸ್ತುಗಳು ಬೆಂಗಳೂರಿನ ವಿಧಾನ ಸೌಧದಲ್ಲಿ ಕತ್ತಲ ಕೋಣೆಯಲ್ಲಿ ಇವೆ. ತಮಿಳುನಾಡು ವಿಚಾರಣಾ ವೆಚ್ಚ ತುಂಬಿ ವಸ್ತು ಒಯ್ಯಲು ಕೋರಿದ್ದರಿಂದ ಕೋರ್ಟು ಈಗ ತಾರೀಕು ನೀಡಿದೆ.

ಜಯಲಲಿತಾರ ಹುಟ್ಟು ಹೆಸರು ಕೋಮಲವಲ್ಲಿ. ತಂದೆಯ ತಂದೆ ಮೈಸೂರು ಜಯಚಾಮರಾಜೇಂದ್ರ ಒಡೆಯರ್ ಸೇವೆಯಲ್ಲಿ ಇದ್ದುದರಿಂದ ಮೊಮ್ಮಗಳನ್ನು ಜಯಲಲಿತಾ ಎಂದು ಕರೆದುದೇ ಗಟ್ಟಿಯಾಯಿತು. ಅಂತೂ ಇಂತೂ ಮೈಸೂರು ತಮಿಳುನಾಡನ್ನು ಆಳಿತು ಎಂದು ಕೂಡ ಹೇಳಬಹುದು.

ಅವರು ಜೆ. ಜಯಲಲಿತಾ ಇಲ್ಲವೇ ಜಯಲಲಿತಾ ಜಯರಾಂ. ಈ ಜಯರಾಂ ಸರಿಯಿದ್ದು ಬದುಕಿದ್ದಿದ್ದರೆ ಜಯಲಲಿತಾ ಮತ್ತು ತಾಯಿ ಸಂಧ್ಯಾ ಚಲನಚಿತ್ರ ನಟಿಯರು ಆಗುತ್ತಿರಲಿಲ್ಲ ಎನಿಸುತ್ತದೆ. ಮೈಸೂರಿನಲ್ಲಿ ದೊಡ್ಡ ಬಂಗಲೆ ಇದ್ದ ಈ ಮೇಲುಕೋಟೆ ಅಯ್ಯಂಗಾರ್ ಜಯರಾಂ ಹುಟ್ಟಿನಿಂದಲೂ ದುಶ್ಚಟಗಳ ದಾಸ. ಕುಡಿತ, ಹೆಣ್ಣು, ಜೂಜು ಎಂದು ಸಂಪತ್ತು ವ್ಯಯಿಸಿದ್ದ. 1948ರ ಫೆಬ್ರವರಿ 24ರಂದು ಜಯಲಲಿತಾ ಮೇಲುಕೋಟೆಯಲ್ಲಿ ಹುಟ್ಟಿದ ಎರಡೇ ವರುಷಕ್ಕೆ ಜಯರಾಂ ಸಾವಿನ ವಶವಾಗಿದ್ದ.

