ಯುವರಾಜ ಜೈನ್ ಗೆ ಗ್ಲೋಬಲ್ ಎಂಬಾಸಿಡೆರ್ ಆಫ್ ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿ
ಮೂಡುಬಿದಿರೆ : “ಅಂತಾರಾಷ್ಟ್ರೀಯ ಎಜುಕೇಶನ್ ಎಂಡ್ ಮ್ಯಾನೇಜ್ಮೆಂಟ್ ಸಂಸ್ಥೆ”ಕೊಡಮಾಡುವ ಪ್ರತಿಷ್ಠಿತ “ಗ್ಲೋಬಲ್ ಎಂಬಾಸಿಡೆರ್ ಆಫ್ ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿ ಯನ್ನು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಇವರಿಗೆ ನೀಡಿ ಗೌರವಿಸಿತು. ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ಕಳೆದ ಮೂರು ದಶಕಗಳಿಂದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಮೂಲಕ ಗುರುಕುಲ ಮಾದರಿಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ತನ್ನ ಬದ್ಧತೆ, ಶಿಕ್ಷಣ ಪ್ರೀತಿ, ಸಾಮಾಜಿಕ ಕಳಕಳಿಯ ಮೂಲಕ ನಾಡಿನೆಲ್ಲಡೆ ಇವರು ಹೆಸರುವಾಸಿಯಾಗಿದ್ದಾರೆ.
ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳನ್ನು ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಿ ಬಹುದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವಲ್ಲಿ , ಉನ್ನತವಾದ ಧ್ಯೇಯ ಆದರ್ಶಗಳೊಂದಿಗೆ ಪರಮಪೂಜ್ಯ ಡಾಕ್ಟರ್ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದೊಂದಿಗೆ ಇವರು ನಡೆಸಿಕೊಂಡು ಬರುತ್ತಿರುವ ಎಕ್ಸಲೆಂಟ್ ಸಂಸ್ಥೆಯ ಪಾತ್ರ ಮಹತ್ತರವಾದದ್ದು.
ಮೂಡುಬಿದಿರೆ ಕಲ್ಲಬೆಟ್ಟುವನ್ನು ಕೇಂದ್ರವಾಗಿರಿಸಿಕೊಂಡು ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಬೆಂಗಳೂರು ಹಾಸನ ಬೆಳಗಾವಿ ಬಿಜಾಪುರ ಮೈಸೂರು ಶಿವಮೊಗ್ಗ ಹೀಗೆ ದೇಶದಾದ್ಯಂತ ಮಾದರಿ ಶಿಕ್ಷಣ ಪದ್ಧತಿಯನ್ನು ಪರಿಚಯಿಸಿದ ಕೀರ್ತಿ ಇವರದು.
ಜೇಸಿ, ರೋಟೆರಿ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಮೂಲಕ ಸಂಘಟನೆ, ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿರುತ್ತಾರೆ.
ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನನ್ಯ ಅಪೂರ್ವ ಕೊಡುಗೆಗಾಗಿ ಕೊಡಮಾಡಲ್ಪಡುವ ಪ್ರಶಸ್ತಿ ಇದಾಗಿದ್ದು, ಕಳೆದ ಮೂರು ದಶಕಗಳ ಶಿಕ್ಷಣ ಕ್ಷೇತ್ರದ ಸಾರ್ಥಕ ಸೇವೆಯನ್ನು ಪರಿಗಣಿಸಿ ಸೆ.30 ರಂದು ಈ ಪ್ರಶಸ್ತಿ ನೀಡಲಾಗಿದೆ. ಇದೇ ಸಂದರ್ಭದಲ್ಲಿ “ವಿದ್ಯಾಭ್ಯಾಸ ಮತ್ತು ಸಾಮಾಜಿಕ-ಆರ್ಥಿಕ ಪ್ರಗತಿ” ವಿಷಯದ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ನಡೆಯಿತು.
ಸಮಾರಂಭದಲ್ಲಿ ರಾಯಭಾರಿಗಳಾದ ಡಾ ವಿ ಬಿ ಸೋನಿ, ಸರ್ವೋಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಡಾ ಜಿ ಬಿ ರಾವ್, ರಾಷ್ಟ್ರೀಯ ಮಹಾಮಂತ್ರಿ ರಾಜೇಶ್ ಗುಪ್ತ, ಜಿನೆವಾದ ಅಂತಾರಾಷ್ಟ್ರೀಯ ಕಾನೂನು ಆಯೋಗದ ಮಾಜಿ ಅಧ್ಯಕ್ಷರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಡಾ ನರಿಂದರ್ ಸಿಂಗ್, ನವ ದೆಹಲಿಯ ಆಂಗ್ಲೋ ಇಂಡಿಯನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮತ್ತು ಫ್ರಾಂಕ್ ಆಂಟೋನಿ ಪಬ್ಲಿಕ್ ಸ್ಕೂಲುಗಳ ಅಧ್ಯಕ್ಷರಾದ ಡೇವಿಡ್ ಜೋಸೆಫ್ ಹಿಲ್ಟನ್, ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಇ ಪಿ ಎಫ್ ಓ ನ ಸದಸ್ಯರಾದ ಸುಮನ್ ಸಿಂಗ್, ಪ್ರಧಾನ ಕಾರ್ಯದರ್ಶಿ ಡಾ ಎನ್ ಎಸ್ ಎನ್ ಬಾಬು ಮುಂತಾದವರು ಉಪಸ್ಥಿತರಿದ್ದರು.