ಮಂಗಳೂರು : ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶ
ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ವಿಫಲವಾಗಿದ್ದು, ಜನರಿಗೆ ನರೇಂದ್ರ ಮೋದಿ ಗ್ಯಾರಂಟಿ ಮೇಲೆ ಮಾತ್ರ ವಿಶ್ವಾಸ ಮೂಡಿದೆ. ಹೀಗಾಗಿ ರಾಜ್ಯದ ಜನರು ನರೇಂದ್ರ ಮೋದಿ ಜೊತೆಗಿದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಂಘನಿಕೇತನದಲ್ಲಿ ನಡೆದ ಬಿಜೆಪಿ ಬೂತ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಇಂದು ನಮ್ಮ ಪ್ರಮುಖ ಬೂತ್ ಕಾರ್ಯಕರ್ತರು ಜೊತೆಗಿದ್ದೀರಿ. ಮಂಗಳೂರು ಮುಂಬೈನ ಬಹಳ ದೊಡ್ಡ ಸಂಪರ್ಕ ಸೇತು. ಮಂಗಳೂರಿನ ಹಲವರು ಮುಂಬೈನಲ್ಲಿ ಬಿಜೆಪಿ ಬೆಳೆಸಲು ಕೆಲಸ ಮಾಡುತ್ತಾ ಇದ್ದಾರೆ. ಅಲ್ಲಿನ ಕುಟುಂಬಗಳೇ ಇವತ್ತು ನನಗೆ ಇಲ್ಲಿ ಸಿಕ್ಕಿದೆ. 2024ರ ಚುನಾವಣೆ ಹೊಸ ಇತಿಹಾಸ ನಿರ್ಮಿಸುವ ಚುನಾವಣೆಯಾಗಿದೆ ಎಂದರು.
ಇದೇ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ರೈಲ್ವೇ ಇಲಾಖೆ ಅಭಿವೃದ್ಧಿಯಾಗಿದೆ. ಎಂಆರ್‌ಪಿಎ, ಮೀನುಗಾರಿಕಾ ಜಟ್ಟಿ, ಪ್ಲಾಸ್ಟಿಕ್ ಪಾರ್ಕ್, ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಗಳು, ಅದ್ಭುತವಾಗಿ ಮಂಗಳೂರು ಪರಿವರ್ತನೆಯಾಗುತ್ತದೆ. ನುಡಿದಂತೆ ನಡೆದ ಸರ್ಕಾರ ನರೇಂದ್ರ ಮೋದಿ ಸರ್ಕಾರವಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಪ್ರತಿ ಮತದಾರರನ್ನು ಮತಗಟ್ಟೆಯಲ್ಲಿ ಭೇಟಿಯಾಗಿ, ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಕೆಲಸವನ್ನು ಬೂತ್ ಕಾರ್ಯಕರ್ತರು ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ್ ಕಾಮತ್, ಡಾ. ವೈ ಭರತ್ ಶೆಟ್ಟಿ, ರಾಜೇಶ್ ನಾಯಕ್, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ಬ್ರಿಜೇಶ್ ಚೌಟ ಮೊದಲಾದವರು ಪಾಲ್ಗೊಂಡಿದ್ದರು.