ಕುಂದಾಪುರ: ಸೇನಾಪುರ ರೈಲ್ವೇ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆಗೆ ಹೋರಾಟ ಸಮಿತಿಯಿಂದ ಆಗ್ರಹ

ಕುಂದಾಪುರದ ಸೇನಾಪುರ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ನೇತೃತ್ವದಲ್ಲಿ ಸೇನಾಪುರ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಆಗ್ರಹಿಸಿ ಚಲೋ ಸೇನಾಪುರ ಬೃಹತ್ ಪ್ರತಿಭಟನೆ ನಡೆಸಿದರು.

ಬೃಹತ್ ಪ್ರತಿಭಟನೆ ಮೆರವಣಿಗೆ ನಾಡಾ ಗ್ರಾಮ ಪಂಚಾಯತ್‍ನಿಂದ ಆರಂಭಗೊಂಡು ಸೇನಾಪುರ ರೈಲ್ವೇ ನಿಲ್ದಾಣದವರೆಗೆ ಸಾಗಿಬಂದು, ಬಳಿಕ ರೈಲ್ವೇ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಹೋರಾಟ ಸಮಿತಿಯ ಸಂಚಾಲಕ ರಾಜೀವ್ ಪಡುಕೋಣೆ ಮಾತನಾಡಿ, ಸೇನಾಪುರ ರೈಲ್ವೇ ನಿಲ್ದಾಣದಲ್ಲಿ ಮೂರು ರೈಲ್ವೇ ಟ್ರ್ಯಾಕ್‍ಗಳಿರುವುದಲ್ಲದೇ, ರೈಲು ನಿಲುಗಡೆಗೆ ಬೇಕಾದ ಪೂರಕವಾದ ಎಲ್ಲಾ ವ್ಯವಸ್ಥೆಗಳಿದ್ದರೂ ಇಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಯಾಗುತ್ತಿಲ್ಲ. ಎಕ್ಸ್ ಪ್ರೆಸ್ ರೈಲು ನಿಲುಗಡೆಯಾದರೇ ಇಲ್ಲಿನ ಸುತ್ತಮುತ್ತ ಸುಮಾರು 24 ಗ್ರಾಮದ ಜನರಿಗೆ ಪ್ರಯೋಜನವಾಗಲಿದೆ. ಕಾರವಾರ, ಗೋವಾ, ರತ್ನಗಿರಿ, ಮುಂಬೈ, ಹಾಸನ, ಮೈಸೂರು, ಬೆಂಗಳೂರು ಹಾಗೂ ಕೇರಳ ರಾಜ್ಯದ ನಗರಗಳಲ್ಲಿ ವಾಸವಿರುವವರಿಗೆ ಪ್ರಯಾಣಕ್ಕೆ ಸುಲಭವಾಗುತ್ತದೆ. ಇಲ್ಲಿ ರೈಲು ನಿಲುಗಡೆ ಮಾಡುವುದರಿಂದ ರೈಲ್ವೇ ಇಲಾಖೆಗೂ ಲಾಭವಾಗಲಿದೆ ಎಂದು ಹೇಳಿದರು.

ಮರವಂತೆ ವರಹ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಸತೀಶ್ ಎಂ. ನಾಯಕ್ ಅವರ ಮಾತನಾಡಿ
ಸೇನಾಪುರದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆಯಾದರೇ ಇಲ್ಲಿನ ಸ್ಥಳೀಯ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗಲಿದೆ. ಸೇನಾಪುರದ ರೈಲ್ವೇ ನಿಲ್ದಾಣದ ಸುತ್ತಮುತ್ತಲಿನ ಪ್ರವಾಸೋದ್ಯಮಕ್ಕೂ ಇದು ಪರೋಕ್ಷವಾಗಿ ಅನುಕೂಲವಾಗಲಿದೆ ಎಂದರು.

ಸೇನಾಪುರ ರೈಲ್ವೆ ಸ್ಟೇಷನ್ ಮಾಸ್ಟರ್ ಸುಕುಮಾರ್ ಕುಂದಾಪುರ ತಾಲೂಕು ಸೇನಾಪುರ ರೈಲ್ವೇ ಮನವಿಯನ್ನು ಸ್ವೀಕರಿಸಿ ಮೇಲಧಿಕಾರಿಗೆ ಮನವಿ ಸಲ್ಲಿಸುವುದಕ್ಕೆ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್‍ನ ಮಾಜಿ ಸದಸ್ಯರಾದ ಕೆನಡಿ ಪಿರೆರಾ, ಕಾರ್ಮಿಕ ಮುಖಂಡ ಸುರೇಶ್ ಕಲ್ಲಗಾರ್, ಕೆಂಚನೂರು ಸೋಮಶೇಖರ್ ಶೆಟ್ಟಿ, ಮಾಜಿ ಮಂಡಲ ಪ್ರಧಾನರು ಅರುಣ್ ಕುಮಾರ್ ಶೆಟ್ಟಿ, ಮರವಂತೆ ವರಾಹ ಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಎಂ ನಾಯಕ್ ಮರವಂತೆ, ಅರವಿಂದ ಪೂಜಾರಿ, ಹೋರಾಟ ಸಮಿತಿಯ ಮುಖಂಡ ಫಿಲಿಪ್ ಡಿ’ಸಿಲ್ವಾ, ರಾಜೇಶ್ ಪಡುಕೋಣೆ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಸೇರಿ 24 ಗ್ರಾಮದ ಗ್ರಾಮಸ್ಥರು, ಹೋರಾಟ ಸಮಿತಿಯ ಸದಸಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.