ಮೂಡುಬಿದಿರೆ: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್‌ಗೆ ಕ್ಷಣಗಣನೆ
ಮೂಡುಬಿದಿರೆ: ಕಳೆದ 28 ವರ್ಷಗಳಿಂದ ರಾಷ್ಟ್ರ- ಅಂತರಾಷ್ಟ್ರಮಟ್ಟದ ಕಲಾವಿದರನ್ನು ಮೂಡುಬಿದಿರೆಯ ಎಂಬ ಗ್ರಾಮೀಣ ಪ್ರದೇಶಕ್ಕೆ ಕರೆಸಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರಪಡಿಸುವ ಮೂಲಕ ಮೂಡುಬಿದಿರೆಯ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೀಗ 29ನೇ ವರ್ಷದ ಸಡಗರಕ್ಕೆ ಸಜ್ಜಾಗಿದ್ದು ಇಂದಿನಿಂದ ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಲಾಸಕ್ತರಿಗೆ ರಸದೌತಣ ನೀಡಲಿದೆ.
ಕಲಾ ರಸಿಕ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ಸಾರಥ್ಯದಲ್ಲಿ ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಿ ಜೈನ ಕಾಶಿ ಮೂಡುಬಿದಿರೆಯ ಸಾವಿರ ಕಂಬದ ಬಯಲು ರಂಗ ಮಂದಿರದಲ್ಲಿ ’ಸ್ಪಿಕ್ ಮೆಕೆ ವಿರಾಸತ್’ ಎಂಬ ಹೆಸರಿನೊಂದಿಗೆ ಆರಂಭಗೊಂಡಿರುವ ಸಾಂಸ್ಕೃತಿಕ ಉತ್ಸವ ನಂತರ 2000 ಇಸವಿಯಲ್ಲಿ ಮಿಜಾರಿನ ಶೋಭಾವನಕ್ಕೆ ಸ್ಥಳಾಂತರಗೊಂಡು ವೈಭವಯುತವಾಗಿ ನಡೆಯಲು ಆರಂಭಿಸಿತು. ಆನಂತರ ಎರಡು ವರ್ಷಗಳ ಕಾಲ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಿತು. ಇದೀಗ ಪುತ್ತಿಗೆಯ ವಿವೇಕಾನಂದ ನಗರದ ಶ್ರೀಮತಿ ಕೆ.ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗಮಂದಿರಲ್ಲಿ ಮೇಳೈಸುತ್ತಿದ್ದು, ಬಸದಿಯಿಂದ ಬಯಲು ರಂಗಮಂದಿರದವರೆಗೆ ಸಾಗಿದೆ.
ಪ್ರತಿ ವರ್ಷ ರಾಷ್ಟ್ರಮಟ್ಟದ ಕಲಾವಿದರೊಬ್ಬರಿಗೆ ’ಆಳ್ವಾಸ್ ವಿರಾಸತ್ ” ಪ್ರಶಸ್ತಿಯನ್ನು ನೀಡಲು ಆರಂಭಿಸಿ ಇದೀಗ ಮೂರು ಜನ ಕಲಾವಿದರಿಗೆ ನೀಡುವಷ್ಟರ ಮಟ್ಟಿಗೆ ಬೆಳೆದು ಬಂದಿದೆ.
ಈ ಬಾರಿಯ ವಿರಾಸತನ್ನು ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಿಸಲಾಗುತ್ತಿದ್ದು, ಇಂದು ಸಂಜೆ 5.30ಕ್ಕೆ ಆಳ್ವಾಸ್ ವಿರಾಸತ್ ಆರಂಭಗೊಳ್ಳಲಿದ್ದು ಕರ್ನಾಟಕ ಸರಕಾರದ ರಾಜ್ಯಪಾಲರಾದ ಡಾ. ಥಾವರ್ ಚಂದ್ ಗೆಹ್ಲೋಟ್ ಈ ಬಾರಿ 29ನೇ ವರ್ಷದ ವಿರಾಸತ್ ನ್ನು ಉದ್ಘಾಟಿಸಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್, ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಭಾರತ್ ಸ್ಕೌಟ್ ಗೈಡ್ಸ್ ನ ರಾಜ್ಯ ಅಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಚಿತ್ರಕಲಾ ಪರಿಷತ್ ನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್, ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಂಗಳೂರು ಎಂಆರ್ ಜಿ ಗ್ರೂಫ್ ನ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಅದಾನಿ ಗ್ರೂಪ್ ನ ಕಾರ್ಯನಿರ್ವಾಹಕ ಕಿಶೋರ್ ಆಳ್ವ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ರಾಧ ಸಹಿತ ಉದ್ಯಮಿಗಳು ಗೌರವ ಉಪಸ್ಥಿತರಿರುವರು.