ಸುಳ್ಯದಲ್ಲಿ ಕಾಂಗ್ರೇಸ್ ಬಣಗಳ ನಡುವೆ ವಾಕ್ಸಮರ, ಬಡಿದಾಟ
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ಎರಡು ಬಣಗಳ ಮಧ್ಯೆ ಅಸಮಾಧಾನ ಸ್ಪೋಟಗೊಂಡು, ಬಡಿದಾಟ ಮಾರಾಮಾರಿ ನಡೆದಿದೆ. ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಪರಾಮರ್ಶೆ ಸಭೆಯು ಕಾಂಗ್ರೇಸ್ ಮುಖಂಡರಾದ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಾಯಕರ ಕಾರ್ಯಕರ್ತರ ವಾಕ್ಸಮರ, ಕೈ ಕೈ ಮಿಲಾಯಿಸಿಕೊಳ್ಳವ ರಣರಂಗಕ್ಕೆ ವೇದಿಕೆಯಾಯಿತು.
ರಾಜ್ಯದಲ್ಲಿ ಕಾಂಗ್ರೇಸ್ ಅಭೂತಪೂರ್ವ ಗೆಲವು ಸಾಧಿಸಿದರೂ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿನ ಹೀನಾಯ ಸೋಲು ಅರಗಿಸಕೊಳ್ಳಲಾಗದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷ ಒದ್ದಾಡುತ್ತಿರುವಾಗ ಎರಡು ಬಣಗಳ ಮಧ್ಯೆ ಉಂಟಾದ ಬಹಿರಂಗ ಗುದ್ದಾಟ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಸೋಲಿನ ಪರಾಮರ್ಶೆ ಅವಲೋಕನ ಮಾಡಲು ಆಗಮಿಸಿದ ಕಾಂಗ್ರೇಸ್ ನಾಯಕರು ಬಣ ರಾಜಕೀಯದ ಒಳಬೇಗುದಿ ಹೊರಹಾಕಿದ್ದಾರೆ.
ಕಾಂಗ್ರೇಸ್ ಉಸ್ತುವಾರಿಯಾಗಿದ್ದ ನಂದಕುಮಾರ್ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದ ಟಿಕೇಟ್ ಪಡೆದು ಸ್ಪರ್ಧಿಸುವ ಆಕಾಂಕ್ಷೆ ಇಟ್ಟುಕೊಂಡಿದ್ದರು, ಇದರ ಪೂರ್ವಬಾವಿ ಎಂಬಂತೆ ಕ್ಷೇತ್ರದಾದ್ಯಂತ ಓಡಾಡುತ್ತಾ ಹಣ ಖರ್ಚ ಮಾಡಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಒಡನಾಟ ಸಂಪಾದಿಸಿದ್ದರು. ಕೃಷ್ಣಪ್ಪ ಅವರು ಕೂಡಾ ಉಸ್ತುವಾರಿಯಾಗಿದ್ದುಕೊಂಡು ತನ್ನದೇ ರೀತಿಯಲ್ಲಿ ಕ್ಷೇತ್ರದಲ್ಲಿ ಓಡಾಟ ನಡೆಸಿಕೊಂಡು ಮಿಂಚುತ್ತಿದ್ದರು. ಕೊನೆಗಳಿಗೆಯಲ್ಲಿ ಕೃಷ್ಣಪ್ಪ ಅವರಿಗೆ ಟಿಕೇಟು ಘೋಷಣೆಯಾದ ಬಳಿಕ ನಂದಕುಮಾರ್ ಅಭಿಮಾನಿಗಳು ತಮ್ಮದೇ ತಂಡ ಕಟ್ಟಿಕೊಂಡು ಕೃಷ್ಣಪ್ಪ ಅವರ ಬದಲಿಗೆ ನಂದಕುಮಾರ್ ಅವರಿಗೆ ಬಿಫಾರಂ ನೀಡುವಂತೆ ನಾನಾ ರೀತಿಯ ಒತ್ತಡ ಹಾಕಿದ್ದರೂ ಕೃಷ್ಣಪ್ಪ ಅವರೇ ಅಭ್ಯರ್ಥಿಯಾಗಿ ಉಳಿದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಪಕ್ಷದ ಮುಖಂಡರು ಎರಡೂ ಬಣಗಳನ್ನು ಸೇರಿಸಿ ತೇಪೆ ಹಚ್ಚುವ ಕಾರ್ಯ ಮಾಡಿದರೂ ಮುಖಂಡರು ತಿರುಗಿ ಹೋದ ಬಳಿಕ ತೇಪೆ ಹರಿದು ಹಂಚಿ ಹೋಗಿತ್ತು. ಕೆಲವು ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದ್ದರೂ ಸುಳ್ಯ ವಿಧಾನ ಸಭಾ ಕ್ಷೇತ್ರದ ಎಲ್ಲಾ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ದುಡಿದು ಪಕ್ಷವನ್ನು ಗೆಲ್ಲಿಸುವಲ್ಲಿ ವಿಫಲರಾದರು.
