ಮಂಗಳೂರು: ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನಕ್ಕೆ ಚಾಲನೆ
ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಮಂಗಳೂರಲ್ಲಿ ಚಾಲನೆ ಸಿಕ್ಕಿತ್ತು. ನಗರದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಇರುವ ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ಆವರಣದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಡಾ|ಧರ್ಮಪಾಲನಾ ಸ್ವಾಮೀಜಿ ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಇಂತಹ ಒಂದು ಕಾರ್ಯಕ್ರಮ ಮಾಡ್ತಿರೋದು ಶ್ಲಾಘನೀಯವಾಗಿದೆ. ಪೀಳಿಗೆಯಿಂದ ಪೀಳಿಗೆಗೆ ಇತಿಹಾಸ ಪುಟಗಳನ್ನು ನಾವು ವಾಸ್ತವಿಕ ನೆಲೆಯಲ್ಲಿ ಜನರಿಗೆ ಮತ್ತು ಯುವಕರಿಗೆ ತಲುಪಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಮಾತನಾಡಿದ ಅವರು, ಕೆಂಪೇಗೌಡ ಅವರು ಸಾಮಾಜಿಕ ಚಟುವಟಿಕೆ ಹಾಗೂ ಅವರ ಆಡಳಿತಕ್ಕೆ ಇಡೀ ರಾಜ್ಯವನ್ನು ಜೋಡಿಸಿಕೊಳ್ಳಬೇಕೆಂಬ ಉದ್ದೇಶದಿಂಸ ಎಲ್ಲಾ ಜಿಲ್ಲೆಗಳಿಂದ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನವನ್ನು ನಡೆಸಲಾಗುತ್ತದೆ. ನಾಡಪ್ರಭು ಕೆಂಪೇಗೌಡ ಅವರ ಉತ್ತಮ ಆಡಳಿತವನ್ನು ಕೊಟ್ಟಿದ್ದಾರೆ. ಇನ್ನು ಕೋಟಿ ಕಂಠ ಗಾಯನದ ಬಗ್ಗೆ ಈಗಾಗಲೇ ಸಿದ್ಧತೆಯನ್ನ ಮಾಡಿಕೊಂಡಿದ್ದೇವೆ. ಕ್ಯೂಆರ್ ಕೋಡ್ ಮುಖಾಂತರ ನೊಂದಾಣಿ ಮಾಡಬೇಕೆಂಬ ಕರೆಯನ್ನ ಕೊಟ್ಟಿದ್ದೇವೆ. ಒಂದು ಕೋಟಿ 10 ಲಕ್ಷ ಜನ ಕ್ಯೂಆರ್ ಕೋಡ್ ನೊಂದಾಣಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ದ.ಕ ಸಂಸದರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬೆಂಗಳೂರಿಗೆ ನಾಡ ಪ್ರಭು ಕೆಂಪೇಗೌಡ ಕೊಡುಗೆ ಅಪಾರವಾಗಿದೆ. ಹಾಗಾಗಿ ಕೆಂಪೇಗೌಡ ಕೊಡುಗೆಯಲ್ಲಿ ಟಿಪ್ಪು ಸುಲ್ತಾನ್ ಎನೂ ಇಲ್ಲ ಎಂದು ಅವರು ಹೇಳಿದರು.ಈ ವೇಳೆ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಸಂಜೀವ ಮಠಂದೂರು, ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್,ಇತರೆ ಗಣ್ಯರು ಉಪಸ್ಥಿತರಿದ್ದರು.