ವಿಶ್ವ ಮೂಲವ್ಯಾಧಿ ದಿನ-ನವೆಂಬರ್ 20
ಪ್ರತಿ ವರ್ಷ ನವೆಂಬರ್ 20 ರಂದು ವಿಶ್ವ ಮೂಲವ್ಯಾಧಿ ದಿನ ಎಂದು ಆಚರಿಸಿ ಮೂಲವ್ಯಾಧಿ ರೋಗದ ಬಗ್ಗೆ ಇರುವ ಅಪನಂಬಿಕೆಗಳನ್ನು ನಿವಾರಿಸಿ ರೋಗದ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಜನರಿಗೆ ಮನದಟ್ಟು ಮಾಡುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ.
ಇದೊಂದು ಅತ್ಯಂತ ಯಾತನಾಮಯ ಮತ್ತು ಮುಜುಗರ ತರಿಸುವಂತಹಾ ಖಾಯಿಲೆಯಾಗಿದ್ದು, ಯಾರಲ್ಲೂ ಹೇಳಿಕೊಳ್ಳಲಾಗದೆ ರೋಗಿ ರೋಗವನ್ನು ಮುಚ್ಚಿಡುತ್ತಾನೆ. ಭಾರತ ದೇಶವೊಂದರಲ್ಲಿಯೇ ಸುಮಾರು 10 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ಮೂಲವ್ಯಾಧಿ ರೋಗದಿಂದ ಬಳಲುತ್ತಾರೆ. ಆಂಗ್ಲಭಾಷೆಯಲ್ಲಿ ಫೈಲ್ಸ್ ಅಥವಾ ಹಿಮೋರಾಯ್ಡ್ಸ್ ಎಂದೂ ಕರೆಯುತ್ತಾರೆ. ಬಹಳ ಸುಲಭವಾಗಿ ಪತ್ತೆಹಚ್ಚಬಹುದಾದ, ಅತ್ಯಾಧುನಿಕ ಪರೀಕ್ಷೆಗಳ ಅಗತ್ಯವಿಲ್ಲದ ಬಡವಬಲ್ಲಿದ ಎಂದು ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಈ ರೋಗ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ.
ಏನಿದು ಮೂಲವ್ಯಾಧಿ?
ನಿಮ್ಮ ಗುದದ್ವಾರದ ಬಳಿ ಮಲವಿಸರ್ಜಿಸುವ ಜಾಗದಲ್ಲಿ ರಕ್ತನಾಳಗಳು ಊದಿಕೊಳ್ಳುವುದನ್ನು ಮೂಲವ್ಯಾಧಿ ಎನ್ನುತ್ತಾರೆ. ಹೀಗೆ ರಕ್ತನಾಳಗಳು ಊದಿಕೊಂಡು ರಕ್ತಸ್ರಾವವಾಗಿ ವಿಪರೀತ ಯಾತನೆ, ನೋವು ಉಂಟುಮಾಡುತ್ತದೆ. ಅತ್ತ ಕೂರಲೂ ಆಗದೆ ಅತ್ತ ನಿಲ್ಲಲೂ ಆಗದೆ ಭಯಂಕರ ಯಾತನಾಮಯವಾದ ಸನ್ನಿವೇಶ ನಿರ್ಮಾಣವಾಗುತ್ತದೆ. ಹೀಗೆ ಊದಿಕೊಂಡ ರಕ್ತನಾಳಗಳು ಇರುವ ಜಾಗದಲ್ಲಿ ಮಲಹೊರಬರುವಾಗ ರಕ್ತಸ್ರಾವವಾಗಿ ಗುದದ್ವಾರದಲ್ಲಿ ಬಿರುಕು ಉಂಟಾಗುವುದನ್ನು ಪಿಷರ್ ಎನ್ನುತ್ತಾರೆ. ಈ ರಕ್ತನಾಳಗಳಲ್ಲಿ ಸೋಂಕು ಆಗಿ ಕೀವು ತುಂಬಿಕೊಳ್ಳುವುದನ್ನು ಫಿಸ್ಟೂಲಾ ಎನ್ನುತ್ತಾರೆ.
