ಜನಪರ ಜ್ಯೋತಿ ಫುಲೆ ದಂಪತಿ


ಬಿಎಪಿಎಸ್‍ಎ ಇಲ್ಲವೇ ಬಾಪ್ಸಾ ಅರ್ಥಾತ್ ಬಿರ್ಸ ಅಂಬೇಡ್ಕರ್ ಫುಲೆ ಸ್ಟುಡೆಂಟ್ಸ್ ಎಸೋಸಿಯೇಶನ್ ಎಂಬುದು ದಿಲ್ಲಿಯ ಜೆಎನ್‍ಯು- ಜವಾಹರಲಾಲ್ ನೆಹರು ವಿಶ್ವಿವಿದ್ಯಾ ನಿಲಯದ ಒಂದು ವಿದ್ಯಾರ್ಥಿ ಸಂಘಟನೆಯಾಗಿದೆ. ಇದರ ನಾಯಕಿ ಪ್ರಿಯಾಂಸಿಯವರು ಇತ್ತೀಚೆಗೆ ಜೆಎನ್‍ಯು ಕ್ಯಾಂಪಸ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಹೊಸ ನಕಲು ಹೆಸರುಗಳಲ್ಲಿ ಕಳೆದು ಹೋಗುವವರಿಗೆ ನಮಗಾಗಿ ಹೋರಾಡಿದ ನಮ್ಮ ಹಿರಿಯರ ಹೆಸರುಗಳನ್ನು ನೆನಪು ಮಾಡಿದ ವಿದ್ಯಾರ್ಥಿ ಸಂಘಟನೆಯ ಹೆಸರಿದು.


ಇದು ಎರಡು ಅರ್ಥ ನೀಡುವ ಹೆಸರಾಗಿದೆ ಎನ್ನಬಹುದು. ಬಿರ್ಸ ಅಂಬೇಡ್ಕರ್ ಎಂದರೆ ತುಳುವರು ಅಂಬೇಡ್ಕರ್ ಮಸ್ತ್ ಬಿರ್ಸೆರಾಗಿದ್ದರು ಎಂದು ಕೂಡ ತಿಳಿಯಬಹುದು. ಆದರೆ ಬಿರ್ಸ ಎಂಬುದು ಇಲ್ಲಿ ಬಿರ್ಸ ಮುಂಡಾ ಎಂಬ ಬುಡಕಟ್ಟು ನಾಯಕರನ್ನು ನೆನಪಿಸುವುದಾಗಿದೆ. ಈಗಿನ ಜಾರ್ಖಂಡ್ ಪ್ರದೇಶದ ಬಿರ್ಸ ಮುಂಡಾ ಸ್ವಾತಂತ್ರ್ಯ ಹೋರಾಟದ ಅಂದಿನ ಕಿಡಿಗಳಲ್ಲಿ ಒಬ್ಬರು. ಬುಡಕಟ್ಟು ಜನರಿಗೂ ಕಾಡುತ್ಪತ್ತಿಗೂ ಇರುವ ಅವಿನಾಭಾವದ ಸಂಬಂಧ ಮತ್ತು ಹಕ್ಕಿಗಾಗಿ ಹೋರಾಟ ನಡೆಸಿದವರು. ಬ್ರಿಟಿಷರ ವಿರುದ್ಧ ಹೋರಾಡಿದವರು. 25ರ ಪ್ರಾಯದಲ್ಲಿ 1900ರಲ್ಲಿ ಬಿರ್ಸ ಮುಂಡಾ ರಾಂಚಿ ಸೆರೆಮನೆಯಲ್ಲಿ ಕೊನೆಯುಸಿರೆಳೆದರು.