ಮೈಸೂರಿನ ಸ್ವರ್ಣ ವಿಲಾಸ ಬಂಗಲೆ ಮುಂದೆ ಕ್ಲಬ್ ಆಯಿತು. ಎಷ್ಟೆಂದರೂ ಅದು ಜಯರಾಂಗೆ ಸೇರಿದ್ದದ್ದು ತಾನೆ. ಅಲ್ಲೂ ಒಂದು ಜಯಲಲಿತಾ ಫೆÇೀಟೋ ಇದೆ. ಗಂಡ ಸತ್ತ ಮೇಲೆ ವೇದವಲ್ಲಿ ಮಗಳನ್ನು ಕರೆದುಕೊಂಡು ಬೆಂಗಳೂರು ಗಾಂಧಿ ಬಜಾರ್‍ನ ತಂದೆ ಮನೆಗೆ ಬಂದರು. 1952ರಲ್ಲಿ ಆಗಿನ ಮದರಾಸ್ ಈಗಿನ ಚೆನ್ನೈಗೆ ಹೋಗಿ ಸಂಧ್ಯಾ ಹೆಸರಿನಲ್ಲಿ ನಟಿಯಾದರು. ಜಯಲಲಿತಾ ಬೆಂಗಳೂರಿನ ಬಿಶಪ್ ಕಾಟನ್ ಸ್ಕೂಲ್‍ನಲ್ಲಿ ಓದಿದರು. ಅಜ್ಜನ ಮನೆಯಲ್ಲಿ ಭರತನಾಟ್ಯ ಕಲಿತರು. ತಮಿಳುನಾಡು ಮುಖ್ಯಮಂತ್ರಿಗಳಲ್ಲಿ ಇಂಗ್ಲಿಷಿನಲ್ಲಿ ಅದ್ಭುತ ಭಾಷಣ ಮಾಡುತ್ತಿದ್ದವರು ಜಯಲಲಿತಾ. ಹಾಗಾಗಿ ಎಂಜಿಆರ್ ಮೊದಲು ಜಯಲಲಿತಾರನ್ನು ರಾಜ್ಯಸಭಾ ಸದಸ್ಯೆ ಮಾಡಿದ್ದರು. ಆರಂಭಿಕ ಓದು ಮುಗಿಸಿ ಜಯಲಲಿತಾ ಚೆನ್ನೈ ತಾಯಿ ಮನೆ ಸೇರಿದರು. 1961ರ ಶ್ರೀಶೈಲ ಮಹಾತ್ಮೆಯಲ್ಲಿ ಬಾಲನಟಿ, ಜಕಣಾಚಾರಿಯಲ್ಲಿ ಯುವ ನರ್ತಕಿ, 1964ರ ಚಿನ್ನದ ಗೊಂಬೆಯಲ್ಲಿ ನಾಯಕಿ. ಮುಂದೆ ತಮಿಳಿನಲ್ಲೇ ಪ್ರಸಿದ್ಧ. ಕನ್ನಡದಲ್ಲಿ ಆರು ಚಿತ್ರಗಳಲ್ಲಿ ಜಯಲಲಿತಾ ನಾಯಕಿಯಾಗಿದ್ದು ಆರರಲ್ಲೂ ಅಯ್ಯಂಗಾರ್ ತರುಣ ಕಲ್ಯಾಣಕುಮಾರ್ ನಾಯಕರಿದ್ದರು. ಆ ತಯಾರಿಕೆಗಳು ಸಹ ಒಂದು ವರ್ಗದ್ದೇ ಆಗಿದ್ದವು.

ತಮಿಳು ಚಿತ್ರಗಳಲ್ಲಿ ಮೊದಲ ಸ್ಕರ್ಟ್ ನಟಿ ಎನ್ನಲಾದ ಜಯಲಲಿತಾ ಎಂಜಿಆರ್ ಕಣ್ಣಿಗೆ ಬಿದ್ದು 1964- 71ರ ನಡುವೆ ಈ ಜೋಡಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿತು. ಎಂಜಿಆರ್ ಅದಾಗಲೇ ನಟ ಭಟ್ ಪತ್ನಿಯಾಗಿದ್ದ ಜಾನಕಿಯವರನ್ನು ಬಿಡಿಸಿ ತಂದು ಮದುವೆಯಾಗಿದ್ದರು. ಜಯಲಲಿತಾ ಕುಮಾರಿ ಆಗಿಯೇ ಉಳಿದರು ಬಿಡಿ. ನಡುವೆ ಹತ್ತಿರದ ಮನೆಯ ತೆಲುಗು ನಟ ಶೋಭನ್ ಬಾಬು ಅವರನ್ನು ಮದುವೆಯಾಗಲು ಹೋಗಿ ವಿಫಲರಾಗಿದ್ದರು. 1977ರಲ್ಲಿ ಎಂಜಿಆರ್ ಮುಖ್ಯಮಂತ್ರಿ ಆಗುತ್ತಲೇ ಮತ್ತೆ ಹತ್ತಿರ. ಎಂಜಿಆರ್ ಅವರಿಗೂ ಚೆನ್ನಾಗಿ ಇಂಗ್ಲಿಷ್ ಬರುವ ಒಬ್ಬರು ಬೇಕಿತ್ತು. 1987ರಲ್ಲಿ ಎಂಜಿಆರ್ ಸತ್ತಾಗ ಜಯಲಲಿತಾರನ್ನು ಹೊರದೂಡಿ ಜಾನಕಿಯವರನ್ನು ಒಂದು ಗುಂಪು ಮುಖ್ಯಮಂತ್ರಿ ಮಾಡಿತು. ಎಡಿಎಂಕೆ ಎರಡಾಗಿ ಒಡೆಯಿತು. ಜಾನಕಿ ಕುರ್ಚಿ ಬಿಟ್ಟು ಯುಎಸ್‍ಎಗೆ ಹೋಗಿ ಬಿಟ್ಟರು. ರಾಜೀವ್ ಗಾಂಧಿಯವರ ಸರಕಾರದ ನೆರವಿನಿಂದ ಜಯಲಲಿತಾ ಮುಖ್ಯಮಂತ್ರಿ ಆದರು. ನಾಲ್ಕು ಬಾರಿ ಮುಖ್ಯಮಂತ್ರಿ, ಎರಡು ಬಾರಿ ಪ್ರತಿ ಪಕ್ಷದ ನಾಯಕಿ. ಅಂತಿಮವಾಗಿ ಭ್ರಷ್ಟಾಚಾರದ ಉರುಳು.

