ಜಸ್ಟ್ ಪಾಸ್ ಪಾಸ್‌ಪೋರ್ಟ್

ಜಾಗತಿಕ ಪಾಸ್‌ಪೋರ್ಟ್ ಪ್ರಭಾವ ಹೇಳುವ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2024ರದು ಹೊರಬಿದ್ದಿದೆ. ಪೋರ್ಬ್ಸ್ ಅದನ್ನು ಅಧಿಕೃತವಾಗಿ ಪ್ರಕಟಿಸಿದೆ. ಭಾರತದ ಪಾಸ್‌ಪೋರ್ಟ್ ಪ್ರಭಾವವು ಮತ್ತೆ 5 ಸ್ಥಾನ ಕೆಳಕ್ಕೆ ಇಳಿದು 85ನೇ ರಿಯಾಂಕಿಗೆ ಹೋಗಿದೆ. ಕಳೆದ ಬಾರಿ 80ರಲ್ಲಿತ್ತು. ಭಾರತದ ಪಾಸ್‌ಪೋರ್ಟ್ ಇದ್ದರೆ 58 ದೇಶಗಳಿಗೆ ವೀಸಾ ಇಲ್ಲದೆಯೇ ಪ್ರಯಾಣ ಮಾಡಬಹುದಿತ್ತು. ಈಗ 62 ದೇಶಗಳಿಗೆ ಪ್ರಯಾಣ ಮಾಡಬಹುದು.

ಪಾಸ್‌ಪೋರ್ಟ್ಎಂದರೆ ಏನು? ಪಾಸ್ ಎಂದರೆ ಹಾದು ಹೋಗುವುದು. ನಾಲ್ಕನ್ನು ಹಾದು ಹೋದರೆ ನೀವು ನಾಲ್ಕನೆಯ ತರಗತಿಯಲ್ಲಿ ಪಾಸು; ಐದಕ್ಕೆ ಹೋದಿರಿ. ಖೈಬರ್ ಪಾಸ್ ಎಂದರೆ ಪರ್ವತಗಳ ನಡುವೆ ಭಾರತಕ್ಕೆ ಪಡುವಣ ಏಶಿಯಾದಿಂದ ಹಾದು ಬರಲು ಇರುವ ಕಣಿವೆ ದಾರಿ. ಪೆಪೋರ್ಟ್ ಎಂದರೆ ಬಂದರು. ಹಿಂದೆಲ್ಲ ವಿದೇಶ ಪ್ರಯಾಣ ಎಂದರೆ ಹಡಗು, ಪಾಂಡಿಗಳ ಮೂಲಕ. ಹಾಗೆ ಹೋಗಲು ಬಂದರು ದಾಟಬೇಕು. ಹಾಗಾಗಿ ಅದು ಪಾಸ್‌ಪೋರ್ಟ್. ಇದರ ಇನ್ನೊಂದು ಕೊನೆ ವೀಸಾ. ಒಂದು ದೇಶದಲ್ಲಿ ನೀವು ಅಧಿಕೃತವಾಗಿ ಓಡಾಡಲು ಅಧಿಕೃತವಾದ ವೀಸಾ ಬೇಕು. ಅವರು ವೀಸಾ ಕೊಡಲು ನಿಮ್ಮ ದೇಶದ ಅಧಿಕೃತ ಪಾಸ್‌ಪೋರ್ಟ್ ಇರಬೇಕು.