ಮೇಲಿನ ವಿದ್ಯಾರ್ಥಿ ಸಂಘಟನೆಯ ಹೆಸರಿನಲ್ಲಿರುವ ಫುಲೆ ಎನ್ನುವುದು ಫುಲೆ ದಂಪತಿಯರದು ಎಂದರೆ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರ ಹೆಸರನ್ನು ಸೂಚಿಸುವುದಾಗಿದೆ. ತುಳಿಯಲ್ಪಟ್ಟ ಜನರ ಶಿಕ್ಷಣಕ್ಕಾಗಿ, ಮಹಿಳಾ ಹಕ್ಕುಗಳಿಗಾಗಿ, ದದ್ದುಳಿಯಲ್ಪಟ್ಟವರಿಗೆ ಮೀಸಲಾತಿ ಎಂದು ನಾನಾ ನಿಟ್ಟಿನಲ್ಲಿ ಹೋರಾಡುತ್ತ ಮಡಿದವರು ಈ ದಂಪತಿ. ಆದರೆ ಅಸತ್ಯ ಪ್ರಚಾರದಲ್ಲಿ ಚಾಂಪಿಯನ್ ಆಗಿರುವ ಭಾರತದಲ್ಲಿ ಈ ದಂಪತಿಯ ಹೆಸರು ಪಡೆಯಬೇಕಾದಷ್ಟು ಮಟ್ಟದ ಮಹತ್ವವನ್ನು ಪಡೆದಿಲ್ಲವಲ್ಲ ಎನ್ನುವುದು ವಿಷಾದನೀಯ ಸಂಗತಿ.


ಏಪ್ರಿಲ್ 11, ಮಹಾತ್ಮಾ ಜ್ಯೋತಿಬಾ ಫುಲೆಯವರ ಜನ್ಮ ದಿನ. ಮಹಾತ್ಮಾ ಗಾಂಧೀಜಿಯವರ ಹೆಸರನ್ನು ನಾವು ಕೇಳಿದ್ದೇವೆ. ಆದರೆ ಅದಕ್ಕಿಂತ ಶತಮಾನಗಳ ಹಿಂದೆಯೇ ಪುಣೆಯಲ್ಲಿ ಸಾರ್ವಜನಿಕವಾಗಿ ಮಹಾತ್ಮಾ ಎಂದು ಗೌರವ ಸನ್ಮಾನ ಪಡೆದವರು ಜ್ಯೋತಿಬಾ ಫುಲೆಯವರು. ಮಾಲಿ ಎಂಬ ಅತಿ ಹಿಂದುಳಿದ ಜನ ವರ್ಗದಿಂದ ಬಂದವರು ಈ ಫುಲೆ ದಂಪತಿ. ಭಾರತದಲ್ಲಿ ಮೊದಲು ದಲಿತ ಮತ್ತು ಅತಿ ಹಿಂದುಳಿದ ಜಾತಿಗಳವರಿಗೆ ಮೀಸಲಾತಿ ನೀಡಿದವರು ಕೊಲ್ಲಾಪುರದ ಶಾಹು ಮಹಾರಾಜರು. ಛತ್ರಪತಿ ಶಿವಾಜಿ ವಂಶಜರಾದ ಶಾಹು ಮಹಾರಾಜರಿಗೆ ಈ ಮೀಸಲಾತಿ ನೀಡಲು ಪ್ರೇರಣೆಯಾದವರು ಜ್ಯೋತಿಬಾ ಫುಲೆಯವರು. ಇದನ್ನು ಶಾಹು ಮಹಾರಾಜರೇ ಹೇಳಿಕೊಂಡಿದ್ದಾರೆ.


ಜ್ಯೋತಿಬಾ ಫುಲೆಯವರು ಮರಣಿಸಿದ ಐದಾರು ತಿಂಗಳ ಬಳಿಕ ಜನಿಸಿದ ಭೀ. ರಾ. ಅಂಬೇಡ್ಕರ್ ಅವರಿಗೆ ಜ್ಯೋತಿಬಾ ಫುಲೆಯವರೇ ಮಾನಸಿಕ ಗುರುಗಳು. ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಈ ದಂಪತಿ ಸತ್ಯ ಶೋಧನಾ ಸಮಿತಿಯ ಮೂಲಕ ಸಾಕಷ್ಟು ನಿಜ ಇತಿಹಾಸವನ್ನು ಅಗೆಯುವ ಕೆಲಸವನ್ನೂ ಮಾಡಿದವರು. ಬಲಿ ಚಕ್ರವರ್ತಿಯವರ ಬಗೆಗೆ ಐತಿಹಾಸಿಕ ಮಹತ್ವದ ಕೃತಿ ರಚಿಸಿದವರು ಫುಲೆಯವರು. ಅವರ ಹೋರಾಟದಲ್ಲಿ ಅತಿ ಮುಖ್ಯವಾದುದು ತೀರಾ ಹಿಂದುಳಿದವರಿಗೆ, ದಲಿತರಿಗೆ ಮೀಸಲಾತಿ ನೀಡುವಂತೆ ಬ್ರಿಟಿಷರಿಗೆ ಬರೆದ ಸಾಲು ಪತ್ರಗಳು ಪ್ರಮುಖವಾದವು.


