ಮಂಗಳೂರು : ಮಣಿಪುರದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಮಣಿಪುರ ರಾಜ್ಯದಲ್ಲಿ ಸುಮಾರು ಎರಡು ತಿಂಗಳುಗಳಿಂದ ಅಲ್ಲಿನ ಕ್ರೈಸ್ತ ಸಮುದಾಯದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಹಾಗೂ ಶಾಂತಿ ಮರು ಸ್ಥಾಪಿಸಿ ನೊಂದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸೀರೋ ಮಲಬಾರ್ ಕೆಥೊಲಿಕ್ ಅಸೋಸಿಯೇಶನ್ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಮಣಿಪುರ ಹಿಂಸಾಚಾರವನ್ನು ತಡೆಗಟ್ಟಲು ಕೇಂದ್ರ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಿ ಶಾಂತಿ ಸುವ್ಯವಸ್ಥೆ ನೆಲೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೋ, ಕರ್ನಾಟಕ ಸೀರೋ ಮಲಬಾರ್ ಕೆಥೊಲಿಕ್ ಅಸೋಸಿಯೇಶನ್ ಕೇಂದ್ರೀಯ ನಿರ್ದೇಶಕ ಫಾಣ ಶಾಜಿ ವಿ.ಜೆ., ಅಧ್ಯಕ್ಷ ಬೆಟ್ಟಿ ನೆಡುನಿಲಮ್, ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ., ಖಜಾಂಚಿ ಜಿಮ್ಸನ್, ಕರ್ನಾಟಕ ಸೀರೋ ಮಲಬಾರ್ ಕೆಥೊಲಿಕ್ ಅಸೋಸಿಯೇಶನ್ ಜಾಗತಿಕ ಸಮಿತಿ ಕಾರ್ಯದರ್ಶಿ ಬೆನ್ನಿ ಆಂಟನಿ ಮೊದಲಾದವರು ಭಾಗವಹಿಸಿದ್ದರು.