ಮಾರ್ಚ್ ಒಳಗಡೆ ಕಂಬಳಕೂಟ ಮುಕ್ತಾಯಕ್ಕೆ ನಿರ್ಧಾರ

ಮೂಡುಬಿದಿರೆ: 24 ಗಂಟೆಯೊಳಗಡೆ ಕಂಬಳ ಮುಗಿಸುವುದು, ರೆಫ್ರಿಗಳಿಗೆ ಭದ್ರತೆ, ವ್ಯವಸ್ಥಾಪಕರಿಂದ ಸೂಕ್ತ ವ್ಯವಸ್ಥೆ, ಕೋಣಗಳನ್ನು ಕಟ್ಟುವ ವ್ಯವಸ್ಥೆ, ವ್ಯವಸ್ಥಿತ ಕಂಬಳವನ್ನು ಆಯೋಜಿಸುವ ಬಗ್ಗೆ ಹಾಗೂ ನವೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಳ್ಳುವ ಕಂಬಳಕೂಟಗಳನ್ನು ಕೋಣಗಳ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ವರ್ಷದ ಮಾರ್ಚ್ನೊಳಗಡೆ ಮುಕ್ತಾಯಗೊಳಿಸುವ ಕುರಿತು ಸಮಾಜಮಂದಿರದಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಮಿತಿಯ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಯಿತು.

ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಕಂಬಳ ಅಂತಾರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಶಿಸ್ತುಬದ್ಧವಾಗಿ ನಿಗಧಿತ ಸಮಯದಲ್ಲಿ ಮುಗಿಸುವ ಹೊಣೆ ಕೇವಲ ವ್ಯವಸ್ಥಾಪಕರದಲ್ಲ, ಅವರ ಜೊತೆಗೆ ಕಂಬಳಕ್ಕೆ ದುಡಿಯುವ ಪ್ರತಿಯೊಬ್ಬರ ಜವಾಬ್ದಾರಿ. ಕೋಣಗಳ ಆರೋಗ್ಯದ ಹಿತದೃಷ್ಟಿಯಿಂದ 24 ಗಂಟೆಗಳಲ್ಲಿ ಕಂಬಳ ಮುಗಿಸುವುದು ಎಷ್ಟು ಮುಖ್ಯವೋ, ಮಾರ್ಚ್ ಒಳಗಡೆ ಕಂಬಳ ಕೂಟಗಳನ್ನು ಮುಕ್ತಾಯಗೊಳಿಸುವುದು ಕೂಡ ಅಷ್ಟೇ ಮುಖ್ಯ. ಮಾರ್ಚ್ ನಂತರ ತಾಪಮಾನ ಏರಿಕೆಯಾದರೆ ಕೋಣಗಳ ಆರೋಗ್ಯ ಹದಗೆಡುತ್ತದೆ ಎಂದರು.

ಸಮಿತಿಯ ಗೌರವ ಸಲಹೆಗಾರ ಭಾಸ್ಕರ್ ಎಸ್.ಕೋಟ್ಯಾನ್ ಮಾತನಾಡಿ, ಕಂಬಳವನ್ನು ನಿಗಧಿತ ಸಮಯದಲ್ಲಿ ಮುಗಿಸಬೇಕಾದರೆ ಬೆಳಗ್ಗೆ 8.30ರಿಂದ 9 ಗಂಟೆಯ ಒಳಗಡೆ ಪ್ರಾರಂಭಿಸುವುದು ಕೂಡ ಮುಖ್ಯವಾಗುತ್ತದೆ. ಸನ್ಮಾನ, ಸಭಾ ಕಾರ್ಯಕ್ರಮಗಳ ದೀರ್ಘವಾದಲ್ಲಿ ಕೋಣಗಳನ್ನು ಓಡಿಸುವ ಸಮಯಕ್ಕೆ ಸಮಸ್ಯೆಯಾಗುತ್ತದೆ. ಆಯೋಜಕರು ಸಭಾ ಕಾರ್ಯಕ್ರಮಗಳನ್ನು ಅದಷ್ಟು ಚುಟಕಾಗಿ ಮುಗಿಸಿದರೆ ನಿಗಧಿತ ಸಮಯದಲ್ಲಿ ಕಂಬಳವನ್ನು ಮುಗಿಸಬಹುದು ಸಲಹೆ ನೀಡಿದರು.

ಸಮಿತಿಯ ವಕ್ತಾರ ಗುಣಪಾಲ ಕಡಂಬ ಮಾತನಾಡಿ, ಒಂದು ಕಂಬಳ ಕೂಟದಲ್ಲಿ ಯಾವುದಾದರೂ ಸಮಸ್ಯೆಗಳು ಕಂಡುಬಂದಲ್ಲಿ ಮುಂಬರುವ ಕಂಬಳ ಕೂಟದ ವ್ಯವಸ್ಥಾಪಕರ ಜೊತೆ ಸಮಸ್ಯೆಗಳು ಮರುಕಳಿಸದಂತೆ ಕಂಬಳ ಸಮಿತಿಯು ಸಮಾಲೋಚಿಸಿ ಪರಿಹಾರಮಾರ್ಗ ಕಂಡುಕೊಳ್ಳುವುದರಿಂದ ಕಂಬಳವನ್ನು ವ್ಯವಸ್ಥಿತ ರೀತಿಯಲ್ಲಿ ಆಯೋಜಿಸಬಹುದು ಎಂದು ಅಭಿಪ್ರಾಯ ತಿಳಿಸಿದರು.

ರೆಫ್ರಿಗಳಿಗೆ ವ್ಯವಸ್ಥಾಪಕರು, ಕಂಬಳ ಸಮಿತಿಯವರು ಭದ್ರತೆ ಒದಗಿಸಿದಲ್ಲಿ 3-4 ಗಂಟೆಗಳಲ್ಲಿ ಕಂಬಳವನ್ನು ಮುಗಿಸಲು ಸಾಧ್ಯವಿದೆ ಎಂದು ತೀರ್ಪುಗಾರರ ಸಂಚಾಲಕ ಸುರೇಶ್ ಕೆ. ಪೂಜಾರಿ ರೆಂಜಾಳಕಾರ್ಯ ಸಲಹೆ ನೀಡಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಜೈನ್, ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ, ಚಂದ್ರಹಾಸ ಸನಿಲ್, ಕೈಪ ಕೇಶವ ಭಂಡಾರಿ, ವಕ್ತಾರ ರಾಜೀವ್ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಹರ್ಷವರ್ಧನ್ ಪಡಿವಾಳ್, ತೀರ್ಪುಗಾರರಾದ ಸುಧಾಕರ ಶೆಟ್ಟಿ ಮುಗರೋಡಿ, ರವೀಂದ್ರಕುಮಾರ್ ಕಕ್ಕುಂದೂರು, ವಲೇರಿಯನ್ ಡೇಸ ಅಲ್ಲಿಪಾದೆ, ಪ್ರಮುಖರಾದ ಸತೀಶ್ಚಂದ್ರ ಸಾಲ್ಯಾನ್ ಇರುವೈಲು ಪಾಣಿಲ, ಮಹಾಕಾಳಿಬೆಟ್ಟು ಸೀತಾರಾಮ ಶೆಟ್ಟಿ, ಮಾಣಿಸಾಗು ಉಮೇಶ್ ಶೆಟ್ಟಿ, ತ್ರಿಶಾಲ್, ಪ್ರಮುಖರಾದ ರಾಧಾಕೃಷ್ಣ ಬೊಮ್ಮರಬೆಟ್ಟು ಮತ್ತಿತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.