ನಿಮ್ಮ ಅನುಕೂಲಗಳು, ಸಬ್ಸಿಡಿಗಳು, ಶಿಕ್ಷಣ ವ್ಯವಸ್ಥೆ, ಕೆಲಸಾವಕಾಶ ಮೊದಲಾದವುಗಳು ಭಾರತದ ಇದ್ದುಳ್ಳವರಿಗೇ ಸೇರುತ್ತಿವೆ. ತೀರಾ ಕೆಳ ವರ್ಗದವರು ಬ್ರಿಟಿಷರ ಆಡಳಿತದಲ್ಲೂ ಒಳ್ಳೆಯ ದಿನಗಳನ್ನು ಕಾಣುತ್ತಿಲ್ಲ. ಅವರಿಗೆ ಮೀಸಲಾತಿಯ ಅನುಕೂಲ ಕಲ್ಪಿಸಿ ಎಂದು ಫುಲೆಯವರು ಸಾಲು ಪತ್ರಗಳನ್ನು ಬರೆದಿದ್ದರು. ಫುಲೆಯವರಿಂದ ಪ್ರೇರಣೆ ಪಡೆದ ಛತ್ರಪತಿ ಶಿವಾಜಿಯವರ ಐದನೆಯ ತಲೆಮಾರಿನ ಶಾಹು ಮಹಾರಾಜರು 1902ರ ಜುಲಾಯಿ 26ರಂದು ಸರಕಾರಿ ನೌಕರಿ ಮತ್ತು ಸವಲತ್ತಿನಲ್ಲಿ ಅತಿ ಹಿಂದುಳಿದ ಮತ್ತು ದಲಿತ ಜನ ವರ್ಗದವರಿಗೆ 50 ಶೇಕಡಾ ಮೀಸಲಾತಿಯನ್ನು ಜಾರಿಗೆ ತಂದರು.


ಜ್ಯೋತಿಬಾ ಫುಲೆಯವರ ಹೋರಾಟದಲ್ಲಿ ಅವರಿಗೆ ಹೆಗಲೆಣೆಯಾಗಿದ್ದವರು ಸಾವಿತ್ರಿಬಾಯಿ ಫುಲೆಯವರು. ಒಂಬತ್ತು ವರುಷದ ಸಾವಿತ್ರಿ 13ರ ಪ್ರಾಯದ ಫುಲೆಯವರನ್ನು ಮದುವೆಯಾದಾಗ ಆಕೆಯು ಶಾಲೆಗೆ ಹೋದವಳಾಗಿರಲಿಲ್ಲ. ಅದಾಗಲೇ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಲು ನಿರ್ಣಯಿಸಿದ್ದ ಜ್ಯೋತಿಬಾ ಫುಲೆಯವರು ತನ್ನ ಸಾಮಾಜಿಕ ಹೋರಾಟಕ್ಕೆ ಹೆಂಡತಿಯನ್ನೇ ಆರಿಸಿಕೊಂಡರು. ಮನೆಯವರ ವಿರೋಧ ಪರಿಗಣಿಸದೆ ಸಾವಿತ್ರಿಗೆ ತಾನೇ ಅಕ್ಷರಾಭ್ಯಾಸ ಮಾಡಿಸಿದರು. ಸರಕಾರಿ ಪರೀಕ್ಷೆ ಕಟ್ಟಿಸಿದರು.


