ಮಣಿಪಾಲ ಆರೋಗ್ಯ ಕಾರ್ಡ್ 2023ರ ನೋಂದಣಿ ಪ್ರಕ್ರಿಯೆಗೆ ಚಾಲನೆ
ಉಡುಪಿ : ಉಡುಪಿ ಜಿಲ್ಲೆಯ ಮಾಹೆ ಮಣಿಪಾಲದ ಸಂಸ್ಥಾಪಕರಾದ ಡಾ. ಟಿ.ಎಂ.ಎ.ಪೈ ಅವರ 125ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ, ಮಣಿಪಾಲ ಆರೋಗ್ಯ ಕಾರ್ಡ್ 2023ರ ನೋಂದಣಿ ಪ್ರಕ್ರಿಯೆಗೆ ಮಂಗಳವಾರದಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಈ ವರ್ಷ ನಮ್ಮ ದೂರದೃಷ್ಟಿಯ ಸಂಸ್ಥಾಪಕ ನಾಯಕ ಡಾ. ಟಿ. ಎಂ. ಎ. ಪೈ ಅವರ 125 ನೇ ವರ್ಷದ ಜನ್ಮದಿನಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ. ಅವರ ಉದಾತ್ತ ಕಾರ್ಯವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಭಾರತೀಯ ಆರೋಗ್ಯ ವ್ಯವಸ್ಥೆಯನ್ನು ಸಮಾಜಕ್ಕೆ ಸುಲಭವಾಗಿ ದೊರೆಯುವಂತೆ ಮಾಡಿದ ಸ್ಪೂರ್ತಿದಾಯಕ ಅಪರೂಪದ ನಾಯಕ ಡಾ. ಟಿ. ಎಂ. ಎ. ಪೈ ಎಂದು ಹೇಳಿದರು. “ಮಣಿಪಾಲ್ ಆರೋಗ್ಯ ಕಾರ್ಡ್ 2023 ನೋಂದಣಿ ಆರಂಭವಾಗಿದ್ದು, ಇದನ್ನು ಘೋಷಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ಗುಣಮಟ್ಟದ ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಆರೋಗ್ಯ ಕಾರ್ಡ್ ನ್ನು ಪ್ರಾರಂಭಿಸಲಾಗಿದೆ. ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ, ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು” ಎಂದು ಹೇಳಿದರು.
ಮಣಿಪಾಲ್ ಆರೋಗ್ಯ ಕಾರ್ಡ್ ಹೊಂದಿರುವವರಿಗೆ ತಜ್ಞ ಮತ್ತು ವಿಶೇಷ ತಜ್ಞ ವೈದ್ಯರ ಸಮಾಲೋಚನೆ ಶುಲ್ಕದಲ್ಲಿ ಶೇಕಡಾ 30 ರಿಯಾಯಿತಿ (ಒ ಪಿ ಡಿ ದಿನಗಳಂದು) ಹೊರರೋಗಿ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇಕಡಾ 30 ರಿಯಾಯತಿ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ 20 ರಿಯಾಯಿತಿ, ಹೊರರೋಗಿ ಡಯಾಲಿಸಿಸ್ 100 ರೂಪಾಯಿ, ಔಷಧಾಲಯಗಳಲ್ಲಿ ಶೇಕಡಾ 12ರವರೆಗೆ ರಿಯಾಯಿತಿ, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ ಶೇಕಡಾ 25 ರಿಯಾಯಿತಿ ದೊರೆಯಲಿದೆ.
ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ 300 ರೂಪಾಯಿ ಕೌಟುಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ 25 ವರ್ಷದ ಒಳಗಿನ ಮಕ್ಕಳಿಗೆ 600 ರೂಪಾಯಿ ಮತ್ತು ಕುಟುಂಬ ಪ್ಲಸ್ ಯೋಜನೆ ಅಂದರೆ ಕಾರ್ಡುದಾರ, ಅವರ ಸಂಗಾತಿ 25 ವರ್ಷದ ಒಳಗಿನ ಮಕ್ಕಳ ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) 750 ರೂಪಾಯಿ, ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ 500 ರೂಪಾಯಿ, ಕುಟುಂಬಕ್ಕೆ 800 ರೂಪಾಯಿ ಮತ್ತು ಕೌಟಂಬಿಕ ಪ್ಲಸ್ ಯೋಜನೆಗೆ 950 ರೂಪಾಯಿ ಆಗಿರುತ್ತದೆ.
