ಮಂಜೇಶ್ವರ : ತಲಪಾಡಿ ಟೋಲ್ ಗೇಟ್ ವಿಚಾರವಾಗಿ ಗಡಿನಾಡ ಕನ್ನಡಿಗರು ಗರಂ
ಮಂಜೇಶ್ವರ: ತಲಪಾಡಿ ಟೋಲ್ ಗೇಟಿನಲ್ಲಿ ಕರ್ನಾಟಕದ 5 ಕಿ.ಮೀ. ವ್ಯಾಪ್ತಿಯ ಸ್ಥಳೀಯರಿಗೆ ಉಚಿತ ಪ್ರಯಾಣಕ್ಕೆ ಅನುಮತಿಯನ್ನು ನೀಡಿದ ರೀತಿಯಲ್ಲಿ ಗಡಿನಾಡ ಕನ್ನಡಿಗರು ವಾಸವಾಗಿರುವ ಕೇರಳದ 5 ಕಿ.ಲೋ. ಮೀಟರ್ ವ್ಯಾಪ್ತಿಯಲ್ಲಿರುವವರಿಗೂ ಉಚಿತ ಪ್ರಯಾಣಕ್ಕೆ ಅನುಮತಿ ಕೋರಿ ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷರು ಎಲ್ಲಾ ಸದಸ್ಯರು ಹಾಗೂ ಪೀಪಲ್ಸ್ ಯೂನಿಯನ್ ಆಫ್ ಮಂಜೇಶ್ವರ ಸಂಘಟನಾ ಕಾರ್ಯಕರ್ತತರು ವಿವಿಧ ರಾಜಕೀಯ ಪಕ್ಷಗಳ ನೇತಾರರು ಜೊತೆಯಾಗಿ ತಲಪಾಡಿ ಟೋಲ್ ಗೇಟಿಗೆ ತೆರಳಿ ಮನವಿಯನ್ನು ನೀಡಿದರು.
ಕರ್ನಾಟಕ ಹಾಗೂ ಕೇರಳದ ಮಧ್ಯ ಭಾಗದಲ್ಲಿ ಸ್ಥಾಪಿಸಲಾಗಿರುವ ತಲಪಾಡಿ ಟೋಲ್ ಗೇಟ್ ಅಧಿಕೃತರು ಒಂದು ರಾಜ್ಯದ 5 ಕಿಲೋ ಮೀ. ವ್ಯಾಪ್ತಿಯಲ್ಲಿರುವ ಸ್ಥಳೀಯರಿಗೆ ಮಾತ್ರ ಆಧ್ಯತೆಯನ್ನು ನೀಡಿ ಮತ್ತೊಂದು ರಾಜ್ಯದ ಸ್ಥಳೀಯರನ್ನು ಕಡಣಿಸಿರುವುದನ್ನು ಖಂಡಿಸಿರುವ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಕೇರಳದ ಗಡಿ ನಾಡ ಜನತೆಗೆ ನ್ಯಾಯ ಸಿಗುವ ತನಕ ಊರವರೊಂದಿಗೆ ಸೇರಿ ಕಾನೂನಾತ್ಮಕವಾದ ಹೋರಾಟಕ್ಕೆ ನೇತೃತ್ವವನ್ನು ನೀಡಲಾಗುವುದಾಗಿ ಮುನ್ನೆಚ್ಚರಿಕೆ ನೀಡಿದ್ದಾರೆ. ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಯಲಿ ರುವುದಾಗಿಯೂ ಅವರು ಹೇಳಿದ್ದಾರೆ.
ಕೋವಿಡ್ ಗಿಂತ ಮುಂಚಿತವಾಗಿ ಇದೇ ವಿಷಯದಲ್ಲಿ ಪ್ರತಿಭಟನೆ ಬಿಸಿಯೇರುತ್ತಿರುವ ಮಧ್ಯೆ ಕೋವಿಡ್ ಎದುರಾದ ಹಿನ್ನೆಲೆಯಲ್ಲಿ ಪ್ರತಿಭಟನೆ ತಣ್ಣಗಾಗಿತ್ತು. ಇದೀಗ ಅದೇ ಹೋರಾಟ ಮತ್ತೆ ಬಿಸಿಯೇರುತ್ತಿದೆ.
ಮಂಜೇಶ್ವರ ಗ್ರಾ.ಪಂ. ಆಡಳಿತ ಸಮಿತಿ ಹಾಗೂ ವಿರೋಧ ಪಕ್ಷಗಳ ಜನಪ್ರತಿನಿಧಿಗಳ ಜೊತೆಯಾಗಿ ವಿವಿಧ ರಾಜಕೀಯ ಪಕ್ಷಗಳ ನೇತಾರರಾದ ಅಶ್ರಫ್ ಕುಂಜತ್ತೂರು, ದಯಾಕರ ಮಾಡ, ಅಶ್ರಫ್ ಬಡಾಜೆ, ಎಸ್ ಎಂ ಬಶೀರ್, ಪೀಪಲ್ಸ್ ಯೂನಿಯನ್ ಮಂಜೇಶ್ವರ ಸಂಘಟನಾಧ್ಯಕ್ಷ ಜಬ್ಟಾರ್ ಪದವು, ಸಿದ್ದೀಖ್ ತಲಪಾಡಿ, ವ್ಯಾಪಾರಿ ಸಂಘಟನೆಯ ನೇತಾರ ಹಸೈನಾರ್ ಸೇರಿದಂತೆ ಹಲವಾರು ಮಂದಿ ಜೊತೆಗಿದ್ದರು