ರೋಗದ ಲಕ್ಷಣಗಳು
1) ಗುದದ್ವಾರದಲ್ಲಿ ಮಲವಿಸರ್ಜಿಸುವಾಗ ವಿಪರೀತ ನೋವು ಮತ್ತು ಯಾತನೆ.
2) ಗುದದ್ವಾರದ ಬಳಿ ತುರಿಕೆ ಉಂಟಾಗಬಹುದು.
3) ಮಲವಿಸರ್ಜನೆ ಬಳಿಕ ಗುದದ್ವಾರದಿಂದ ರಕ್ತ ಒಸರುತ್ತದೆ.
4) ಮಲವಿಸರ್ಜಿಸಿದ ಬಳಿಕವೂ ಪುನ: ಮಲವಿಸರ್ಜಿಸಬೇಕು ಎಂಬ ತುಡಿತ ಉಂಟಾಗುತ್ತದೆ. ಪದೇ ಪದೇ ಮಲವಿಸರ್ಜಿಸಬೇಕು ಎಂದೆನಿಸುತ್ತದೆ ಆದರೆ ಮಲವಿಸರ್ಜನೆ ಆಗುವುದಿಲ್ಲ.
5) ನಿಮ್ಮ ಗುದದ್ವಾರದ ಸುತ್ತ ಗಡ್ಡೆ ಬೆಳೆದಂತೆ ಭಾಸವಾಗುತ್ತದೆ. ನಿಮ್ಮ ಒಳ ಉಡುಪು ರಕ್ತದಿಂದ ಒದ್ದೆಯಾಗುವ ಸಾಧ್ಯತೆಯೂ ಇರುತ್ತದೆ.
6) ಕುಳಿತುಕೊಳ್ಳಲು ಸಾಧ್ಯವಾಗದೇ ಇರಬಹುದು. ಕುಳಿತಾಗ ನೋವು ಮತ್ತು ಮುಳ್ಳಿನ ಮೇಲೆ ಕುಳಿತಂತೆ ಭಾಸವಾಗುವುದು.
ಕಾರಣಗಳು ಏನು? ಯಾಕಾಗಿ ಈ ರೋಗ ಬರುತ್ತದೆ ಎನ್ನುವುದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ.
1) ಮಲಬದ್ಧತೆ ಮೂಲವ್ಯಾಧಿಗೆ ಅತಿ ಮುಖ್ಯವಾದ ಕಾರಣವಾಗಿರುತ್ತದೆ.
2) ಮಲವಿಸರ್ಜಿಸುವಾಗ ನಿರಂತರವಾಗಿ ಅತಿಯಾದ ಒತ್ತಡ ಹಾಕಿದಾಗಲೂ ಈ ಮೂಲವ್ಯಾಧಿ ಬರುವ ಸಾಧÀ್ಯತೆ ಇರುತ್ತದೆ.
3) ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಫ್ರಾಜಿಸ್ಟರಾನ್ ಎಂಬ ರಸದೂತ ಹೆಚ್ಚಾಗಿರುತ್ತದೆ. ಇದರಿಂದಾಗಿ ರಕ್ತನಾಳಗಳು ವಿಸ್ತಾರಗೊಳ್ಳುತ್ತದೆ. ಗರ್ಭಿಣಿಯರಿಗೆ ಕೊಡುವ ಹೆಚ್ಚಿನ ಕಬ್ಬಿಣದ ಅಂಶಗಳಿಂದಾಗಿ ಮಲಬದ್ಧತೆ ಉಂಟಾಗುವ ಸಾಧ್ಯತೆ ಇರುತ್ತದೆ. ಗರ್ಭಿಣಿಯರಲ್ಲಿ ಮಲವಿಸರ್ಜಿಸುವಾಗ ಗುದದ್ವಾರದ ಮೇಲೆ ಹೆಚ್ಚಿನ ಒತ್ತಡವೂ ಇರುತ್ತದೆ. ಈ ಎಲ್ಲಾ ಕಾರಣಗಳಿಂದ ಮೂಲವ್ಯಾಧಿ ಸಾಧ್ಯತೆ ಜಾಸ್ತಿ ಇರುತ್ತದೆ.
