ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಉಡುಪಿಯ ಅಭಿನ್ ಬಿ. ದೇವಾಡಿಗ
ಅಸ್ಸಾಮಿನ ಗುವಾಹಟಿಯಲ್ಲಿ ನಡೆದ ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉಡುಪಿಯ ಅಭಿನ್ ಬಿ. ದೇವಾಡಿಗ ಚಿನ್ನ ಗೆದ್ದಿದ್ದಾರೆ.
200 ಮೀಟರ್ ಓಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಅಭಿನ್, 21 ಸೆಕೆಂಡ್ ನಲ್ಲಿ ಗುರಿ ಮುಟ್ಟಿದ್ದಾರೆ. ಜೈನ್ ಯುನಿವರ್ಸಿಟಿ ಬೆಂಗಳೂರಿನಲ್ಲಿ ಓದುತ್ತಿರುವ ಅವರು, ಉಡುಪಿ ಅಜ್ಜರಕಾರು ಕ್ರೀಡಾಂಗಣದ ಟ್ರ್ಯಾಕ್ ಆಂಡ್ ಫೀಲ್ಡ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಉಡುಪಿಯ ಜಹೀರ್ ಅಬ್ಬಾಸ್ ಗರಡಿಯಲ್ಲಿ 2017 ರಿಂದ ತೊಡಗಿಕೊಂಡಿದ್ದು, ಈವರೆಗೆ ರಾಷ್ಟ್ರೀಯ ಮಟ್ಟದಲ್ಲಿ ಅಭೀನ್ ದೇವಾಡಿಗ ಮೂರು ಚಿನ್ನದ ಪದಕ ಗೆದ್ದಿದ್ದಾರೆ. ಸಂಸ್ಥೆಯಲ್ಲಿ ಈವರೆಗೆ 200 ಕ್ಕೂ ಹೆಚ್ಚು ಕ್ರೀಡಾಪಟುಗಳು ತಯಾರಾಗಿದ್ದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 600 ಕ್ಕೂ ಮಿಕ್ಕಿ ಪದಕಗಳು ಸಂಸ್ಥೆಗೆ ಬಂದಿವೆ.