ಫುಲೆಯವರ ಚಿಕ್ಮಮ್ಮ ಕ್ರಿಶ್ಚಿಯನ್ ಮಿಶನರಿ ಒಬ್ಬರ ಬಳಿ ಕೆಲಸ ಮಾಡುತ್ತ ಇಂಗ್ಲಿಷ್ ಕಲಿತಿದ್ದರು. ಅದನ್ನೂ ತನ್ನದಾಗಿಸಿಕೊಂಡ ಫುಲೆಯವರು ಮಡದಿಗೆ ಇಂಗ್ಲಿಷ್ ಕಲಿಸಿದರು, ಮರಾಠಿಯಲ್ಲಿ ದಂಪತಿ ಬಹು ಬೇಗನೆ ಮಾಸ್ಟರ್ ಆದರು. ದಲಿತರಿಗೆ ಶಾಲೆಗೆ ಹೋಗಲು ಬಿಡುತ್ತಿರಲೆ ಇಲ್ಲ. ದಲಿತರಿಗೆ ಮತ್ತು ಅತಿ ಹಿಂದುಳಿದ ಜಾತಿಗಳವರಿಗಾಗಿ ಫುಲೆ ದಂಪತಿ ಶಾಲೆ ತೆರೆದರು. ಸಾವಿತ್ರಿಗೇ ಶಿಕ್ಷಕಿ ತರಬೇತಿ ಕೊಡಿಸಿ ಭಾರತ ಮೂಲದ ಮೊದಲ ಮಹಿಳಾ ಶಿಕ್ಷಕಿಯಾಗಿ ತಯಾರಿಸಿದರು.


ಇದ್ದುಳ್ಳವರು ಕೊಟ್ಟ ತೊಂದರೆ ಒಂದೆರಡಲ್ಲ. ಶಾಲೆ ಒಡೆದರು. ದಂಪತಿಯ ಮೇಲೆ ಕಲ್ಲೆಸೆದರು, ಕೊಳಕು ಬಿಸಾಕಿದರು. ಜ್ಯೋತಿಬಾರ ತಂದೆಯೇ ಮಗ ಸೊಸೆಯನ್ನು ಮನೆಯಿಂದ ಹೊರಗೆ ಹಾಕಿದರು. ಆದರೆ ಕೆಲವು ಮಿತ್ರರ ಮೂಲಕ ಜ್ಯೋತಿಬಾ ಫುಲೆಯವರು ತನ್ನ ಹೋರಾಟ ಮತ್ತು ಸಾಮಾಜಿಕ ಕಾರ್ಯವನ್ನು ನಿಲ್ಲಿಸಲಿಲ್ಲ. ಸಾವಿತ್ರಿಬಾಯಿ ಫುಲೆಯವರು ಗಂಡನ ಸಾಮಾಜಿಕ ಹೋರಾಟದಲ್ಲಿ ಆಳವಾಗಿ ಈಡುಗೊಂಡರು. ಹಾಗಾಗಿ ಅವರು ಭಾರತ ಮೂಲದ ಮೊದಲ ಶಿಕ್ಷಕಿ, ಮೊದಲ ಬಂಡಾಯ ಕವಯತ್ರಿ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಮೊದಲಿಗಳು ಎಂದು ಮುಂತಾದ ಸಾಧನೆಗಳನ್ನು ಮಾಡಿದರು.


1890ರ ನವೆಂಬರ್ 28ರಂದು ಜ್ಯೋತಿಬಾ ಫುಲೆಯವರು ಮರಣ ಹೊಂದಿದರು. ಎಲ್ಲ ವಿರೋಧಗಳನ್ನು ಲೆಕ್ಕಿಸದೆ ಗಂಡನ ಚಿತೆಗೆ ಬೆಂಕಿಯಿಟ್ಟ ಗಟ್ಟಿಗಿತ್ತಿ ಈ ಸಾವಿತ್ರಿಬಾಯಿ ಫುಲೆ. ದಂಪತಿಯರಲ್ಲಿ ಹೋರಾಟದ, ಸಾಮಾಜಿಕ ಬದ್ಧತೆಯ, ಮೂಢನಂಬಿಕೆ ವಿರೋಧದ, ಜನ ಸೇವೆಯ, ಕಲಿಯುವ ತುಡಿತದ ಸಾಮರಸ್ಯ ಹೊಂದಿದ್ದ ಅತಿ ಅಪರೂಪದ ದಂಪತಿಯರಾಗಿದ್ದರು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿ.

ಬರಹ: ಪೇರೂರು ಜಾರು, ಹಿರಿಯ ಸಂಪಾದಕರು
,,,,,,,,,,,,,,,,,,,,,,,,,,,,,,,,,,,,,,,,,,,

Related Posts

Leave a Reply

Your email address will not be published.