ಬಂಟ್ವಾಳ: ಸೆಪ್ಟಂಬರ್ 16ರಂದು ಬಿ.ಸಿ.ರೋಡಿನಲ್ಲಿ ಹಿರಿಯ ರಂಗಕರ್ಮಿ ಮಂಜು ವಿಟ್ಲ ನುಡಿನಮನ

ತುಳುಕೂಟ ಬಂಟ್ವಾಳವು ಮಂಜು ವಿಟ್ಲ ಅವರ ಬಂಧು ಬಳಗ, ಅಭಿಮಾನಿ ಬಳಗ ಹಾಗೂ ಸಮಾನ ಮನಸ್ಕರ ಪಾಲ್ಗೊಳ್ಳುವಿಕೆಯೊಂದಿಗೆ ಸೆಪ್ಟಂಬರ್ 16ರಂದು ಸಂಜೆ 4.30ಕ್ಕೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಹಿರಿಯ ರಂಗಕರ್ಮಿ, ತರಬೇತುದಾರ ಮಂಜು ವಿಟ್ಲ ಅವರಿಗೆ ನುಡಿನಮನ-ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಿದೆ.
ಮಂಜು ವಿಟ್ಲ ಅವರು ಹಿರಿಯ ರಂಗಕರ್ಮಿಯಾಗಿ, ಬಹುಮುಖಿ ಕ್ಷೇತ್ರಗಳ ಸಾಧಕರಾಗಿ, ಹಿರಿಯ ತರಬೇತುದಾರರಾಗಿ, ವಿವಿಧ ಸಂಘಟನೆಗಳ ಮಾರ್ಗದರ್ಶಕರಾಗಿ, ಎಲ್ಲದಕ್ಕಿಂತಲೂ ಮಿಗಿಲಾಗಿ ಎಲ್ಲರೊಂದಿಗೆ ಪ್ರೀತಿ-ಮಾನವೀಯ ನೆಲೆಯಲ್ಲಿ ಆತ್ಮೀಯ ಒಡನಾಡಿಯಾಗಿ ಜನಾನುರಾಗಿಯಾಗಿದ್ದರು.
ಸಾಮಾಜಿಕ, ಧಾರ್ಮಿಕ, ರಾಜಕೀಯ, ಸೇವಾ ಕ್ಷೇತ್ರಗಳ ಸಹಿತ ಮಂಜು ವಿಟ್ಲ ಅವರು ತೊಡಗಿಸಿಕೊಂಡಿದ್ದ ಎಲ್ಲಾ ಕ್ಷೇತ್ರಗಳು ಮತ್ತು ಸಂಘಟನೆಗಳ ಪ್ರತಿನಿಧಿಗಳು, ಬಂಧುಮಿತ್ರರು, ಹಿತೈಷಿಗಳು, ಶಿಷ್ಯರು, ಅಭಿಮಾನಿಗಳು ಈ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತುಳುಕೂಟ ಪ್ರಕಟಣೆ ತಿಳಿಸಿದೆ.