11,000ಕ್ಕೂ ಹೆಚ್ಚು ಭಾರೀ ದರದ ರೇಶಿಮೆ ಸೀರೆಗಳು, 400ಕ್ಕೂ ಹೆಚ್ಚು ದುಬಾರಿ ಚಪ್ಪಲಿಗಳು, ಭಾರೀ ಆಸನಗಳು ಇತ್ಯಾದಿ ಬೆಂಗಳೂರಿನಲ್ಲಿ ರಾಶಿ ಬಿದ್ದಿವೆ. ಈಗ ಕೋರ್ಟು 7,040 ಗ್ರಾಂ ತೂಕದ 468 ಬಗೆಯ ಚಿನ್ನ ವಜ್ರದ ಆಭರಣಗಳು, 700 ಕಿಲೋ ಬೆಳ್ಳಿ ಮತ್ತಿತರ ವಸ್ತು ಒಯ್ಯುವಂತೆ ತಮಿಳುನಾಡಿಗೆ ತಿಳಿಸಿದೆ. ಬರಗೂರ್, ಆಂಡಿಪಟ್ಟಿ, ಶ್ರೀರಂಗಂ ಎಂದು ವಿಧಾನ ಸಭೆಗೆ ಗೆದ್ದಿದ್ದ ಜಯಲಲಿತಾ ಮುಖ್ಯಮಂತ್ರಿ ಆಗಿ ತಮಿಳುನಾಡಿನಲ್ಲಿ ಜನಪ್ರಿಯರು. 2014ರಲ್ಲಿ ಭ್ರಷ್ಟಾಚಾರದಡಿ ಜೈಲು ಶಿಕ್ಷೆ ಆಗಿ ಒಂದು ತಿಂಗಳು ಜೈಲಲ್ಲಿ ಇದ್ದರು. ಆಮೇಲೆ ಜಾಮೀನು ಪಡೆದರು. ಜಯಲಲಿತಾ ಜೊತೆಗೆ ಶಶಿಕಲಾ, ಸುಧಾಕರನ್, ಇಳವರಸಿ ಕೂಡ 4 ವರುಷ ಜೈಲು ಶಿಕ್ಷೆ ಮತ್ತು ದಂಡಕ್ಕೆ ಒಳಗಾಗಿದ್ದರು. ಐದಾರು ತಿಂಗಳು ಆಸ್ಪತ್ರೆಯಲ್ಲಿ ಇದ್ದ ಜಯಲಲಿತಾ 2016ರ ಡಿಸೆಂಬರ್ 5ರಂದು ಸಾವು ಮನೆ ಸೇರಿದರು. ಉಳಿದುದು ನಟಿಯಾಗಿ, ರಾಜಕಾರಣಿಯಾಗಿ ಮಾಡಿದ್ದ ಹೆಸರು. ಭ್ರಷ್ಟಾಚಾರದಲ್ಲಿ ಗಳಿಸಿದ ಯಾವುದನ್ನೂ ಜಯಲಲಿತಾ ಒಯ್ಯಲಿಲ್ಲ. ತಮಿಳುನಾಡು ಸರಕಾರ ಕ್ರಮಬದ್ಧವಾಗಿ ಅವನ್ನೆಲ್ಲ ಪಡೆಯಲಿದೆ. ಅಲೆಗ್ಸಾಂಡರ್ ಸಾಯುವ ಮೊದಲು ರೋಗ ಕಾಯ ಒಯ್ಯುವಾಗ ಕಾಲಿ ಕೈ ಹೊರಗೆ ಹಾಕಿದನಂತೆ. ಜಗತ್ತಿನ ಬಹುತೇಕ ಭಾಗ ಗೆದ್ದ ಅಲೆಗ್ಸಾಂಡರ್ ಸಾಯುವಾಗ ಕಾಲಿ ಕೈಯಲ್ಲಿ ಹೋದ ಎಂಬುದನ್ನು ನೆನಪಿಡಿ ಎಂದು ಹೇಳಿ ಅಸು ನೀಗಿದನಂತೆ. ಜಯಲಲಿತಾ ಹೇಳಲಿಲ್ಲ, ಆದರೆ ಅವರ ಕತೆ ಹೇಳುತ್ತದೆ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.