ಸಂವಿಧಾನ ಜಾಗೃತಿ ಜಾಥಾ ರಥವನ್ನು ಬರಮಾಡಿಕೊಂಡ ಪುತ್ತಿಗೆ ಪಂಚಾಯತ್
ಮೂಡುಬಿದಿರೆ: ಸಂವಿಧಾನ ಪೀಠಿಕೆ, ಜವಾಬ್ದಾರಿ ಮತ್ತು ಅದರ ಮಹತ್ವ ಸಾರುವ ಅಂಬೇಡ್ಕರ್ ಪ್ರತಿಮೆಯ ಸ್ತಬ್ಧ ಚಿತ್ರವನ್ನೊಳಗೊಂಡ ಸಂವಿಧಾನ ಜಾಗೃತಿ ಜಾಥಾ ರಥವು ಮೂಡುಬಿದಿರೆಯಲ್ಲಿ ಸಂಚಾರ ಆರಂಭಿಸಿದ್ದು ಮಧ್ಯಾಹ್ನದ ವೇಳೆಗೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಆಗಮಿಸಿದ್ದು ಇದನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ, ಸರ್ವ ಸದಸ್ಯರು ಮತ್ತು ಪಿಡಿಒ ಭೀಮ ನಾಯಕ್ ಅವರು ಪಂಚಾಯತ್ ಮುಂಭಾಗದಲ್ಲಿ ಬರಮಾಡಿಕೊಂಡರು.
ಅಧ್ಯಕ್ಷೆ ರಾಧಾ ಅವರು ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚಣೆ ಗೈದರು. ಪಂಚಾಯತ್ ಸದಸ್ಯ ಪುರುಷೋತ್ತಮ ನಾಯಕ್ ಹಾರಾರ್ಪಣೆಗೈದರು. ಪಿಡಿಒ ಅವರು ಸಂವಿಧಾನ ಪೀಠಿಕೆಯ ಮಹತ್ವವನ್ನು ಸಾರುವ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಸಿ ಅವರು ಮಾತನಾಡಿ ಭಾರತದ ಸಂವಿಧಾನ ಅತೀ ದೊಡ್ಡ ಹಾಗೂ ಲಿಖಿತ ಸಂವಿಧಾನವಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯ ಈ ರಥದ ಮೂಲಕ ನಡೆಯುತ್ತಿದ್ದೆ, ಇಂದಿನ ವಿದ್ಯಾರ್ಥಿಗಳಿಗೆ ನವ ರಾಷ್ಟ್ರವನ್ನು ನಿರ್ಮಾಣ ಮಾಡಲು ಈ ರಥವು ಸಹಕಾರಿಯಾಗಲಿದೆ ಎಂದರು.
ಕರಾವಳಿ ಜಾನಪದ ಕಲಾ ವೇದಿಕೆ ಸುರತ್ಕಲ್ ನ ವಿಶ್ವನಾಥ ಶೆಟ್ಟಿ ಅವರ ಕಲಾ ತಂಡವು ಸಂವಿಧಾನದ ಮಹತ್ವ, ಪರಿಸರ ಸ್ವಚ್ಚದಿಂದ ಆರೋಗ್ಯ ಹೇಗೆ ಕಾಪಾಡುವುದು, ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಇರುವ ಹಕ್ಕು, ಸಂವಿಧಾನದಲ್ಲಿ ಉಲ್ಲೇಖಿತ ಜವಾಬ್ದಾರಿಗಳ ವಿವರಿಸಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿದರು.
ಪಂಚಾಯತ್ ನ ದ್ವಿತೀಯ ದರ್ಜೆ ಲೆಕ್ಕಸಹಾಯಕರು, ಸಂಜೀವಿನಿ ಒಕ್ಕೂಟದ ಮಹಿಳೆಯರು,ಆಶಾ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮ ಪಂಚಾಯತ್ ಸಿಬ್ಬಂಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.