ಮಂಗಳೂರು: ಶಿವಮೊಗ್ಗದಲ್ಲಿ ನಡೆದ ದಾಳಿ ಪ್ರಕರಣಕ್ಕೆ ನಳಿನ್ ಕುಮಾರ್ ಕಟೀಲ್ ಖಂಡನೆ
ಶಿವಮೊಗ್ಗದಲ್ಲಿ ಮೀಲಾದ್ ಮೆರವಣಿಗೆ ಹೆಸರಿನಲ್ಲಿ ಹಿಂದೂ ಧರ್ಮೀಯರ ಅಂಗಡಿಗಳ, ಮನೆಗಳಿಗೆ ದಾಳಿ ನಡೆದಿದ್ದು, ಇದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿದ್ದು, ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿತ್ತು. ಆ ಸಂದರ್ಭ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದಿರುವ ಕಾರಣ ಮತಾಂಧ ಶಕ್ತಿಗಳು ಮತ್ತೆ ತಮ್ಮ ಎದ್ದು ನಿಂತಿವೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗ ಸೂಕ್ಷ್ಮ ಜಿಲ್ಲೆಯಾಗಿದ್ದು, ಇಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸರಕಾರ ಮುನ್ನಚಚ್ಚರಿಕೆ ವಹಿಸಬೇಕಾಗಿತ್ತು. ಸರಕಾರ ಕಠಿಣ ಕ್ರಮ ವಹಿಸದಿರುವ ಕಾರಣ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಈ ರೀತಿಯ ಘಟನೆಗಳು ಮರುಕಳಿಸದ ರೀತಿಯಲ್ಲಿ ತನಿಖೆ ಮಾಡಬೇಕು. ಈ ಘಟನೆಯಲ್ಲಿ ಯಾರು ಭಾಗಿಯಾಗಿದ್ದಾರೋ ಅಂತಹವರನ್ನು ಬಂಧಿಸಬೇಕು. ಘಟನೆಗಳಲ್ಲಿ ಆತಂಕವಾದ, ಭಯೋತ್ಪದನಾ ಚಟುವಟಿಕೆಗಳಿವೆಯೇ ಎಂದು ಕಂಡು ಹಿಡಿಯಬೇಕು ಎಂದು ನಳಿನ್ ಒತ್ತಾಯಿಸಿದರು.
ರಾಜ್ಯದಲ್ಲಿ ಗೃಹ ಸಚಿವರು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಮತ ಬೇಟೆಗಾಗಿ ಇಂತಹ ಭಯೋತ್ಪದನಾ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಫಲರಾಗಿದ್ದಾರೆ. ಹಿಂದೆ ಪ್ರವೀಣ್ ನೆಟ್ಟಾರು, ಹರ್ಷ ಹತ್ಯೆ ಎನ್ ಐಎ ತನಿಖೆ ಮೂಲಕ ಕಠಿಣ ಕ್ರಮ ವಹಿಸಲಾಗಿತ್ತು. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಗಲಾಟೆ ಸಂದರ್ಭದಲ್ಲಿ ಬಿಜೆಪಿ ಸರಕಾರ ಕಠಿಣ ಕ್ರಮ ವಹಿಸಿದ್ದ ಕಾರಣ ಇಂತಹ ಆತಂಕವಾದ ಹತೋಟಿಗೆ ಬಂದಿತ್ತು ಎಂದವರು ಹೇಳಿದರು.