ಮಂಗಳೂರು: ಕುಳಾಯಿ ಕಿರುಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಸಂಸದ ನಳಿನ್ ಭೇಟಿ, ಪರಿಶೀಲನೆ
ಕುಳಾಯಿಯಲ್ಲಿ ನಿರ್ಮಾಣವಾಗುತ್ತಿರುವ ಕಿರು ಜೆಟ್ಟಿಯು ನಾಡದೋಣಿ ಮೀನುಗಾರರಿಗೆ ಅನುಕೂಲವಾಗುತ್ತಿಲ್ಲ. ಈಗಿನ ಬ್ರೇಕ್ ವಾಟರ್ ನಿರ್ಮಾಣ ಅವೈಜ್ನಾನಿಕವಾಗಿದ್ದು, ನಾಡದೋಣಿಕೆ ಪೂರಕವಾಗಿ ನಿರ್ಮಿಸಲಾಗುತ್ತಿಲ್ಲ. ಮೀನುಗಾರರು ಪ್ರಾಣ ಭೀತಿಯಲ್ಲಿದ್ದಾರೆ ಎಂದು ನಾಡದೋಣಿ ಮೀನುಗಾರರು ಹಾಗೂ ಸಾಂಪ್ರದಾಯಿಕ ಮೂಲ ಮೀನುಗಾರರ ಸಂಘಟನೆಗಳು ಸಂಸದ ನಳಿನ್ ಕುಮಾರ್ ಕಟೀಲ್ ಮುಂದೆ ಅಸಮಾಧಾನ ತೋಡಿಕೊಂಡರು.
ಕುಳಾಯಿಯ ಕಿರು ಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರು ಮೀನುಗಾರರ ಮನವಿಯ ಮೇರೆಗೆ ಭೇಟಿ ನೀಡಿ ಪರಿಶೀಲನೆಯ ಬಳಿಕ ಅಹವಾಲು, ಮನವಿ ಸಲ್ಲಿಸಿದರು.
ಬ್ರೇಕ್ ವಾಟರ್ ಕನಿಷ್ಠ 500 ಮೀಟರ್ ಉದ್ದವಿರಬೇಕು, ಇಲ್ಲದೇ ಹೋದಲ್ಲಿ ನಾಡದೋಣಿ ದಡಕ್ಕೆ ಬರುವ ಮುಂಚೆಯೇ ಅಲೆಗೆ ಉರುಳಿ ಬೀಳುವ ಭೀತಿ ಎದುರಾಗಿದೆ. ನಾಡದೋಣಿ ನಿಲ್ಲಲು ಮರಳು ದಂಡೆ ಅಗತ್ಯವಾಗಿದೆ. ಇನ್ನು ಮಳೆಗಾಲದಲ್ಲಿ ಮುಂದಿನ ಬಾರಿಯೂ ಎನ್‌ಎಂಪಿಟಿಯಲ್ಲಿ ನಾಡದೋಣಿ ನಿಲ್ಲಲು ಅವಕಾಶ ಕಲ್ಪಿಸಬೇಕು ಎಂದು ಅಶ್ವಥ್ ಕಾಂಚನ್, ಸುರೇಶ್ ಶ್ರೀಯಾನ್ ,ಚಂದ್ರಶೇಖರ್ ಗುಡ್ಡೆಕೊಪ್ಲ ಮತ್ತಿತರರು ಒತ್ತಾಯಿಸಿದರು.
ಮಂಗಳೂರಿನಲ್ಲಿ ದೊಡ್ಡ ಬೋಟ್‌ಗಳ ನಿಲುಗಡೆಗೆ ದಕ್ಕೆಯಿದೆ, ಅದರ ವಿಸ್ತರಣೆಯಾಗುತ್ತಿದೆ. ಆದರೆ ನಾಡದೋಣಿಗಳು ಮಳೆಗಾಲದ ಮೀನುಗಾರಿಕೆ ನಂಬಿ ಕಡಲಿಗಿಳಿಯುತ್ತವೆ ಈ ಕುಳಾಯಿ ಕಿರು ಜೆಟ್ಟಿ ನಾಡದೋಣಿಗೆ ಹೆಚ್ಚು ಬಳಕೆಯಾಗಬೇಕು.ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಎರಡು ವಾರದಲ್ಲಿ ನಾಡದೋಣಿ ಮೀನುಗಾರರ ಜತೆ ನಡೆಸುವ ಈ ಸಂದರ್ಭ ತಿದ್ದು ಪಡಿ ಮಾಡಿದ ಹೊಸ ಯೋಜನೆ ಜತೆಯಲ್ಲಿರಬೇಕು ಎಂದು ಸ್ಥಲದಲ್ಲಿಯೇ ಆಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರು ಮಾತನಾಡಿ, ಕಿರು ಜೆಟ್ಟಿ ನಾಡದೋಣಿ ಮೀನುಗಾರರಿಗೆ ಅನುಕೂಲವಾಗುವಂತೆ ಇರಬೇಕು. ನಾಡದೋಣಿ ಮೀನುಗಾರರ ಮನವಿ ಮೇರೆಗೆ ಬಂದಿದ್ದೇವೆ. ಅವರಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಿ ಎಂದು ಸೂಚಿಸಿದರು.
ಮೀನುಗಾರ ಸಮಾಜದ ಮುಖಂಡರಾದ ಉಮೇಶ್ ಟಿ.ಕರ್ಕೇರ, ಗಣೇಶ್ ಹೊಸಬೆಟ್ಟು, ಮನಪಾ ಸದಸ್ಯರಾದ ವೇದಾವತಿ, ಸುಮಿತ್ರ ಕರಿಯ, ಅಶ್ವಥ್ ,ರಾಜೇಶ್ ಬೈಕಂಪಾಡಿ, ಎನ್‌ಎಂಪಿಎ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ನಿಭವಾಂಕರ್, ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಶೆಣೈ ಮತ್ತಿತರರಿದ್ದರು.