ಮಂಗಳೂರು: ಹಿಂದೂಗಳ ಅಂಗಡಿಗೆ ಕೇಸರಿ ಧ್ವಜ ಕಟ್ಟಿದ ವಿಚಾರ: ಬೀದಿ ಬದಿ ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದ ಸಚಿವ ದಿನೇಶ್ ಗುಂಡೂರಾವ್‍ಗೆ ದೂರು
ದೇವಸ್ಥಾನದಲ್ಲಿ ದಸರಾ ಉತ್ಸವದ ಸಂದರ್ಭ ವ್ಯಾಪಾರಕ್ಕೆ ಸಂಬಂಧಿಸಿ ಸೌಹಾರ್ದ ಕದಡಲು ಯತ್ನಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮತ್ತು ಸಹಚರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸೌಹಾರ್ದ ಕದಡದಂತೆ ಕ್ರಮ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿ ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‍ರಿಗೆ ಒತ್ತಾಯಿಸಿದೆ.
ಮಂಗಳೂರಿನಲ್ಲಿ ಸರ್ಕ್ಯೂಟ್ ಹೌಸ್ ನಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾದ ವೇದಿಕೆಯ ಮುಖಂಡರು ಈ ಬಗ್ಗೆ ಮನವಿ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಡಿವೈಎಫ್‍ಐ ಮುಖಂಡ ಮುನೀರ್ ಕಾಟಿಪಳ್ಳ ಅವರು, ದಸರಾ ಉತ್ಸವದ ಸಂದರ್ಭ ವ್ಯಾಪಾರಕ್ಕೆ ಸಂಬಂಧಿಸಿ ಉದ್ಭವಿಸಿದ್ದ ವಿವಾದವನ್ನು ಜಿಲ್ಲಾಡಳಿತ ಪ್ರಭಾರ ಜಿಲ್ಲಾಧಿಕಾರಿ ಸಭೆ ನಡೆಸಿ ಇತ್ಯರ್ಥಪಡಿಸಿದ್ದರೂ,
ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ವಿಎಚ್ ಪಿ, ಬಜರಂಗ ದಳವು ಸೌಹಾರ್ದ ಕದಡುವ ಕೆಲಸ ಮಾಡುತ್ತಿದೆ. ಕೇಸರಿ ಧ್ವಜ ಹಾಕಿರುವ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಿ ಎಂದು ತಾಕೀತು ಮಾಡಿದೆ. ಇದು ಬಹಿಷ್ಕಾರದ ಕ್ರಮವಾಗಿದೆ. ಸಂವಿಧಾನದ ಆಶಯದ ಉಲ್ಲಂಘನೆ ಮಾತ್ರವಲ್ಲ, ಇದು ಕ್ರಿಮಿನಲ್ ಕಾನೂನು ಗಳ ಉಲ್ಲಂಘನೆ. ಆದ್ದರಿಂದ ಶರಣ್ ಪಂಪ್ ವೆಲ್ ಮಾತು ಗ್ಯಾಂಗ್ ಅನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ಆಗ್ರಹವಾಗಿದೆ ಎಂದರು.