4) ಜಾಸ್ತಿ ಮಾಂಸಾಹಾರ ಸೇವನೆ ಕೂಡಾ ಮೂಲವ್ಯಾಧಿಗೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ. ನಿಮ್ಮ ಆಹಾರದಲ್ಲಿ ಹಣ್ಣು ತರಕಾರಿ, ಸೊಪ್ಪುಗಳಿಗೆ ಹೆಚ್ಚು ಆದ್ಯತೆ ನೀಡಬೇಕು.
ಏನು ಮಾಡಬೇಕು?
- ಸಾಕಷ್ಟು ನೀರು ಕುಡಿಯಬೇಕು ದ್ರವಾಹಾರಕ್ಕೆ ಹೆಚ್ಚು ಒತ್ತು ನೀಡಬೇಕು.
- ನಿಮ್ಮ ಆಹಾರದ ಆಯ್ಕೆ ಮಾಡುವಾಗ ಜಾಸ್ತಿ ನಾರುಮುಕ್ತ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿ
- ಮನೆಯಲ್ಲಿಯೇ ತಯಾರಿಸಿದ ಆಹಾರಕ್ಕೆ ಹೆಚ್ಚು ಆಧ್ಯತೆ ನೀಡಿ. ಜಂಕ್ ಪುಡ್ ಸೇವನೆ ಮಾಡಬೇಡಿ. ಸಾಕಷ್ಟು ಹಣ್ಣು, ತರಕಾರಿ ಸೊಪ್ಪು ಸೇವನೆಯನ್ನು ಮಾಡಿ.
- ಜೀವನ ಶೈಲಿಯನ್ನು ಬದಲಿಸಿ ಸಾಕಷ್ಟು ನಿದ್ರೆಯನ್ನು ಮಾಡಬೇಕು. ನಿಯಮ ದೈಹಿಕ ವ್ಯಾಯಾಮ ಅತೀ ಅಗತ್ಯ ಶೇಕಡಾ 90ರಷ್ಟು ಮೂಲವ್ಯಾಧಿಗೆ ಜೀವನ ಶೈಲಿ ಕಾರಣ ಎಂದು ಸಾಭೀತಾಗಿದೆ.
- ಅತಿಯಾದ ತುರಿಕೆ ಇದ್ದಲ್ಲಿ ಬಿಸಿ ನೀರಿನಲ್ಲಿ ಸ್ಥಾನ ಮಾಡಿದಾಗ ನೋವು ಶಮನವಾಗುತ್ತದೆ. ಅಗತ್ಯವಿದ್ದಲ್ಲಿ ಪಾರಾಸಿಟಮಲ್ ಗುಳಿಗೆ ತೆಗೆದುಕೊಳ್ಳಿ .
- ಮಲವಿಸರ್ಜನೆ ಬಳಿಕ ಶುಚಿಗೊಳಿಸುವಾಗ ಹಿತವಾಗಿ ಮೆದುವಾಗಿ ಉಜ್ಜಬೇಕು ಮೇದುವಾದ ಬಟ್ಟೆಯಿಂದಲೂ ಒರೆಸಬಹುದು. ಅತೀಯಾದ ನೋವಿದ್ದಲ್ಲಿ ಬಟ್ಟೆಯ ನಡುವೆ ಐಸ್‍ಗಡ್ಡೆ ಇಟ್ಟು ನೋವು ಶಮನ ಮಾಡಬಹುದು
- ನಿಮ್ಮ ಗುದದ್ವಾರದ ಸ್ವಚ್ಚತೆಗೆ ಹೆಚ್ಚು ಗಮನ ನೀಡಬೇಕು. ಮಲವಿಸರ್ಜಿಸುವಾಗ ಗುದದ್ವಾರದಿಂದ ದೊಡ್ಡ ಕರುಳಿನ ಭಾಗ ಹೊರ ಬಂದಿದ್ದಲ್ಲಿ ನಿಧಾನವಾಗಿ ಒಳಗೆ ಸೇರಸಬೇಕು. ಜಾಸ್ತಿ ಒತ್ತಡ ಹಾಕಬಾರದು.
