ಡಾ. ಪಿ ದಯಾನಂದ ಪೈ ವಿಶ್ವ ಕೊಂಕಣಿ ಪುರಸ್ಕಾರ 2022 ಪ್ರಕಟ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಈ ವರ್ಷದಿಂದ ಎರಡು ಹೊಸ ಪ್ರಶಸ್ತಿಗಳನ್ನು ದಾನಿ ಡಾ. ಪಿ. ದಯಾನಂದ ಪೈ ಇವರ ಹೆಸರಿನಲ್ಲಿ ಸ್ಥಾಪಿಸಿದೆ. ಜ್ಯೂರಿ ಸಮಿತಿಗಳ ಶಿಫಾರಸಿನ ಮೇರೆಗೆ ಇದೀಗ ವಿಶ್ವ ಕೊಂಕಣಿ ಕೇಂದ್ರವು ಈ ಪ್ರಶಸ್ತಿಗಳ ವಿಜೇತರ ಹೆಸರುಗಳನ್ನು ಪ್ರಕಟಿಸಿದೆ. ಸಾರ್ವಜನಿಕರಿಂದ ಆನ್ ಲೈನ್ ಮುಖಾಂತರ ಆಹ್ವಾನಿಸಲಾದ ನಾಮ ನಿರ್ದೇಶನಗಳ ಆಧಾರದಲ್ಲಿ ಜ್ಯೂರಿ ಸಮಿತಿಯ ಸದಸ್ಯರ ಮೌಲ್ಯಮಾಪನದ ಬಳಿಕ ಪ್ರಶಸ್ತಿಗಾಗಿ ಆಯ್ಕೆಗಳನ್ನು ಪ್ರಕಟಿಸಲಾಗಿದೆ.ಗೋವಾದ ಹೆಸರಾಂತ ರಂಗ ಕರ್ಮಿ, ನಟ, ನಿರ್ದೇಶಕ ಹಾಗೂ ರಂಗ ವಿನ್ಯಾಸಕ ಶ್ರೀ ಅಜಿತ್ ಗಣಪತ್ ಶೆಣ್ವಿ ಕೇರ್ಕರ್ ಇವರು ಕೊಂಕಣಿ ರಂಗಭೂಮಿಗೆ ನೀಡಿರುವ ಆಜೀವ ಕೊಡುಗೆಯನ್ನು ಪರಿಗಣಿಸಿ 2022ನೇ ಸಾಲಿನ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರ ಕ್ಕೆ ಆಯ್ಕೆ ಮಾಡಲಾಗಿದೆ.

