ಮಂಗಳೂರಿನಲ್ಲಿ ಜುವೆಲ್ಲರಿ ಶಾಪ್ ಗೆ ನುಗ್ಗಿ ವ್ಯಕ್ತಿಯ ಕೊಲೆ

ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ಬಲ್ಮಠದಲ್ಲಿ ನಡೆದಿದೆ. ನಗರದಲ್ಲಿರುವ ಮಂಗಳೂರು ಜುವೆಲ್ಲರಿಗೆ ನುಗ್ಗಿದ ಮುಸುಕುಧಾರಿ ವ್ಯಕ್ತಿಯೊಬ್ಬ ಅಲ್ಲಿನ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿದ್ದಾನೆ. ಜುವೆಲ್ಲರಿ ಉದ್ಯೋಗಿ, ಅತ್ತಾವರ ನಿವಾಸಿ ರಾಘವ (52) ಕೊಲೆಯಾದ ವ್ಯಕ್ತಿ. ಮಧ್ಯಾಹ್ನ ಮುಸುಕು ಹಾಕಿಕೊಂಡು ಬಂದಿದ್ದ ವ್ಯಕ್ತಿ ಕೃತ್ಯ ಎಸಗಿದ್ದಾನೆ.

ಜುವೆಲ್ಲರಿ ಮಾಲಕ ಊಟಕ್ಕೆಂದು ತೆರಳಿದ್ದಾಗ ಆಗಂತುಕ ಒಳಗೆ ಬಂದಿದ್ದ. ಮಾಲಕ ಬರುವಷ್ಟರಲ್ಲಿ ಚೂರಿ ಇರಿದು ಪರಾರಿಯಾಗಿದ್ದ. ಮುಸುಕು ಹಾಕಿದ್ದ ಎನ್ನಲಾಗುತ್ತಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಘವ ಅವರನ್ನು ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಲ್ಲಿ ರಾಘವ ಅವರು ಸಾವನ್ನಪ್ಪಿದ್ದಾರೆ. ಯಾವ ಕಾರಣಕ್ಕೆ ಕೃತ್ಯ ಎಸಗಿದ್ದಾನೆಂದು ತಿಳಿದು ಬಂದಿಲ್ಲ.