ಅರೋಗ್ಯ ಕಾರ್ಡ್ ಬೆಳೆದು ಬಂದ ರೀತಿಯ ಅವಲೋಕನ ನೀಡಿದ ಮಾಹೆ ಮಣಿಪಾಲದ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್ ಅವರು, “ಮಾಹೆ ಮಣಿಪಾಲದ ಕುಲಪತಿ ಡಾ. ರಾಮದಾಸ್ ಪೈ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಮಣಿಪಾಲ ಆರೋಗ್ಯ ಕಾರ್ಡ್ ನ್ನು 200 ರಲ್ಲಿ ಪ್ರಾರಂಭಿಸಲಾಯಿತು. ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲು ಸಾಧ್ಯವಾಗದಿದ್ದರೂ ಎಲ್ಲರಿಗೂ ರಿಯಾಯಿತಿ ದರದಲ್ಲಿ ಲಭ್ಯವಾಗಬೇಕು ಎಂಬುದು ಇದರ ಉದ್ದೇಶವಾಗಿತ್ತು. ಆರಂಭದಲ್ಲಿ, ಈ ಯೋಜನೆಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿ ತದನಂತರ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಯಿತು.
ಇದೀಗ ಈ ಯೋಜನೆಯು ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು ಮತ್ತು ಬಳ್ಳಾರಿ ಸೇರಿದಂತೆ ಕರಾವಳಿ ಮತ್ತು ಮಧ್ಯ ಕರ್ನಾಟಕದ ಸುಮಾರು 12-15 ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಿಸಿದೆ ಮತ್ತು ಕೆಲ ನೆರೆಯ ರಾಜ್ಯಗಳ ಜನರೂ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಸಂಪೂರ್ಣವಾಗಿ ಕಾರ್ಡ್ ರಹಿತ ಮತ್ತು ಗ್ರಾಹಕ ಸ್ನೇಹಿಯಾಗಿಸುವ ಗುರಿ ಹೊಂದಿದ್ದೇವೆ. ಕಳೆದ 22 ವರ್ಷಗಳಲ್ಲಿ ಸಾಮಾಜಿಕ ಕಾಳಜಿಯೊಂದಿಗೆ ನಾವು ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದ್ದೇವೆ ಮತ್ತು 2022 ರಲ್ಲಿ ನಾವು 6,40,000 ಸದಸ್ಯರನ್ನು ನೋಂದಾಯಿಸುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಸದಸ್ಯರ ನೋಂದಣಿ ಹೆಚ್ಚಾಗುತ್ತಿರುವುದು ಮಣಿಪಾಲ ಆರೋಗ್ಯ ಕಾರ್ಡ್ ನ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿಯವರು ಮಾತನಾಡಿ, “ಮಣಿಪಾಲ ಆರೋಗ್ಯಕಾರ್ಡ್ ಹೊಂದಿರುವವರು ಕಸ್ತೂರ್ಬಾ ಆಸ್ಪತ್ರೆ – ಮಣಿಪಾಲ, ಡಾ. ಟಿ.ಎಂ.ಎ.ಪೈ ಆಸ್ಪತ್ರೆ-ಉಡುಪಿ, ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ-ಕಾರ್ಕಳ, ಕೆ.ಎಂ.ಸಿ. ಆಸ್ಪತ್ರೆ-ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ-ಕಟೀಲು ಮತ್ತು ಮಣಿಪಾಲ್ ಆಸ್ಪತ್ರೆ-ಗೋವಾಗಳಲ್ಲಿ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು. ಇತರ ಆಸ್ಪತ್ರೆಗಳ ರಿಯಾಯಿತಿ ಮಾದರಿಗಳನ್ನು ತಿಳಿಯಲು ಮತ್ತು ಹೆಚ್ಚಿನ ವಿವರಗಳನ್ನು www.manipalhealthcard.com ಗೆ ಲಾಗ್ ಇನ್ ಆಗುವುದರ ಮೂಲಕ ತಿಳಿದುಕೊಳ್ಳಬಹುದು. ಸಾರ್ವಜನಿಕರು ಮಣಿಪಾಲ್ ಆರೋಗ್ಯ ಕಾರ್ಡ್ ನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಎಲ್ಲಾ ನೆಟ್‌ವರ್ಕ್ ಆಸ್ಪತ್ರೆಗಳು ಮತ್ತು ಅಧಿಕೃತ ಪ್ರತಿನಿಧಿಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9980854700 / 0820 2923748 ಗೆ ಸಂಪರ್ಕಿಸಬಹುದು: ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆಎಂಸಿ ಮಣಿಪಾಲ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕೆಎಂಸಿ ಮಂಗಳೂರು ಡೀನ್ ಡಾ. ಬಿ. ಉನ್ನಿಕೃಷ್ಣನ್ ಉಪಸ್ಥಿತರಿದ್ದರು.