ಮೂಡುಬಿದಿರೆ: ಹಿರೇ ಅಮ್ಮನವರ ಬಸದಿಯ ಪ್ರತಿಷ್ಠಾ ಪುರೋಹಿತ ಎಂ. ಧರ್ಮರಾಜ ಇಂದ್ರ ನಿಧನ
ಮೂಡುಬಿದಿರೆ: ಇಲ್ಲಿನ ಹಿರೇ ಅಮ್ಮನವರ ಬಸದಿಯ ಪ್ರತಿಷ್ಠಾ ಪುರೋಹಿತ ಎಂ. ಧರ್ಮರಾಜ ಇಂದ್ರ (94) ಪೇಪರ್ ಮಿಲ್ ಬಳಿ ತಮ್ಮ ನಿವಾಸದಲ್ಲಿ ಬುಧವಾರ ನಿಧನ ಹೊಂದಿದರು.
ರಾಷ್ಟ್ರಭಾಷಾ ವಿಶಾರದರಾಗಿದ್ದ ಅವರು ಐದು ದಶಕಗಳಿಂದ ಬಸದಿಯ ಪುರೋಹಿತರಾಗಿ, ಬಸದಿಯಲ್ಲಿ ನಿಂತು ಹೋಗಿದ್ದ ರಥೋತ್ಸವವನ್ನುಮತ್ತೆ ಆರಂಭಿಸಿದ್ದರು. ನವರಾತ್ರಿ ಪೂಜೆ, ಲಕ್ಷಕುಂಕುಮಾರ್ಚನ ಸಪ್ತಾಹ ಸಹಿತ ವಿವಿಧ ಜೈನ ಧಾರ್ಮಿಕ ಆರಾಧನೆಗಳಲ್ಲಿ ಪುರೋಹಿತರಾಗಿ ಪಾಲ್ಗೊಂಡಿದ್ದರು.
ಜೈನ ಧಾರ್ಮಿಕ ಆರಾಧನಾ ಸಾಹಿತ್ಯವಲಯಕ್ಕೆ ಅಮೂಲ್ಯ ಕೊಡುಗೆ ಎನ್ನಬಹುದಾದ ‘ಬೃಹತ್ ವಿವಿಧ ಜೈನ ಆರಾಧನಾ ಕೋಶ’ದ ಸಂಪಾದನಾ ಕೃತಿ ಸಹಿತ ಹತ್ತಕ್ಕೂ ಅಧಿಕ ಜೈನ ಆರಾಧನಾ ಸಾಹಿತ್ಯ ಕೃತಿಗಳನ್ನು ಅವರು ರಚಿಸಿ, ಸಂಪಾದಿಸಿದ್ದಾರೆ. ಈ ಪೈಕಿ ಅವರು ಬರೆದ ಪದ್ಮಾವತಿ ದೇವಿ ಚರಿತ್ರೆ ಕನ್ನಡ, ಹಿಂದಿ, ಇಂಗ್ಲೀಷ್ ಸಹಿತ ಏಳು ಭಾಷೆಗಳಲ್ಲಿ ಪ್ರಕಟವಾಗಿರುವುದು ಗಮನಾರ್ಹವಾಗಿದೆ.
ಜಿನಭಕ್ತಿಗೀತೆಗಳ ರಚನೆ, ಹಾಡುಗಾರರಾಗಿ, ಹಾರ್ಮೋನಿಯಂ ವಾದಕರಾಗಿದ್ದರು. 1947 ರಲ್ಲಿ ಮೂಡುಬಿದಿರೆಯಲ್ಲಿ ಫೇಮಸ್ ಸೈಕಲ್ ಸ್ಟೋರ್ಸ್, ಅಂದಿನ ದಿನಗಳಲ್ಲಿ ಜರ್ಮನ್ ಪೆಟ್ರೋಮ್ಯಾಕ್ಸ್, ಸೌಂಡ್ ಸಿಸ್ಟಮ್ ಬಾಡಿಗೆಗೆ ಒದಗಿಸಿದ್ದರು. ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರಾರಾಗಿ, ಜೀವ ವಿಮಾ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೂಡುಬಿದಿರೆ ಠಾಣೆಯಲ್ಲಿ ಟೈಪಿಂಗ್ ಅನುಕೂಲ ಇಲ್ಲದ ಸಂದರ್ಭದಲ್ಲಿ ಆಗ ಜಾಬ್ ಟೈಪಿಂಗ್ ಮೂಲಕವೂ ಸಹಕರಿಸಿದ್ದರು.
ಮೂಡುಬಿದಿರೆಯ ಸಾಂಗತ್ಯದಿಂದ ಆರಾಧನಾ ಸಾಹಿತ್ಯ ಋಷಿ ಬಿರುದು, ತೌಳವ ಇಂದ್ರ ಸಮಾಜ, ಎಂ.ಸಿ.ಎಸ್.ಬ್ಯಾಂಕಿನ ಸಹಕಾರಿ ಸಪ್ತಾಹ ಗೌರವ, ಮೂಡುಬಿದಿರೆ ಪ್ರೆಸ್ ಕ್ಲಬ್ ಗೌರವ -(2023) ಸಹಿತ ಹಲವು ಗೌರವಾದರಗಳಿಗೆ ಅವರು ಭಾಜನರಾಗಿದ್ದರು.
ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.