ಮಂಜೇಶ್ವರ: ಬೇಕೂರು ಶಾಲೆಯ ವಿದ್ಯಾರ್ಥಿ ಮೇಲೆ ಹಲ್ಲೆ

ಮಂಜೇಶ್ವರ : ರ್‍ಯಾಗಿಂಗ್ ಎನ್ನುವುದು ಮಾನವ ಹಕ್ಕುಗಳ ದುರುಪಯೋಗದ ವ್ಯವಸ್ಥಿತ ರೂಪವಾಗಿದೆ. ವಿಪರೀತ ಕಿರುಕುಳ ನೀಡುವುದರ ಜೊತೆಗೆ ಮನಸ್ಸಿನಲ್ಲಿ ಭಯವನ್ನು ಸೃಷ್ಟಿ ಮಾಡುತ್ತಿರುವ ರ್ಯಾಗಿಂಗ್ ತಡೆಯಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗುತ್ತಿರುವ ಮಧ್ಯೆಯೇ ಬೇಕೂರು ಕುಂಬಳೆ ಹೈಯರ್ ಸೆಕಂಡರಿ ಶಾಲೆಯಲ್ಲಿ ಪ್ಲಸ್ ವನ್ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಯನ್ನು ಬಸ್ಸು ನಿಲ್ದಾಣದಲ್ಲಿ ಹಿಗ್ಗಾ ಮಗ್ಗಾ ಥಳಿಸಿ ಹಲ್ಲೆ ಗೈದು ಗಾಯಗೊಳಿಸಲಾಗಿದೆ.
ಪೆರ್ಮುದೆ ನಿವಾಸಿ ಕಬೀರ್ ಎಂಬವರ ಪುತ್ರ ಪ್ಲಸ್ ವನ್ ವಿದ್ಯಾರ್ಥಿ ಶಾಮಿಲ್ ಗಾಯಗೊಂಡಿದ್ದರು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶೂ ಹಾಕಿ ಬಂದದ್ದನ್ನು ವಿರೋಧಿಸಿದ ಹಿರಿಯ ತರಗತಿಯ ವಿದ್ಯಾರ್ಥಿಗಳು ಶೌಚಾಲಯಕ್ಕೆ ಹೋಗುವಾಗ ಧರಿಸುವ ಚಪ್ಪಲಿ ಹಾಕಿ ಬರಬೇಕೆಂದು ಒತ್ತಾಯಿಸಿ ಹಲ್ಲೆ ಗೈದಿದ್ದಾರೆನ್ನಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
