Mangaluru : ವಿದ್ಯುತ್ ಖಾಸಗೀಕರಣದ ವಿರುದ್ದ ಮೆಸ್ಕಾಂ ಕಚೇರಿಯೆದುರು ಪ್ರತಿಭಟನೆ
ಆಧುನಿಕ ನಾಗರಿಕ ಸಮಾಜದ ಕೇಂದ್ರ ನರಮಂಡಲದಂತೆ ಕಾರ್ಯನಿರ್ವಹಿಸುವ ಹಾಗೂ ಎಲ್ಲಾ ಕೈಗಾರಿಕೆಗಳ ತಾಯಿಯಂತಿರುವ ಅತ್ಯಂತ ಪ್ರಮುಖ ಸೇವೆಯಾದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವ ನರೇಂದ್ರ ಮೋದಿ ಸರಕಾರದ ಕಾರ್ಪೊರೇಟ್ ಪರ ನೀತಿಯನ್ನು ವಿರೋಧಿಸಿ ದೇಶಾದ್ಯಂತ ನಡೆದ ಹೋರಾಟದ ಭಾಗವಾಗಿ ಮಂಗಳೂರಿನ ಬಿಜೈಯಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿ,ತೊಕ್ಕೋಟು ಹಾಗೂ ಗುರುಪುರ ಕೈಕಂಬ ಮೆಸ್ಕಾಂ ಕಚೇರಿಯೆದುರು ರೈತ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು.
ಮಂಗಳೂರಿನಲ್ಲಿ ಜರುಗಿದ ಪ್ರತಿಭಟನೆಯನ್ನುದ್ದೇಶಿಸಿ ಸುನಿಲ್ ಕುಮಾರ್ ಬಜಾಲ್, ಎಚ್ ವಿ.ರಾವ್,ಯಾದವ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು,ಸೀತಾರಾಮ ಬೇರಿಂಜ,ಜಯಂತಿ ಶೆಟ್ಟಿ, ಸಂತೋಷ್ ಬಜಾಲ್, ಎಂ.ದೇವದಾಸ್ ರವರು ಮಾತನಾಡಿದರೆ, ಗುರುಪುರ ಕೈಕಂಬದಲ್ಲಿ ಜರುಗಿದ ಪ್ರತಿಭಟನೆಯನ್ನುದ್ದೇಶಿಸಿ ಮುನೀರ್ ಕಾಟಿಪಳ್ಳ, ಸದಾಶಿವದಾಸ್,ನೋಣಯ್ಯ ಗೌಡ,ಮನೋಜ್ ವಾಮಂಜೂರುರವರು ಮಾತನಾಡಿದರು. ತೊಕ್ಕೋಟುನಲ್ಲಿ ಜರುಗಿದ ಪ್ರತಿಭಟನೆಯನ್ನುದ್ದೇಶಿಸಿ ಜೆ.ಬಾಲಕ್ರಷ್ಣ ಶೆಟ್ಟಿ,ಸುಕುಮಾರ್ ತೊಕ್ಕೋಟು,ಜಯಂತ ನಾಯಕ್,ಕ್ರಷ್ಣಪ್ಪ ಸಾಲ್ಯಾನ್, ರೋಹಿದಾಸ್ ಭಟ್ನಗರರವರು ಮಾತನಾಡಿದರು.