ರಾಷ್ಟ್ರೀಯ ಶಿಕ್ಷಣ ನೀತಿ- 2020ರ ಕುರಿತು ಶಿಕ್ಷಣ ತಜ್ಞರ ವಿಶೇಷ ಸಭೆ
ಮಂಗಳೂರಿನ ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ- 2020 ರ ಕುರಿತು ಶಿಕ್ಷಣ ತಜ್ಞರ ವಿಶೇಷ ಸಭೆಯು ಸೆ.14ರಂದು ನಗರದ ಕೆನರಾ ಹೈಸ್ಕೂಲ್ ಆವರಣದ ಶ್ರೀ ಭುವನೇಂದ್ರ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಮಂಗಳೂರಿನ ಸಂಚಾಲಕರಾದ ಪ್ರೋ.ರಾಜಶೇಖರ ಹೆಬ್ಬಾರ್ ಮಾಹಿತಿ ನೀಡಿದರು.
ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಎನ್‍ಇಪಿ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಹೊರಟಿರುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರ ಶಿಕ್ಷಣ ವಿರೋಧಿ ಮತ್ತು ರಾಜಕೀಯ ಪ್ರೇರಿತವಾದುದು. ರಾಜ್ಯದ ವಿದ್ಯಾರ್ಥಿಗಳ ಹಿತಕ್ಕೆ ಮಾರಕವಾಗಿದ್ದು, ವಿವೇಚನ ರಹಿತವೂ ಆಗಿದೆ ಅಂತಹ ಶಿಕ್ಷಣ ವಿರೋಧಿ, ವಿದ್ಯಾರ್ಥಿ ವಿರೋಧಿ ಸರ್ಕಾರದ ವಿರುದ್ಧ ಸೆ.14ರಂದು ಸಂಜೆ 4 ಗಂಟೆಗೆ ಕೆನರಾ ಹೈಸ್ಕೂಲ್ ಡೊಂಗರಕೇರಿ ಸಮೀಪದ ಭುವನೇಂದ್ರ ಸಭಾಂಗಣದಲ್ಲಿ ಶಿಕ್ಷಣ ತಜ್ಞರ ಸಭೆಯನ್ನು ಮಾಡುವುದರ ಮೂಲಕ ಸರ್ಕಾರವನ್ನು ಎಚ್ಚರಿಸಲಿದ್ದೇವೆ ಎಂದರು.
ಸಂಘದ ಸಂಚಾಲಕರಾದ ರಮೇಶ್ ಕೆ ಅವರು ಮಾತನಾಡಿ, ಈ ಸಭೆಯು ಸಂಜೆ ಸರಿಯಾಗಿ 4 ಗಂಟೆಗೆ ಆರಂಭಗೊಳ್ಳಲಿದ್ದು, ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಬೆಂಗಳೂರಿನ ಖ್ಯಾತ ಪತ್ರಕರ್ತರಾದ ರವೀಂದ್ರ ರೇಷ್ಮೆ, ವಿಟಿಯು ಬೆಳಗಾವಿಯ ವಿಶ್ರಾಂತ ಕುಲಪತಿ ಪ್ರೊ. ಕರಿಸಿದ್ದಪ್ಪ, ಸೆಸ್ ಬೆಂಗಳೂರಿನ ನಿರ್ದೇಶಕರಾದ ಗೌರೀಶ್ ಭಾಗವಹಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿವಿಯ ನಿಕಟಪೂರ್ವ ಸಿಂಡಿಕೇಟ್ ಸದಸ್ಯರಾದ ರವಿಚಂದ್ರ ಪಿ.ಎಮ್ ಅವರು ಉಪಸ್ಥಿತರಿದ್ದರು.