ಮೂಡುಬಿದಿರೆ ಮೆಸ್ಕಾಂ ಬಳಿ ಅವೈಜ್ಞಾನಿಕ ವೃತ್ತ ತೆರವಿಗೆ ಆಗ್ರಹ

ಮೂಡುಬಿದಿರೆ-ವೇಣೂರು, ಮೂಡುಬಿದಿರೆ-ಬಿಸಿರೋಡನ್ನು ಸಂಧಿಸುವ ಮೆಸ್ಕಾಂ ಬಳಿ ರಾಜ್ಯ ಹೆದ್ದಾರಿಯಲ್ಲಿ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಸರ್ಕಲ್ ತೆರವುಗೊಳಿಸುವಂತೆ ಆಗ್ರಹಿಸಿದೆ.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಶಾಸಕರ ನಿಧಿಯಿಂದ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ. ಈ ರಸ್ತೆಯಲ್ಲಿ ದಿನಕ್ಕೆ ನೂರಾರು ವಾಹನಗಳು ಓಡಾಡುತ್ತಿದ್ದು, ಬೃಹದಾಕಾರದ ವೃತ್ತದಿಂದಾಗಿ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ.

ಈಗಾಗಲೇ ಪ್ರತಿಭಟನೆ ನಡೆಸಿ ಪುರಸಭೆ, ಪಿಡಬ್ಲ್ಯೂಡಿ ಎಂಜಿನಿಯರ್ ಮತ್ತು ಶಾಸಕರನ್ನು ಎಚ್ಚರಿಸಲಾಗಿದೆ. ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾಗ ಎರಡು ದಿನ ಸಮಯಾವಕಾಶ ಕೇಳಿದ್ದರು. ಆದರೆ ಏನೂ ಪ್ರಗತಿಯಾಗಿಲ್ಲ. ಶೇ.40 ಪರ್ಸಂಟೇಜ್ ಕಮಿಷನ್‍ಗಾಗಿ ಶಾಸಕರ ಮೂಲಕ ಸರ್ಕಾರದ ಹಣ ದುರ್ಬಳಕೆಯಾಗುತ್ತಿದೆ. ತನ್ನ ಸಂಬಂಧಿಕರ ಹೆಸರಿನಲ್ಲಿ ಕಾಮಗಾರಿ ಗುತ್ತಿಗೆ ನಡೆಸುತ್ತಿರುವ ಶಾಸಕರಿಗೆ ಜನರ ಕಷ್ಟ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪುರಸಭೆ ಸದಸ್ಯರಾದ ಕೊರಗಪ್ಪ, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ರೂಪಾ ಎಸ್. ಶೆಟ್ಟಿ, ಪುರಂದರ ದೇವಾಡಿಗ, ಇಮಾಯುತ್ತಲ್ಲಾ, ಇಕ್ಬಾಲ್ ಕರೀಂ, ಪಕ್ಷದ ಪ್ರಮುಖರಾದ ಜಯ ಕುಮಾರ್ ಶೆಟ್ಟಿ, ಚಂದ್ರಹಾಸ್ ಸನಿಲ್, ಅಲ್ವಿನ್ ಮಿನೇಜಸ್ ಮತ್ತಿತರರಿದ್ದರು.