ಕೆಲವು ದೇಶಗಳ ಪಾಸ್‌ಪೋರ್ಟ್ ಇದ್ದಲ್ಲಿ ಕೆಲವು ದೇಶಗಳಿಗೆ ಹೋಗಲು ವೀಸಾ ಬೇಕಾಗಿಲ್ಲ. ಅದರಲ್ಲಿ ಎರಡು ಬಗೆಯಿದೆ. ಆ ದೇಶಕ್ಕೆ ಹೋಗಿ ಇಳಿದ ಮೇಲೆ ನೀವು ನಿಶ್ಚಿತ ಶುಲ್ಕ ಸಲ್ಲಿಸಿ ವೀಸಾ ಪಡೆಯಬಹುದು. ಇನ್ನೊಂದು ಕೆಲವು ಪ್ರದೇಶಗಳಲ್ಲಿ ನಿಮಗೆ ನಿಶ್ಚಿತ ಅವಧಿಯವರೆಗೆ ವೀಸಾ ಬೇಕಾಗುವುದಿಲ್ಲ. ಉದಾಹರಣೆಗೆ ಇಂಡೋನೇಶಿಯಾದ ಬಾಲಿ ಪ್ರಾಂತ್ಯಕ್ಕೆ ಹೋದರೆ ನಿಮಗೆ 30 ದಿನಗಳ ಕಾಲ ವೀಸಾ ಅಗತ್ಯವಿಲ್ಲ. ಆದರೆ 31ನೇ ದಿನ ಉಳಿಯಬೇಕೆಂದರೆ 30ರಿಂದ 60 ದಿನಗಳವರೆಗಿನ ಶುಲ್ಕ ಸಲ್ಲಿಸಿ ನೀವು ವೀಸಾ ಪಡೆಯಬೇಕು.

ಒಂದು ಪಾಸ್‌ಪೋರ್ಟ್ ಬರೇ ಪ್ರಭಾವಶಾಲಿ ಆಗಿದ್ದರೆ ಸಾಲದು. ಅದು ಎಷ್ಟು ದಿನಗಳ ವೀಸಾರಹಿತ ಮಾನ್ಯತೆ ಪಡೆದಿದೆ ಎನ್ನುವುದೆಲ್ಲ ಲೆಕ್ಕಕ್ಕೆ ಬರುತ್ತದೆ. ಜಗತ್ತಿನ ಬಲಾಢ್ಯ ಪಾಸ್‌ಪೋರ್ಟ್ ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಪಾಸ್‌ಪೋರ್ಟ್ ಹೆಸರು ಪಡೆದಿದೆ. ಆದರೆ ಅದು 20ನೇ ಸ್ಥಾನದಲ್ಲಿ ಇದೆ. ಅದಕ್ಕೆ ಕಾರಣ ಪ್ರಯಾಣಕ್ಕೆ ಅದು ಬಲಾಢ್ಯವಾದರೂ ಉಳಿಯುವಲ್ಲಿ ಅದು ಕೆಲವು ನಿರ್ಬಂಧಗಳಿಗೆ ಒಳಗಾಗಿದೆ. ಹೆಚ್ಚು ದಿನಗಳ ಅವಕಾಶ ಅಲ್ಲಿ ಪಡೆದಿಲ್ಲ ಎಂಬುದೆಲ್ಲ ಪರಿಗಣಿಸಲ್ಪಟ್ಟಿದೆ ಎಂದು ಅರ್ಥ.

ಫ್ರಾನ್ಸ್ ಕಳೆದ ವರುಷ ಮೂರನೆಯ ಸ್ಥಾನದಲ್ಲೂ, ಸಿಂಗಾಪುರ ಮೊದಲ ಸ್ಥಾನದಲ್ಲೂ ಇತ್ತು. ಸಿಂಗಾಪುರ ಸ್ಥಾನ ಕಳೆದುಕೊಂಡಿಲ್ಲ. ಆದರೆ ಫ್ರಾನ್ಸ್ ಜಗತ್ತಿನ ನಂಬರ್ ಒನ್ ರ್ಯಾಂಕ್ ಪಾಸ್‍ಪೋರ್ಟ್ ಆಗಿ ಮೇಲೆದ್ದಿದೆ. ಮೊದಲ ರ್ಯಾಂಕಿನಲ್ಲಿ ಈಗ ಫ್ರಾನ್ಸ್ ಜೊತೆಗೆ ಜರ್ಮನಿ, ಇಟೆಲಿ, ಜಪಾನ್, ಸಿಂಗಾಪುರ, ಸ್ಪೆಯಿನ್ ದೇಶಗಳೂ ಇವೆ. ಈ ದೇಶಗಳ ಪಾಸ್‍ಪೋರ್ಟ್ ಹೊಂದಿರುವವರು 194 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ ಮಾಡಬಹುದು.


