ಏ.18ಕ್ಕೆ ವಿನಯಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ
ಕಾರ್ಯಕರ್ತರ ಆಶೀರ್ವಾದ, ಮುಖಂಡರ ಬೆಂಬಲದೊಂದಿಗೆ ಕಾಪು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸುವ ಅವಕಾಶ ದೊರಕಿದ್ದು, ಆ ನಿಟ್ಟಿನಲ್ಲಿ ಏ 18ಕ್ಕೆ ನಾಮಪತ್ರ ಸಲ್ಲಿಸಲಾಗುವುದು ಎಂಬುದಾಗಿ ಅಭ್ಯರ್ಥಿ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಕಾಪು ರಾಜೀವ ಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಏ 18 ರ ಬೆಳಿಗ್ಗೆ 10 ಗಂಟೆಗೆ ಕಾಪು ಜನಾರ್ದನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ನಮ್ಮ ಕ್ಷೇತ್ರದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಕಾಪುವಿನ ಕಾಂಗ್ರೆಸ್ ಕಛೇರಿಗೆ ತೆರಳಿ, ಕಛೇರಿಯ ಮುಂಭಾಗ ಸಾರ್ವಜನಿಕ ಸಭೆ ನಡೆಸಿ ಮಧ್ಯಾಹ್ನ ಹನ್ನೆರಡರ ಬಳಿಕ ನಾಮಪತ್ರ ಸಲ್ಲಿಸಲಾಗುವುದೆಂದರು. ನಾಮಪತ್ರ ಸಲ್ಲಿಕೆಯ ಸಂದರ್ಭ ಯಾವುದೇ ಪಕ್ಷಗಳಂತೆ ಕ್ಷೇತ್ರವಲ್ಲದ ಕ್ಷೇತ್ರದಿಂದ ಜನರನ್ನು ತಂದು ಶಕ್ತಿ ಪ್ರದರ್ಶನ ಮಾಡುವ ಇಚ್ಛೆ ನಮಗಿಲ್ಲ, ನಮ್ಮ ಕ್ಷೇತ್ರದ ಮತದಾರೊಂದಿಗೆ ತೆರಳಿ ಅವರ ಆಶೀರ್ವಾದದೊಂದಿಗೆ ನಾಮಪತ್ರ ಸಲ್ಲಿಸಲಾಗುವುದೆಂದ ಅವರು, ನಾನು ನನ್ನ ಅಧಿಕಾರಾವಧಿಯಲ್ಲಿ ನಡೆಸಿದ ಅಭಿವೃದ್ಧಿ, ಜನಸೇವೆ ಹಾಗೂ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಹಾಗೂ ಅದರ ನಾಯಕರು ನಡೆಸಿದ ಬೆಲೆ ಏರಿಕೆ ಸಹಿತ ಅನೇಕ ಗೊಂದಲಗಳನ್ನು ಜನ ತುಲನೆ ಮಾಡಿ ಜನ ನನ್ನನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಎಂ.ಎ. ಗಪೂರ್, ನವೀನ್ ಚಂದ್ರ ಶೆಟ್ಟಿ, ವೈ. ಸುಕುಮಾರ್ ಇದ್ದರು.