ಮುಡಿಪು : ಕುರ್ನಾಡು ಗ್ರಾ.ಪಂ ಎದುರು ಪ್ರತಿಭಟನೆ
ಮುಡಿಪು : ಪೌರಕಾರ್ಮಿಕನಾಗಿ ಕಳೆದ 20 ವರ್ಷಗಳಿಂದ ದುಡಿಯುತ್ತಿದ್ದ ಬಾಬಣ್ಣ ಅವರನ್ನು ಏಕಾಏಕಿ ಕೆಲಸದಿಂದ ತೆಗೆದು, ಯಾವುದೇ ಸರಕಾರಿ ಸೌಲಭ್ಯವನ್ನು ನೀಡದ ಕುರ್ನಾಡು ಗ್ರಾಮದ ಅಭಿವೃದ್ಧಿ ಅಧಿಕಾರಿ ಹಾಗೂ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಮುಡಿಪು ಕುರ್ನಾಡುವಿನ ಗ್ರಾ.ಪಂ ಕಚೇರಿಯೆದುರು ಪ್ರತಿಭಟನೆ ನಡೆಯಿತು.
ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಪ್ರತಿಭಟೆನೆ ಉದ್ದೇಶಿಸಿ ಮಾತನಾಡಿ, ಕೊರಗ ಸಮುದಾಯದ ಬಾಬಣ್ಣ ಎಂಬವರನ್ನು ಕಸ ವಿಲೇವಾರಿ ಕೆಲಸದಿಂದ ಏಕಾಏಕಿ ಕಿತ್ತುಹಾಕಿರುವುದು ಖಂಡನೀಯ. ಸರಕಾರಿ ಸೌಲಭ್ಯಗಳನ್ನು ನೀಡದೇ ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಿರುವ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಹಾಗೂ ರಾಜ್ಯ ಸರಕಾರ ತಕ್ಷಣವೇ ಅವರನ್ನು ಪುನರ್ ನೇಮಿಸಿ, ಅವರ ಕುಟುಂಬಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಲಬೇಕಿದೆ. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಯತ್ತೇವೆ ಅನ್ನುವ ಎಚ್ಚರಿಕೆಯನ್ನು ಹೇಳಿದ್ದಾರೆ.
ಕೆಲಸ ಕಳೆದುಕೊಂಡ ಬಾಬಣ್ಣ ಮಾತನಾಡಿ, 20 ವರ್ಷಗಳಿಂದ ದುಡಿಯುತ್ತಾ ಬಂದಿದ್ದೇನೆ. ಈ ವೃತ್ತಿಯನ್ನು ನಡೆಸುತ್ತಲೇ ಮನೆಗೆ ಆಧಾರವಾಗಿದ್ದೇನೆ. ಬಟ್ಟಿ ಕೆಲಸ ನಿರ್ವಹಿಸುತ್ತಿದ್ದವನನ್ನು ಪಿಡಿಓ ನೆ ಸ್ವತ: ಅಂದು ಕರೆದುಕೊಂಡು ಬಂದು ಆರೋಗ್ಯ ಇರುವವರೆಗೂ ಕೆಲಸ ನಿರ್ವಹಿಸಲು ಭರವಸೆ ನೀಡಿದ್ದರು. ಆದರೆ ಇದೀಗ ವಯಸ್ಸಿನ ಮಿತಿಯನ್ನಿಟ್ಟು ಏಕಾಏಕಿ ಕಿತ್ತುಹಾಕಿದ್ದಾರೆ ಎಂದರು.
ಈ ಸಂದರ್ಭ ದಲಿತ್ ಸೇವಾ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಶೇಖರ್ ವಿಟ್ಲ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ಉಳ್ಳಾಲ ತಾಲೂಕು ಶಾಖಾದ್ಯಕ್ಷ ನಾಗೇಶ್ ಮುಡಿಪು, ಉಪಾಧ್ಯಕ್ಷ ಜಗದೀಶ್ ಮಂಜನಾಡಿ, ಉಮಾನಾಥ ಕೋಟ್ಯಾನ್, ರೋಹಿತ್ ಉಳ್ಳಾಲ್, ನರೇಂದ್ರ ಉಳ್ಳಾಲ್, ಮೀನಾಕ್ಷಿ ನೆಲ್ಲಿಗುಡ್ಡೆ, ವಿಮಲಾ ಶೀಗೆಬಲ್ಲೆ ಉಪಸ್ಥಿತರಿದ್ದರು.