ಫಿನ್ಲೆಂಡ್, ನೆದರ್‍ಲ್ಯಾಂಡ್ಸ್, ತೆಂಕಣ ಕೊರಿಯಾ, ಸ್ವೀಡನ್‍ಗಳ ಪಾಸ್‍ಪೋರ್ಟ್‍ಗಳು 193 ದೇಶಗಳಿಗೆ ವೀಸಾ ಇಲ್ಲದೆ ಹೋಗಲು ಅನುಮತಿಸುತ್ತವೆ. ಎರಡನೆಯ ಸ್ಥಾನದಲ್ಲಿ ಇವೆ ಈ ದೇಶಗಳು. ಡೆನ್ಮಾರ್ಕ್, ಲಕ್ಸೆಂಬರ್ಗ್, ಅಯರ್‍ಲ್ಯಾಂಡ್, ಬ್ರಿಟನ್ ಪಾಸ್‍ಪೋರ್ಟ್ ಮೂಲಕ ವೀಸಾ ಇಲ್ಲದೆ 192 ದೇಶಗಳಿಗೆ ಹೋಗಬಹುದು. ಇವು ಮೂರನೆಯ ರ್ಯಾಂಕ್ ಪಡೆದಿವೆ.


ಬೆಲ್ಜಿಯಂ, ನಾರ್ವೆ, ಪೋರ್ಚುಗಲ್ ಪಾಸ್‍ಪೋರ್ಟ್‍ಗಳಿಂದ 191 ದೇಶಗಳಿಗೆ, ಆಸ್ಟ್ರೇಲಿಯಾ, ಗ್ರೀಸ್, ಮಾಲ್ಟಾ, ನ್ಯೂಜಿಲ್ಯಾಂಡ್, ಸ್ವಿಜರ್‍ಲ್ಯಾಂಡ್ ಪಾಸ್‍ಪೋರ್ಟ್‍ಗಳು 190 ದೇಶಗಳಿಗೆ ವೀಸಾ ಇಲ್ಲದೆ ಅನುಮತಿಸುತ್ತವೆ. ಅನಂತರದ ಸ್ಥಾನದಲ್ಲಿ ಕೆನಡಾ, ಜೆಚಿಯಾ, ಪೋಲೆಂಡ್, ಅಮೆರಿಕ ಸಂಯುಕ್ತ ಸಂಸ್ಥಾನಗಳು ಇವೆ. ಯುಎಸ್‍ಎ 6ನೇ ರ್ಯಾಂಕ್ ಪಡೆದಿದೆ. ಆದರೆ 20ನೇ ಸ್ಥಾನದಲ್ಲಿ ಇದೆ.


ಭಾರತದ ಪಾಸ್‍ಪೋರ್ಟ್‍ನಿಂದ ಈಗ 62 ದೇಶಗಳಿಗೆ ಹೋಗಬಹುದು. ಜಾಗತಿಕವಾಗಿ ಭಾರತದ ಪಾಸ್‍ಪೋರ್ಟ್ ರ್ಯಾಂಕಿಂಗ್ 85 ಆಗಿದೆ. ಭಾರತದಲ್ಲಿ ಪಾಸ್‍ಪೋರ್ಟ್ ಪಡೆಯಲು ಒಂದರಿಂದ ಒಂದೂವರೆ ತಿಂಗಳು ಬೇಕಾಗುತ್ತದೆ. ನಿಮ್ಮ ಆಧಾರ್, ಓಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಖಚಿತ ವಿಳಾಸ ತಪಾಸಣೆ ಎಂದೆಲ್ಲ ಇರುತ್ತದೆ. ಅಷ್ಟೇ ಅಲ್ಲ. ಮೂರು ಬಗೆಯ ಪಾಸ್‍ಪೋರ್ಟ್ ನೀಡಲಾಗುತ್ತದೆ. ಒಂದು ಆರ್ಡಿನರಿ, ಮತ್ತೊಂದು ಕಾಮನ್ ಮಗದೊಂದು ರೆಗುಲರ್. ಪ್ರವಾಸ, ಬಿಜಿನೆಸ್ ಟೂರ್, ವ್ಯಾಪಾರ, ವಿದೇಶೀ ಕೆಲಸ, ಎನ್‍ಆರ್‍ಐ ಇನ್ನಿತರ ವಿಷಯಗಳನ್ನು ಪರಿಶೀಲಿಸಿ ಪಾಸ್‍ಪೋರ್ಟ್ ನೀಡಲಾಗುತ್ತದೆ. ಭಾರತದ 15ರಿಂದ 18ರ ಪ್ರಾಯದ ತರುಣ ತರುಣಿಯರು ಮೈನರ್ ಪಾಸ್‍ಪೋರ್ಟ್‍ಗೆ ಅರ್ಜಿ ಹಾಕಬಹುದು.