- ಮಲಬದ್ದತೆ ಉಂಟು ಮಾಡುವ ಅಲ್ಕೋಹಾಲ್ ಸೇವನೆ, ಕೆಪೆನ್‍ಯುಕ್ತ ಪೇಯಗಳಾದ ಕಾಫಿ, ಟೀ, ಕೊಕೊಕೋಲ ಮುಂತಾದ ಕಾರ್ಬೋನೆಟೆಡ್ ಪೇಯಗಳನ್ನು ವರ್ಜಿಸಿ ಸುಲಭವಾಗಿ ಮಲವಿಸರ್ಜನೆಗೆ ಸಹಾಯಮಾಡುವ ಆಹಾರವನ್ನು ಹೆಚ್ಚು ಸೇವಿಸತಕ್ಕದ್ದು
ಏನು ಮಾಡಬಾರದು?
- ಮಲವಿಸರ್ಜನೆ ಮಾಡುವಾಗ ಅತಿಯಾದ ಒತ್ತಡ ಹಾಕಬಾರದು. ಮಲವಿಸರ್ಜಿನೆ ಎನ್ನುವುದು ಸಹಜವಾಗಿ ಆಗಬೇಕು
- ನಿಮಗೆ ಮಲವಿಸರ್ಜನೆ ಮಾಡಬೇಕೆಂಬ ತುಡಿತ ಬಂದಾಗ ಮಾಡಲೇಬೇಕು. ಮಲವಿಸರ್ಜನೆಯನ್ನು ಹಿಡಿದಿಟ್ಟುಕೊಂಡು ಮುಂದೂಡಿದಲ್ಲಿ ಮುಂದೆ ಮೂಲವ್ಯಾದಿ ಬರುವ ಸಾಧ್ಯತೆ ಇರುತ್ತದೆ.
- ಮಲವಿಸರ್ಜಿಸಿದ ಬಳಿಕ ದೊರಗಾದ ಗಟ್ಟಿಯಾದ ಬಟ್ಟೆಯಿಂದ ಉಜ್ಜಬೇಡಿ. ಜಾಸ್ತಿ ರಕ್ತಸ್ರಾವ ಆಗಬಹುದು.
- ಅನಾವಶ್ಯಕವಾಗಿ ನೋವು ನಿವಾರಕ ಔಷಧಿ ಸೇವಿಸಬೇಡಿ. ಕೊಡೈನ್ ಮತ್ತು ಬ್ರೂಪೆನ್ ಮಾತ್ರೆ ಸೇವಿಸಬೇಡಿ ಕೊಡೈನ್ ಮಾತ್ರೆಯಿಂದ ಮಲಬದ್ದತೆ ಜಾಸ್ತಿಯಾಗುತ್ತದೆ. ಬ್ರೂಪೆನ್ ಮಾತ್ರೆಯಿಂದ ರಕ್ತಸ್ರಾವ ಜಾಸ್ತಿಯಾಗಬಹುದು.
- ಮಲವಿಸರ್ಜನೆಗೆ ಜಾಸ್ತಿ ಸಮಯ ತೆಗೆದುಕೊಳ್ಳಬೇಕು.
- ಮೂಲವ್ಯಾಧಿ ತೊಂದರೆ ಇರುವವರು ಜಂಕ್ ಪುಡ್, ಕರಿದತಿಂಡಿ. ಕೇಪನ್‍ಯುಕ್ತ ದ್ರಾವಣಗಳು, ಅಲ್ಕೋಹಾಲ್ ಸೇವನೆ ಮಾಡಬಾರದು.
ತಡೆಗಟ್ಟುವುದು ಹೇಗೆ?
