ಮಂಗಳೂರು: ಆಚಾರ್ಯ ಮಠದ ವಸಂತ ಮಂಟಪದ ಶಾರದೋತ್ಸವ ಸಂಪನ್ನ
ಮಂಗಳೂರು ಶಾರದೆ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠದ ವಸಂತ ಮಂಟಪದಲ್ಲಿ ಪೂಜಿಸಲ್ಪಟ್ಟ 101ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಬೃಹತ್ ವಿಸರ್ಜನಾ ಶೋಭಾಯಾತ್ರೆ ವೈಭವದಿಂದ ನಡೆಯಿತು.
ಬುಧವಾರ ಸಂಜೆ ಪೂರ್ಣಾಲಂಕಾರಗೊಂಡ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಭಕ್ತಾಧಿಗಳಿಗೆ ಅವಕಾಶ ನೀಡಲಾಗಿದ್ದು, ರಾತ್ರಿ ಮಹಾಮಂಗಳಾರತಿ ಬಳಿಕ ಶ್ರೀ ವೆಂಕಟರಮಣ ದೇವರ ಪ್ರದಕ್ಷಿಣೆ ಬಳಿಕ ಶ್ರೀ ಶಾರದಾ ಮಾತೆಯ ಬೃಹತ್ ವಿಸರ್ಜನಾ ಶೋಭಾಯಾತ್ರೆ ಆರಂಭವಾಯಿತು. ಬಳಿಕ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆಯು ಉತ್ಸವ ಸ್ಥಾನದಿಂದ ಹೊರಟಿತು.
ಶ್ರೀ ಮಹಾಮಾಯಿ ದೇವಸ್ಥಾನ, ಗದ್ದೆಕೇರಿ, ಕೆನರಾ ಹೈಸ್ಕೂಲ್ ಹಿಂಬದಿ ರಸ್ತೆಯಿಂದ ನವಭಾರತ ವೃತ್ತ, ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರಾ ಟಾಕೀಸ್, ಬಸವನ ಗುಡಿ, ಚಾಮರಗಲ್ಲಿ, ರಥಬೀದಿಯಾಗಿ ಶ್ರೀ ಮಹಾಮಾಯಾ ತೀರ್ಥದಲ್ಲಿ ವಿಸರ್ಜನೆ ನಡೆಯಿತು.
ಸ್ವಯಂಸೇವಕರು ಭುಜ ಸೇವೆಯ ಮೂಲಕ ಶ್ರೀ ಮಾತೆಯ ವಿಗ್ರಹದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ವಿವಿಧ ವೇಷಧಾರಿಗಳಿಂದ ವಿಶೇಷ ಟ್ಯಾಬ್ಲೋಗಳು, ಹರಕೆಯ ಶಾರದಾ ಹುಲಿವೇಷದ ಟ್ಯಾಬ್ಲೋಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು.
7 ದಿನಗಳು ಶ್ರೀ ಶಾರದಾ ಮಾತೆಯ ವಿಗ್ರಹಕ್ಕೆ ನಾನಾ ದೇವಿಯ ಅವತಾರಗಳ ಅಲಂಕಾರಗಳು ನಡೆಯಿತು. ಸಹಸ್ರಾರು ಭಜಕರು ಕುಂಕುಮಾರ್ಚನೆ ಸೇವೆ, ರಂಗಪೂಜೆ, ಮಕ್ಕಳಿಗೆ ವಿದ್ಯಾರಂಭ ವಿಶೇಷ ದೀಪಾಲಂಕಾರ ಸೇವೆಗಳು ವಿಜೃಂಭಣೆಯಿಂದ ನಡೆಯಿತು.