ಬಳಿಕ ನಡೆದ ಬೆಳವಣಿಗೆಯಲ್ಲಿ ಕೆಲವು ನಾಯಕರಿಗೆ ಪಕ್ಷ ವಿರೋಧಿ ಚಟುವಟಿಕೆಯ ಪಟ್ಟ ಕಟ್ಟಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಉಚ್ಚಾಟಿತರು ಇದರಿಂದ ಕೆಂಡಾಮಂಡಲಾಗಿದ್ದರು. ಕೆಲವರು ಪತ್ರಿಕಾ ಹೇಳಿಕೆ ನೀಡಿ ಅಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ನಾಯಕರು ನ್ಯಾಯಕ್ಕಾಗಿ ದೈವದ ಮೊರೆ ಹೋಗಿದ್ದರು. ಬುಧವಾರ ರಾಹುಲ್ ಗಾಂಧಿಯವ ಅವರ ಸಂಸತ್ ಸದಸ್ಯತನ ಅನರ್ಹತೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಉಚ್ಚಾಟಿತ ನಾಯಕರು ಭಾಗವಹಿಸಿ ತಮ್ಮ ಪಕ್ಷ ನಿಷ್ಠೆಯನ್ನು ಪ್ರದರ್ಶಿಸಿದ್ದರು. ಇದು ಕೃಷ್ಣಪ್ಪ ಬಣದವರ ಪಿತ್ತ ನೆತ್ತಿಗೇರಿಸಿತ್ತು. ಇದೀಗ ಇದೇ ಬೇಗುದಿ ಕಡಬದ ಪರಾಮರ್ಶೆ ಸಭೆಯಲ್ಲಿ ಸ್ಪೋಟಗೊಂಡಿದೆ.
ಅಂಬೇಡ್ಕರ್ ಭವನದಲ್ಲಿ ಸಭೆ ಆರಂಭವಾಗಿ ಉಚ್ಚಾಟಿತ ಮುಖಂಡರು ಆಗಮಿಸುತ್ತಿದ್ದಂತೆ ಕೃಷ್ಣಪ್ಪ ಅವರ ಬಣದ ಅಕ್ರೋಶಕ್ಕೆ ಕಾರಣವಾಯಿತು. ಸಭೆ ಮಾತಿನ ಚಕಮಖಿ ಮೂಲಕವೇ ಪ್ರಾರಂಭವಾಯಿತು. ಸ್ವತಃ ಕೃಷ್ಣಪ್ಪ ಅವರೇ ಉಚ್ಚಾಟಿತ ಮುಖಂಡರಿಗೆ ನೀವು ಈ ಸಭೆಗೆ ಯಾಕೆ ಬಂದಿದ್ದೀರಿ, ನಿಮಗೆ ಮಾನ ಮರ್ಯಾದೆ ಇಲ್ಲವೇ ಎಂದು ಛೇಡಿಸಿದ್ದಾರೆ ಎನ್ನಲಾಗಿದೆ. ಬಳಿಕ ಮುಖಂಡರೋರ್ವರು ಸಭೆಯಲ್ಲಿ ಇಂದಿನ ಈ ಸಭೆಯಲ್ಲಿ ಪಕ್ಷದಿಂದ ಉಚ್ಚಾಟಿತರು ಭಾಗವಹಿಸಲು ಅವಕಾಶವಿದೆಯೇ ಎಂದು ಪ್ರಶಸ್ನಿಸಿದರು. ಆಗ ಮಾತಿನ ಚಕಮುಖಿ, ಪರಸ್ಪರ ಹಲ್ಲೆ, ತಳ್ಳಾಟ ನಡೆಯುವ ತನಕ ಮುಟ್ಟಿತು. ಕೃಷ್ಣಪ್ಪ ಬಣದ ಮೂರು ನಾಲ್ಕು ಮಂದಿ ಮುಖಂಡರು ನಂದಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೂ ಇತ್ತಂಡಗಳ ಮಧ್ಯೆ ಅಸಮಾಧಾನ, ಸಿಟ್ಟು ಬೂದಿಮುಚ್ಚಿದ ಕೆಂಡದಂತಿದೆ.