- ನಿಮ್ಮ ಜೀವನ ಶೈಲಿ ಬದಲಿಸಿಕೊಳ್ಳಬೇಕು. ದೈಹಿಕ ವ್ಯಾಯಾಮ ಇರುವ ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳಿ.
- ಮಾಂಸಹಾರಕ್ಕಿಂತ ಸಸ್ಯಾಹಾರಕ್ಕೆ ಹೆಚ್ಚು ಆಧ್ಯತೆ ನೀಡಿ
- ಅಲ್ಕೋಹಾಲ್ ಧೂಮಪಾನ ವರ್ಜಿಸಿ. ಕೆಪೆನ್‍ಯುಕ್ತ ಪಾನಿಯ ತ್ಯಜಿಸಿ ಸಾಕಷ್ಟು ನೀರು ಸೇವನೆ ಮಾಡಬೇಕು.
- ನಿಮ್ಮ ಆಹಾರದಲ್ಲಿ ನಾರುಯುಕ್ತ ಆಹಾರಕ್ಕೆ ಹೆಚ್ಚಿನ ಪಾಲು ಇರಲಿ. ಮಲಬದ್ದತೆ ಉಂ ಟು ಮಾಡುವ ಆಹಾರ ಬಳಕೆ ನಿಲ್ಲಿಸಿ.
- ಗುದದ್ವಾರದಲ್ಲಿ ರಕ್ತಸ್ರಾವ ತುರಿಕೆ ನೋವು ಕಂಡು ಬಂದಾಗ ಯಾವುದೇ ಸಂಕೋಚ ಹಿಂಜರಿಕೆ ಇಲ್ಲದೆ ವೈದ್ಯರ ಬಳಿ ತೋರಿಸಿ ಪರಿಹಾರ ಆರಂಭಿಕ ಹಂತದಲ್ಲಿಯೇ ಪಡೆದುಕೊಳ್ಳಬೇಕು.
ಚಿಕಿತ್ಸೆ ಹೇಗೆ?
ಮೂಲವ್ಯಾದಿಗೆ ಪರಿಣಾಮಕಾರಿ ಚಿಕಿತ್ಸೆ ಇದೆ. ಚಿಕಿತ್ಸೆ ಇಲ್ಲ ಎನ್ನುವುದು ತಪ್ಪು ಕಲ್ಪನೆ ಇದು ಜೀವನ ಪರ್ಯಂತ ಕಾಯಿಲೆ ಎನ್ನುವುದು ಮೂರ್ಖತನ. ಬಹಳ ಚೆನ್ನಾಗಿ ಚಿಕಿತ್ಸೆಗೆ ಸ್ಪಂಧಿಸುವ ಕಾಯಿಲೆ ಇದಾಗಿರುತ್ತದೆ. ಹಳ್ಳಿ ಮದ್ದು, ಕಷಾಯ ಮತ್ತು ತಾಯಿತಗಳಿಂದ ಗುಣ ಪಡಿಸಬಹುದು ಎಂದು ನಿರ್ಲಕ್ಷ ವಹಿಸಿದ್ದಲ್ಲಿ ಮುಂದೆ ಸಾಕಷ್ಟು ತೊಂದರೆಗಳಿಗೆ ಕಾರಣವಾಗಬಹುದು.
- ಶಸ್ತ್ರ ಚಿಕಿತ್ಸೆ : ಮೂಲವ್ಯಾದಿ ಮುಂದುವರಿದ 2ನೇ ಅಥವಾ 3ನೇ ಹಂತದಲ್ಲಿ ಶಸ್ತ್ರ ಚಿಕಿತ್ಸೆ ಅನಿವಾರ್ಯ ಈ ಹಂತದಲ್ಲಿ ಹಳ್ಳಿ ಮದ್ದು, ನಕಲಿ ವೈದ್ಯರ ನಕಲಿ ಮದ್ದಿನಿಂದ ಪ್ರಾಣಕ್ಕೂ ಕುತ್ತು ಬರಬಹುದು. ಮುಂದುವರಿದ ಹಂತದಲ್ಲಿ ಮೂಲವ್ಯಾಧಿಗೆ ಶಸ್ತ್ರ ಚಿಕಿತ್ಸೆಯೇ ಶಾಶ್ವತ ಪರಿಹಾರ. ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕವೂ ಮೂಲವ್ಯಾದಿ ಬರುತ್ತದೆ ಎನ್ನುವುದು ತಪ್ಪು ಕಲ್ಪನೆ.
