ಮಂಗಳೂರು : ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ಉದ್ಘಾಟನೆ
ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸವಲತ್ತುಗಳಿರುವ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ನೂತನ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಕೇರ್ ಸೆಂಟರ್ ಮತ್ತು ಬ್ಲೋಸಮ್ ಡಿಲಕ್ಸ್ ಕೊಠಡಿಗಳನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಸಚಿವರು ಮತ್ತು ಅತಿಥಿಗಳು ನೂತನ, ಸರ್ವಸಜ್ಜಿತ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಕೇರ್ ಸೆಂಟರ್ ಮತ್ತು ಬ್ಲೋಸಮ್ ಡಿಲಕ್ಸ್ ಕೊಠಡಿಗಳನ್ನು ವೀಕ್ಷಿಸಿದರು. ನವೀನ ತಂತ್ರಜ್ಞಾನವನ್ನೊಳಗೊಂಡ ನೂತನ ಸ್ಕಾನಿಂಗ್ ಮೆಶಿನ್, ಸಮಾಲೋಚನಾ ಕೊಠಡಿ, ಡೇಕೇರ್ ಸೆಂಟರ್ ಮೊದಲಾದೆಡೆ ಅತಿಥಿಗಳೊಂದಿಗೆ ತೆರಳಿದ ಸಚಿವರು ಅಲ್ಲಿನ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸಚಿವರು ಮತ್ತು ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ಕ್ಷೇತ್ರದಲ್ಲಿ ಕೆಎಂಸಿ ಆಸ್ಪತ್ರೆ ಉತ್ತಮ ಹೆಸರಿನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇಂದು ಕ್ಯಾನ್ಸರ್ ಸರ್ವವ್ಯಾಪಿಯಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಲಾಗುತ್ತದೆ. ಕೆಎಂಸಿ ಆಸ್ಪತ್ರೆಯ ಈ ನೂತನ ಘಟಕದ ಮೂಲಕ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಬಹುದಾಗಿದೆ. ಆರಂಭಿಕ ಹಂತದಲ್ಲಿ ರೋಗ ಪತ್ತೆಯಾದರೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕ್ಯಾನ್ಸರ್‌ನ್ನು ಗುಣಪಡಿಸಬಹುದು ಎಂದು ಹೇಳಿದರು.
ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ಮಾತನಾಡಿ, ಇವತ್ತು ಕ್ಯಾನ್ಸರ್ ಯಾವ ಕಾರಣದಿಂದ ಬರುತ್ತದೆ ಎಂದು ತಿಳಿದಿಲ್ಲ. ಈ ಬಗ್ಗೆಯೂ ಸಂಶೋಧನೆಗಳಾಗಬೇಕು. ಕೆಎಂಸಿ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಾಹೆಯ ಪ್ರೋ. ಚಾನ್ಸೆಲರ್ ಡಾ. ಎಚ್.ಎಸ್. ಬಳ್ಳಾಲ್, ವೈಸ್ ಚಾನ್ಸಲರ್ ಲೆಫ್ಪಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್, ಮಂಗಳೂರು ಕ್ಯಾಂಪಸ್‌ನ ಪ್ರೊ. ವೈಸ್ ಚಾನ್ಸಲರ್ ಡಾ. ದಿಲೀಪ್ ಜಿ. ನಾಕ್, ಡಾ ಆನಂದ್ ವೇಣುಗೋಪಾಲ್, ಡಾ. ಬಿ ಉನ್ನಿಕಷ್ಣನ್, ಡಾ. ಜಾನ್ ರಾಮಪುರಂ, ಅರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.