ಮಂಗಳೂರು: ರಾಷ್ಟ್ರಮಟ್ಟದ ಪಲ್ಸರ್ ಮೇನಿಯಾ 2.0ದಲ್ಲಿ ಪ್ರಥಮ ಸ್ಥಾನ ಪಡೆದ ನೌಮಾನ್ ಪಜೀರ್
ಆತ ಗ್ರಾಮೀಣ ಭಾಗದ 20ರ ಹರೆಯದ ಯುವಕ. ಕಾಲೇಜು ಮೆಟ್ಟಿಲು ಹತ್ತದೇ, ಕಿರಿ ವಯಸ್ಸಿನಿಂದಲೇ ಸ್ಟಂಟ್‌ನಲ್ಲಿ ಅತೀವ ಹುಮ್ಮಸ್ಸು. ಇಂದು ಅದೇ ಹುಮ್ಮಸ್ಸು ರಾಷ್ಟ್ರದ 25,೦೦೦ ಮಂದಿಯ ಎದುರುಗಡೆ, ೨೮ ಸ್ಪರ್ಧಾಳುಗಳನ್ನು ಸೋಲಿಸಿ ಇಡೀ ಗ್ರಾಮದ ಹೆಸರನ್ನು ಕೀರ್ತಿಪತಾಕೆಗೆ ಏರಿಸಿ ಸಾಧನೆ ಮೆರೆದಿದ್ದಾರೆ.
ಪಜೀರು ಗ್ರಾಮದ ನಿವಾಸಿ ನೌಮಾನ್ ಪಜೀರು ಎಂಬವರು ಪ್ರತಿಷ್ಠಿತ ಬಜಾಜ್ ಆಟೋ ಲಿಮಿಟೆಡ್ ಇವರು ಮುಂಬಯಿ ಯಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ಪಲ್ಸರ್ ಮೇನಿಯಾ 2.0 (ಬೈಕ್ ಸ್ಟಂಟ್ ಮತ್ತು ಡ್ರೈವಿಂಗ್ ಕೌಶಲ್ಯಗಳ ಪ್ರದರ್ಶನ) ಇದರ ಮಾಸ್ಟರ್ಸ್ ಆವೃತ್ತಿಯಲ್ಲಿ ಪ್ರಥಮ ಸ್ಥಾನದಲ್ಲಿ ವಿಜೇತರಾಗಿದ್ದಾರೆ. ಜಯಗಳಿಸಿ ಶನಿವಾರ ತಡರಾತ್ರಿ ವಿಮಾನದ ಮೂಲಕ ಮಂಗಳೂರಿಗೆ ಬಂದ ಅವರನ್ನು ಗ್ರಾಮಸ್ಥರು ಬಜಪೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಿಂದ ಸ್ವಾಗತಿಸಿದರು. ರಾತ್ರೋರಾತ್ರಿ ರಾಜ್ಯದ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಅವರೂ ಸಹ ನೌಮನ್ ಅವರನ್ನು ಪಂಪ್ ವೆಲ್ ಬಳಿ ಭೇಟಿ ಮಾಡಿ ಶುಭಹಾರೈಸಿದ್ದಾರೆ.
ಸಣ್ಣ ವಯಸ್ಸಿನಿಂದಲೇ ಸ್ಟಂಟ್ ಮಾಡುವ ಕ್ರೇಜ್ ಹೊಂದಿದ್ದ ನೂಮನ್, ಸೈಕಲ್ ನಲ್ಲಿ ತನ್ನ ಮನೆಯ ಅಕ್ಕಪಕ್ಕದಲ್ಲಿರುವ ಜಾಗದಲ್ಲಿ ಸ್ಟಂಟ್ ನಡೆಸುತ್ತಿದ್ದರು. ಮನೆಮಂದಿ ಸುರಕ್ಷತೆಯ ದೃಷ್ಟಿಯಿಂದ ವಿರೋಧಿಸಿದರೂ ಕಣ್ತಪ್ಪಿಸಿ ಸ್ಟಂಟ್ ಮುಂದುವರಿಸಿದ್ದರು. ಬೆಳೆದು ಬೈಕ್ ಗಳ ಮೂಲಕವೂ ಸ್ಟಂಟ್ ಆರಂಭಿಸಿದ್ದರು. ಸೂಕ್ತ ಜಾಗ ಸಿಗದೇ ಮನೆಯ ಸುತ್ತಮುತ್ತ ಇರುವ ರಸ್ತೆಗಳಲ್ಲೇ, ದೂರ ಪ್ರಯಾಣಕ್ಕೆ ಹೋಗುವ ಸಂದರ್ಭ ತಾನೇ ಆಲ್ಟ್ರೇಷನ್ ನಡೆಸಿದ ಬೈಕ್ ಗಳಲ್ಲಿ ತೆರಳಿ ಸ್ಟಂಟ್ ನಡೆಸುತ್ತಾ ಬಂದಿದ್ದರು. ತನ್ನೆಲ್ಲಾ ಸ್ಟಂಟ್ ಗಳನ್ನು ’ ನೂಮನ್ ಸ್ಟಂಟ್ಸ್ ’ ಅನ್ನುವ ಇನ್ಸ್ಟಾಗ್ರಾಂ ಪುಟ ತೆರೆದು, ಅದರಲ್ಲಿ ಸಾವಿರದಷ್ಟು ಫಾಲೋವರ್ ಗಳನ್ನು ಹೊಂದಿ ತನ್ನ ಸ್ಟಂಟ್ ಗಳನ್ನು ವೀಡಿಯೋ ದಾಖಲೀಕರಣ ಮೂಲಕ ಹಾಕುತ್ತಲೇ ಬಂದಿದ್ದರು. ಈ ನಡುವೆ ಬಜಾಜ್ ಆಟೋ ಲಿಮಿಟೆಡ್ ಮುಂಬೈನಲ್ಲಿ ಆಯೋಜಿಸಿದ ಪಲ್ಸಾರ್ ಮೇನಿಯದಲ್ಲಿ ಭಾಗವಹಿಸಲು ಆಹ್ವಾನಿಸಿತ್ತು. ಅದರಂತೆ ಮುಂಬೈಗೆ ತೆರಳಿದ್ದ ನೂಮನ್ ಸ್ಟಂಟಿಂಗ್ ಮಾತ್ರವಲ್ಲ ವಿವಿಧ ರೀತಿಯ ಸುತ್ತುಗಳಲ್ಲಿ ಸ್ಪರ್ಧಿಸಿ ಜಯಗಳಿಸಿ, ವೀಕ್ಷಿಸಲು ನೆರೆದಿದ್ದ ಅಂದಾಜು 25,೦೦೦ ಮಂದಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಎಲ್ಲಾ ರೌಂಡ್ಸ್ ಗಳಲ್ಲಿ ಗೆದ್ದು ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಬಹುಮಾನವಾಗಿ ರೂ 4.5 ಲಕ್ಷ ಮೊತ್ತದ ಬೈಕನ್ನು ಬಹುಮಾನವಾಗಿ ಪಡೆದುಕೊಂಡಿದ್ದಾರೆ.
ಕೇವಲ ಸ್ಟಂಟ್ ಮಾತ್ರವಲ್ಲ, ಏಕಾಗ್ರತೆಯಿಂದ ಮನಸ್ಸನ್ನು ಉಪಯೋಗಿಸಿದ ಫಲವಾಗಿ ನೂಮನ್ ಗೆಲ್ಲಲು ಸಾಧ್ಯವಾಯಿತು. ಸುತ್ತಲೂ ನೆರೆದಿದ್ದ ಸಾವಿರಾರು ಮಂದಿಯ ಎದುರುಗಡೆ ನೂಮನ್ ಪ್ರದರ್ಶನ ಅಧ್ಬುತವಾಗಿತ್ತು. ಶ್ರಮಕ್ಕೆ ಸಿಕ್ಕ ಫಲವಾಗಿದೆ. ಸ್ಪರ್ಧಾಳುಗಳಾಗಿದ್ದರೂ, ಮಂಗಳೂರಿಗನಿಗೆ ಪ್ರಥಮ ಸ್ಥಾನ ಸಿಕ್ಕಿತೆಂಬ ಗೌರವ ನನಗಾಗಿದೆ ಎಂದು ಸ್ಪರ್ಧಾಳು ಸುಳ್ಯ ನಿವಾಸಿ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಜಪೆಯಿಂದ ಹುಟ್ಟೂರು ಪಜೀರುವರೆಗೂ ಗ್ರಾಮಸ್ಥರು ನೂಮನ್ ಅವರನ್ನು ಅದ್ದೂರಿಯಾಗಿ ಮೆರವಣಿಗೆಯಲ್ಲಿ ಕರೆದೊಯ್ದು ವಿಶೇಷ ಗೌರವ ಸಲ್ಲಿಸಿ ದರು.
ಈ ಸಂದರ್ಭ ಪಜೀರ್ ಗ್ರಾ.ಪಂ ಅಧ್ಯಕ್ಷ ಕೆ. ಮೊಹಮ್ಮದ್ ರಫೀಕ್ ಪಜೀರ್ , ಸ್ಥಳೀಯರಾದ ತಾಜುದ್ದೀನ್ ಕೊಣಾಜೆ , ನಾಸೀರ್ ಪಜೀರ್, ಹಮೀದ್ ಪಜೀರ್, ಅಬೂ ಸಮೀರ್,ಹಸನ್ ಅಶ್ರಪ್, ಅಬ್ದುಲ್ ರಹಿಮಾನ್, ಪೈಝಲ್ , ಉಮರ್,ಹನೀಪ್ ಸಿ.ಎಚ್, ಮಹಮ್ಮದ್ ಖಾನ್ , ಹಮೀದ್ ಪಾಡಿ, ಆರಿಸ್, ಮೆಹರೂಫ್ ಮೊದಲಾದವರು ಉಪಸ್ಥಿತರಿದ್ದರು.