ಮಾಲ್ಡೀವ್ಸ್ ಪಾಸ್‍ಪೋರ್ಟ್ ನಮಗೆ ಹತ್ತಿರದಲ್ಲಿರುವ ಪ್ರಭಾವಿ ಪಾಸ್‍ಪೋರ್ಟ್ ಆಗಿದೆ. ಅದರ ರ್ಯಾಂಕಿಂಗ್ 58. ಆ ಪಾಸ್‍ಪೋರ್ಟ್ ಮೂಲಕ ವೀಸಾ ಇಲ್ಲದೆ 96 ದೇಶಗಳಿಗೆ ಹೋಗಬಹುದು. ಅದರ ಹಿಂದಿನ 57ನೇ ರ್ಯಾಂಕಿನಲ್ಲಿ ಕರಾವಳಿಯ ಮೂಲ ಆರ್ಥಿಕ ಬಲವಾಗಿರುವ ಇಲ್ಲವೇ ಇದ್ದ ಕುವೈತ್ ಇದೆ. ಆ ಪಾಸ್‍ಪೋರ್ಟ್ ಮೂಲಕ 102 ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು. ಪಾಸ್‍ಪೋರ್ಟ್ ಎಂದರೂ ಇಂದು ಪಾಸ್‍ಪೋರ್ಟ್ ಮೂಲಕ ಹಡಗಿನಲ್ಲಿ ಹೋಗುವವರು ತೀರಾ ಕಡಿಮೆ. ಪ್ರಯಾಣಿಕ ಹಡಗುಗಳ ಸಂಖ್ಯೆಯೂ ಇಂದು ಕಡಿಮೆ. ಈಗ ಪಾಸ್‍ಪೋರ್ಟ್ ಪಡೆಯುವ 95% ಮಂದಿ ಪ್ರಯಾಣಿಸುವುದು ವಿಮಾನದಲ್ಲಿ.


ನಮ್ಮ ನೆರೆಹೊರೆಯ ದೇಶಗಳ ಪಾಸ್‍ಪೋರ್ಟ್ ಭಾರತಕ್ಕಿಂತ ದುರ್ಬಲವಿವೆ. ಶ್ರೀಲಂಕಾ 101ನೇ ಸ್ಥಾನಿ ಆ ಪಾಸ್‍ಪೋರ್ಟ್ ಮೂಲಕ 43 ದೇಶಗಳಿಗೆ, ಬಾಂಗ್ಲಾದೇಶ 102ನೇ ಸ್ಥಾನಿ ಆ ಪಾಸ್‍ಪೋರ್ಟ್ ಮೂಲಕ 42 ದೇಶಗಳಿಗೆ, ನೇಪಾಳ 103ನೇ ಸ್ಥಾನಿ, ಆ ಪಾಸ್‍ಪೋರ್ಟ್ ಮೂಲಕ 40 ದೇಶಗಳಿಗೆ, ಪಾಕಿಸ್ತಾನ 106ನೇ ಸ್ಥಾನಿ ಆ ಪಾಸ್‍ಪೋರ್ಟ್ ಮೂಲಕ 34 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ ಮಾಡಬಹುದು.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.