ಮಂಗಳೂರು: ಪ್ರತಿಯೊಂದು ವಿಚಾರದಲ್ಲೂ ರಾಜ್ಯ ಸರ್ಕಾರದಿಂದ ಜನತೆಗೆ ಅನ್ಯಾಯ: ವೇದವ್ಯಾಸ ಕಾಮತ್ ಕಿಡಿ
ಮಂಗಳೂರು: “ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೇಳೋರು ಕೇಳೋರು ಯಾರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಗಲಭೆಯಲ್ಲಿ ನಾವಿದನ್ನು ಕಣ್ಣಾರೆ ಕಂಡಿದ್ದೇವೆ. ಅಲ್ಲಿ ಅಮಾಯಕರ ಮೇಲೆ ಹಲ್ಲೆ ಮನೆಗಳ ಮೇಲೆ ದಾಳಿಗಳು ನಡೆದಿವೆ. ಮುಖ್ಯಮಂತ್ರಿ, ಗೃಹಸಚಿವರು ಏನೂ ನಡೆದೇ ಇಲ್ಲವೆಂಬಂತೆ ಮಾತಾಡುತ್ತಿದ್ದಾರೆ” ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಕಿಡಿಕಾರಿದ್ದಾರೆ.
“ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಬಂಧುಗಳಿಗೆ ಅನ್ಯಾಯವಾಗುತ್ತಿದೆ. ರಾಜ್ಯದೆಲ್ಲೆಡೆ ಆಧಾರ್ ನೋಂದಣಿ ಮತ್ತಿತರ ಕೆಲಸವನ್ನು ಮಾಡಿಕೊಳ್ಳಲು ಜನರು ಸರಕಾರಿ ಕಚೇರಿಗಳಲ್ಲಿ ಕ್ಯೂ ನಿಲ್ಲುವ ಪರಿಸ್ಥಿತಿಯಿದೆ. ಎಲ್ಲಿ ನೋಡಿದರೂ ಸರ್ವರ್ ಸಮಸ್ಯೆ ಎನ್ನುತ್ತಾರೆ. ಇನ್ನು ಕರೆಂಟ್ ಬಿಲ್ ಹೆಚ್ಚಳ, ಲೋಡ್ ಶೆಡ್ಡಿಂಗ್ ಸಮಸ್ಯೆ ಸಾಮಾನ್ಯವಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಯಾವುದೇ ತುರ್ತು ಕ್ರಮ ಜರುಗಿಸುವುದು ಕಾಣುತ್ತಿಲ್ಲ. ಸರಕಾರ ವಿದ್ಯುತ್ ಬಿಲ್ ಏರಿಸಿ ಜನರಿಗೆ ತೊಂದರೆಯನ್ನು ನೀಡುತ್ತಿದೆ” ಎಂದು ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
“ಇದೊಂದು ದರೋಡೆಕೋರ ಸರ್ಕಾರವಾಗಿದ್ದು ಈ ಬಗ್ಗೆ ಜನರು ಎಚ್ಚರದಿಂದಿರಬೇಕು. ಸೈಬರ್ ವಂಚನೆ ಮಿತಿಮೀರಿ ನಡೆಯುತ್ತಿದ್ದು ಜನರ ಖಾತೆಯಿಂದ ಹಣ ಕದಿಯುತ್ತಿದ್ದಾರೆ. ಇದರ ಜವಾಬ್ದಾರಿಯನ್ನು ಸರಕಾರವೇ ತೆಗೆದುಕೊಳ್ಳಬೇಕು. ಇ ಖಾತಾ ಕೆಲಸ ಕೂಡಾ ಸೂಕ್ತ ಸಮಯದಲ್ಲಿ ನಡೆಯುತ್ತಿಲ್ಲ. ಸೈಬರ್ ವಂಚನೆಯನ್ನು ಸರಕಾರವೇ ನಡೆಸುತ್ತಿರುವ ಗುಮಾನಿಯಿದೆ. ಸರಕಾರ ಹಣ ಕಳೆದುಕೊಂಡವರಿಗೆ ಹಣವನ್ನು ಕೊಡಬೇಕು.
ವೃದ್ಧರು, ಅಸಹಾಯಕರು, ವಿಧವೆಯರು ಹೀಗೇ ಎಲ್ಲರಿಗೂ ಈ ಹಿಂದೆ ಸಿಗುತ್ತಿದ್ದ ಸವಲತ್ತು ಸಿಗುತ್ತಿಲ್ಲ. ಎಲ್ಲಕ್ಕೂ ಬಿಪಿಎಲ್ ಕಾರ್ಡ್ ಮಾನದಂಡ ಮಾಡಲಾಗುತ್ತಿದೆ. ಆದರೆ ಕಳೆದ ನಾಲ್ಕು ತಿಂಗಳಿಂದ ಒಂದೇ ಒಂದು ಹೊಸ ಬಿಪಿಎಲ್ ಕಾರ್ಡ್ ಮಾಡಲಾಗಿಲ್ಲ. ಇಂತದ್ದೇ ನೂರಾರು ಸಮಸ್ಯೆಗಳು ದಿನನಿತ್ಯ ಎದುರಾಗುತ್ತಿದ್ದು ಜಿಲ್ಲಾಡಳಿತ, ಮಂತ್ರಿಗಳ ಸಹಿತ ಯಾರೂ ಕಿವಿಗೊಡುತ್ತಿಲ್ಲ. ಇದು ಕಳೆದ ನಾಲ್ಕು ತಿಂಗಳುಗಳ ಕಾಂಗ್ರೆಸ್ ಆಡಳಿತ ಜನರಿಗೆ ಕೊಟ್ಟಿರುವ ಬಹುದೊಡ್ಡ ಸಾಧನೆ” ಎಂದು ಟೀಕಾ ಪ್ರಹಾರಗೈದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್, ವಿಜಯ್ ಕುಮಾರ್, ನಿತಿನ್ ಕುಮಾರ್, ಮಾಜಿ ಮೇಯರ್ ಗಳಾದ ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ್, ಪ್ರಧಾನ ಕಾರ್ಯದರ್ಶಿ ರೂಪಾ ಬಂಗೇರ, ಸುರೇಂದ್ರ ಜಪ್ಪಿನಮೊಗರು ಉಪಸ್ಥಿತರಿದ್ದರು.