ಮೂಡುಬಿದಿರೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಡಿ.19ಕ್ಕೆ ಜಿಲ್ಲಾಧಿಕಾರಿ ಕಚೇರಿ ಚಲೋ ಹೋರಾಟ
ಮೂಡುಬಿದಿರೆ: ಜಿಲ್ಲೆಯ ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲ ಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸಿಪಿಐ(ಎಂ)ವತಿಯಿಂದ ಡಿ. 19ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಚಲೋ ಹೋರಾಟ ನಡೆಯಲಿದೆ ಎಂದು ಸಿಪಿಐ(ಎಂ)ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಹೇಳಿದರು.
ಅವರು ಮೂಡುಬಿದಿರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಶಿಕ್ಷಣ ಖಾಸಗೀಕರಣದಿಂದ ಜನಸಾಮಾನ್ಯರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದುಬಾರಿ ಚಿಕಿತ್ಸಾ ವೆಚ್ಚದಿಂದಾಗಿ ಬಡವರು ಖಾಸಗಿ ಆಸ್ಪತ್ರೆಗೆ ಹೋಗಲು ಭಯಪಡುತ್ತಿದ್ದಾರೆ. ಇತ್ತ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬಂದಿಗಳ ಕೊರತೆ, ಯಂತ್ರೋಪಕರಣಗಳ ಅಲಭ್ಯತೆಯಿಂದ ಜನರಿಗೆ ಸರಿಯಾದ ಸೇವೆ ಸಿಗುತ್ತಿಲ್ಲ. ಕಳೆದ ಮೂರು ದಶಕಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗುತ್ತಾ ಬಂದರು ಪಾರ್ಲಿಮೆಂಟ್‌ನಲ್ಲಿ ಈ ಬಗ್ಗೆ ಧ್ವನಿ ಎತ್ತಿಲ್ಲ. ಬೀಡಿ ಕಾರ್ಮಿಕರ ಬಾಕಿ ಪಿಂಚಣಿ ನೀಡುವ ವಿಚಾರದಲ್ಲು ಸಂಸದರು ಕಂಪೆನಿಯ ಪರವಾಗಿ ನಿಮತಿದ್ದಾರೆ. ರೈತರು, ಕಾರ್ಮಿಕರು ಹಾಗೂ ಆದಿವಾಸಿಗಳ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದು ಜಿಲ್ಲೆಯ ಜನರ ಧಾರ್ಮಿಕ ಭಾವನೆಗಳ ಲಾಭ ಪಡೆದು ಸಂಸದರಾಗಿದ್ದಾರೆಯೆ ಹೊರತು ಅಭಿವೃದ್ಧಿ ಕಾರ್ಯಗಳಿಂದ ಅಲ್ಲ ಎಂದರು.
ಸಿಪಿಐ(ಎಂ)ರಾಜ್ಯ ಸಮಿತಿ ಸದಸ್ಯ ವಸಂತ ಆಚಾರಿ ಮಾತನಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಪಟ್ಟಿಯೊಂದನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿ ಮತ್ತು ಸಂಸದರ ಮೂಲಕ ಸರಕಾರಕ್ಕೆ ಸಲ್ಲಿಸಿದ್ದೇವೆ. ಜಿಲ್ಲೆಯಲ್ಲಿ 2.50 ಲಕ್ಷ ಕಟ್ಟಡ ಕಾರ್ಮಿಕರು ಮತ್ತು ಅಷ್ಟೇ ಸಂಖ್ಯೆಯ ಬೀಡಿ ಕಾರ್ಮಿಕರಿದ್ದು ಕೇಂದ್ರ ಸರಕಾರದ ನೀತಿಯಿಂದ ಅತಂತ್ರರಾಗಿದ್ದಾರೆ.
ಮೂಡುಬಿದಿರೆ ಬೆಳೆಯುತ್ತಿದ್ದು ಅಭಿವೃದ್ಧಿಯ ವೇಗ ಸಾಲದು. ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಈ ಬಗ್ಗೆ ಜನಜಾಗೃತಿಯಾಗಬೇಕು. ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಕೈಗಾರಿಕೆಗಳಿಗೆ ನಮ್ಮ ಸಹಮತ ಇದೆ. ಜನಪ್ರತಿನಿಧಿಗಳ, ಬಂಡವಾಳಶಾಹಿಗಳ ಲಾಭಕ್ಕೋಸ್ಕರ ಜನವಿರೋಧಿ ಕೈಗಾರಿಕೆಗಳಿಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು. ಸಮಿತಿ ಪ್ರಮುಖರಾದ ರಮಣಿ, ಗಿರಿಜ ಉಪಸ್ಥಿತರಿದ್ದರು.