ಅನೇಕ ಕೊಂಕಣಿ ಸಾಹಿತ್ಯ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸುವ ಮೂಲಕ ಜಾಗತಿಕ ನೆಲೆಯಲ್ಲಿ ಕೊಂಕಣಿ ಸಾಹಿತ್ಯಕ್ಕೆ ಒಂದು ಅನನ್ಯತೆಯನ್ನು ಕಲ್ಪಿಸಿರುವ ಕಲ್ಕತ್ತಾದ ಶ್ರೀಮತಿ ವಿದ್ಯಾ ಪೈ ಇವರನ್ನು 2022ನೇ ಸಾಲಿನ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರ ಕ್ಕೆ ಆಯ್ಕೆ ಮಾಡಲಾಗಿದೆ.
ಒಂದು ಲಕ್ಷ ರೂಪಾಯಿಗಳ ಸಮ್ಮಾನಧನ ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿರುವ ಈ ಪ್ರಶಸ್ತಿಗಳನ್ನು ಫೆಬ್ರುವರಿ 9 ರಂದು ಬೆಳಿಗ್ಗೆ 10 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿರುವ ವಾರ್ಷಿಕ ವಿಶ್ವ ಕೊಂಕಣಿ ಪುರಸ್ಕಾರ ಸಮಾರಂಭದಲ್ಲಿ ದಾನಿ ಡಾ. ಪಿ. ದಯಾನಂದ ಪೈ ಇವರ ಉಪಸ್ಥಿತಿಯಲ್ಲಿ ಪ್ರದಾನಿಸಲಾಗುವುದು.
ಜ್ಯೂರಿ ಸಮಿತಿಗಳು:
ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪುರಸ್ಕಾರ: ಡಾ. ಜಿ. ಜಿ ಲಕ್ಷ್ಮಣ ಪ್ರಭು (ಅಧ್ಯಕ್ಷರು), ಜಾನ್ ಪೆರ್ಮನ್ನೂರು, ಮುರಳೀಧರ ಶೆಣೈ ಕೊಚ್ಚಿ, ಸಂಜೀವ ವೆರೆಂಕರ್ ಗೋವಾ (ಸದಸ್ಯರು).
ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರ: ಪಯ್ಯನೂರು ರಮೇಶ ಪೈ (ಅಧ್ಯಕ್ಷರು), ಡಾ. ಕಿರಣ ಬುಡ್ಕುಳೆ, ಗೋಕುಲದಾಸ ಪ್ರಭು, ಮೆಲ್ವಿನ್ ರೋಡ್ರಿಗಸ್ (ಸದಸ್ಯರು).
ಪ್ರಶಸ್ತಿ ವಿಜೇತರ ಕಿರು ಪರಿಚಯ:
ಶ್ರೀ ಅಜಿತ್ ಗಣಪತ್ ಶೆಣ್ವಿ ಕೇರ್ಕರ್: ಕೊಂಕಣಿ ರಂಗಭೂಮಿಗೆ 54 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿರುವ ಶ್ರೀ ಕೇರ್ಕರ್ ಗೋವಾದಲ್ಲಿ ವಾಸವಾಗಿದ್ದಾರೆ. ಇಂದು 72 ವರ್ಷ ವಯಸ್ಸಿನಲ್ಲಿಯೂ ಸಕ್ರಿಯವಾಗಿ ನಟನೆ, ನಿರ್ದೇಶನ ಮತ್ತು ರಂಗ ವಿನ್ಯಾಸದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದುವರೆಗೆ 89 ರಂಗ ನಿರ್ಮಾಣಗಳಲ್ಲಿ ನಟನೆ, 43 ರಂಗ ನಿರ್ಮಾಣಗಳಿಗೆ ನಿರ್ದೇಶನ ಹಾಗೂ ಅಸಂಖ್ಯ ಪ್ರದರ್ಶನಗಳನ್ನು ಗೋವಾ ಹಾಗೂ ಮಹಾರಾಷ್ಟ್ರಗಳ ಹಲವೆಡೆ ನೀಡಿದ್ದಾರೆ. ಒಟ್ಟು 143 ರಂಗ ನಿರ್ಮಾಣಗಳ ಯಶಸ್ಸಿಗೆ ಪಾಲುದಾರರಾಗಿದ್ದಾರೆ. ನಟನೆಗಾಗಿ 35, ನಿರ್ದೇಶನಕ್ಕಾಗಿ 5 ಹಾಗೂ ರಂಗ ವಿನ್ಯಾಸಕ್ಕಾಗಿ 4 ವಿಶೇಷ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಶ್ರೀ ಕೇರ್ಕರ್ ರವರು ಗೋವಾ ರಾಜ್ಯ ಮಟ್ಟದ ಅತ್ಯುತ್ತಮ ನಟ ಪ್ರಶಸ್ತಿಯನ್ನು 7 ಬಾರಿ ಹಾಗೂ ಸತತ 4 ಬಾರಿ ಗಳಿಸಿರುವ ಏಕೈಕ ನಟರಾಗಿದ್ದಾರೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು 3 ಬಾರಿ ಗಳಿಸಿ ರಾಷ್ಟ್ರಮಟ್ಟದ 2 ಹಾಗೂ ರಾಜ್ಯ ಮಟ್ಟದ 2 ದ್ವಿತೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಶ್ರೀಮತಿ ವಿದ್ಯಾ ಪೈ: ಕಲ್ಕತ್ತಾದಲ್ಲಿ ವಾಸವಾಗಿರುವ ಶ್ರೀಮತಿ ವಿದ್ಯಾ ಪೈಯವರು ಇದುವರೆಗೆ 68 ಕೊಂಕಣಿ ಸಣ್ಣ ಕತೆಗಳು ಹಾಗೂ 7 ಕೊಂಕಣಿ ಕಾದಂಬರಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ವಿಶ್ವದಾದ್ಯಂತದ ಪ್ರತಿಷ್ಟಿತ ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಾಶಿಸಿದ್ದಾರೆ. ಅವರ ಅನುವಾದಗಳ ಮೇಲೆ ಸಂಶೋಧನಾ ಪ್ರಬಂಧಗಳ ಮಂಡನೆಯಾಗಿವೆ. ವಿದ್ಯಾ ಪೈಯವರ ಅನುವಾದದ ಕೆಲಸಗಳಿಂದಾಗಿ ಇಂದು ಕೊಂಕಣಿ ಸಾಹಿತ್ಯಕ್ಕೆ ವಿಶ್ವ ಸ್ತರದ ಅನನ್ಯತೆಯು ಪ್ರಾಪ್ತವಾಗಿದೆ. ಕೊಂಕಣಿ ಸಾಹಿತ್ಯವು ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳಲು ವಿದ್ಯಾ ಪೈಯವರು ಮಾಡಿದ ಆಂಗ್ಲ ಅನುವಾದವೂ ಕಾರಣವಾಗಿದೆ.


ವಿಶ್ವ ಕೊಂಕಣಿ ಕೇಂದ್ರ:
1996ನೇ ಇಸವಿಯಲ್ಲಿ ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈಯವರ ನೇತೃತ್ವದಲ್ಲಿ ಪ್ರಾರಂಭವಾದ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನವು ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸಿದ್ದು ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗಾಗಿ ಹಾಗೂ ಕೊಂಕಣಿ ಸಮುದಾಯಗಳ ಸರ್ವಾಂಗೀಣ ಬೆಳವಣಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಶ್ರೀ ನಂದಗೋಪಾಲ ಶೆಣೈಯವರು ಈ ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತಾರೆ.

Related Posts

Leave a Reply

Your email address will not be published.