- ಲೇಸರ್ ಚಿಕಿತ್ಸೆಗೂ ಮೂಲವ್ಯಾದಿ ಸ್ಪಂಧಿಸುತ್ತದೆ. ಆರಂಭಿಕ ಹಂತದಲ್ಲಿ ಈ ಚಿಕಿತ್ಸೆ ನೀಡಲಾಗುತ್ತದೆ. ಮೂಲವ್ಯಾಧಿಗೆ ಅತೀ ಉತ್ತಮ ಮನೆಮದ್ದು ಎಂದರೆ ಹಳ್ಳಿಯ ನಾರುಯುಕ್ತ ಆಹಾರ ಸಾಕಷ್ಟು ನೀರು ಮತ್ತು ದ್ರವಾಹಾರ (ನೈಸರ್ಗಿಕ ಪೇಯಗಳು ಮಾತ್ರ ಕೃತಕ ರಾಸಾಯನಿಕ ಕೇಪೆನ್‍ಯುಕ್ತ ಪೇಯಗಳಲ್ಲ) ಹೇರಳವಾದ 6ರಿಂದ 8ಗಂಟೆಗಳ ನಿದ್ರೆ ಮತ್ತು ಮಾನಸಿಕ ನೆಮ್ಮದಿಯ ಜೀವನ ಆಗಿರುತ್ತದೆ.
ಕೊನೆಮಾತು:
ಗುದದ್ವಾರದಲ್ಲಿರುವ ಎಲ್ಲಾ ತೊಂದರೆಗೂ ಮೂಲವ್ಯಾದಿ ಆಗಿರಲೇಬೇಕಿಲ್ಲ. ಸುಮಾರು 100ಕ್ಕೂ ಹೆಚ್ಚು ರೋಗಗಳು ಗುದದ್ವಾರದಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಗುದದ್ವಾರದ ಕ್ಯಾನ್ಸರ್ ಇರಲೂ ಬಹುದು ಈ ಕಾರಣದಿಂದ ಗುದದ್ವಾರದಲ್ಲಿ ಏನೇ ಸಮಸ್ಯೆ ಇದ್ದರೂ (ರಕ್ತಸ್ರಾವ, ತುರಿಕೆ, ಗಡ್ಡೆ, ನೋವು) ತಕ್ಷಣವೇ ವೈದ್ಯರ ಬಳಿ ತೋರಿ ಸೂಕ್ತ ಪರಿಹಾರ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಮುಂದೆ ಅನಾಹುತಕ್ಕೆ ಕಾರಣವಾಗಿ ಜೀವಕ್ಕೆ ಕುತ್ತು ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ನಕಲಿ ವೈದ್ಯರು, ಹಳ್ಳಿ ವೈದ್ಯರು ಹಳ್ಳಿ ಮದ್ದುಗಳಿಂದ ಉಪಯೋಗಕ್ಕಿಂತ ಅನಾಹುತಗಳೆ ಜಾಸ್ತಿ ಉಂಟಾಗುವ ಸಾಧ್ಯೆತೆ ಹೆಚ್ಚಾಗಿರುತ್ತದೆ. ನಕಲಿ ವೈದ್ಯರು ಮಾಡುವ ದಾರ ಹಾಕುವುದ ಆಸಿಡ್ ಸುರಿಯುವುದು ಮುಂತಾದ ಅವೈಜ್ಞಾನಿಕ ಚಿಕಿತ್ಸೆಗಳಿಂದ ಜೀವಕ್ಕೆ ಸಂಚಕಾರ ಬರಲೂ ಬಹುದು
ಡಾ ಮುರಲಿ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು ಮಂಗಳೂರು