ಪೌರಕಾರ್ಮಿಕರ ದಿನದಂದು ಹಗಲು ರಾತ್ರಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡ ಮೂಡುಬಿದಿರೆಯ ಪೌರಕಾರ್ಮಿಕರು

ಮೂಡುಬಿದಿರೆ: ಪೌರಕಾರ್ಮಿಕರ ದಿನದಂದು ಪುರಸಭೆಯು ಪೌರಕಾರ್ಮಿಕರಿಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಅವರ ಮನಸನ್ನು ಒಂದು ದಿನದ ಮಟ್ಟಿಗೆ ರಿಲಾಕ್ಸ್ ಆಗುವಂತೆ ನೋಡಬೇಕಾಗಿತ್ತು ಆದರೆ ಮೂಡುಬಿದಿರೆ ಪುರಸಭೆಯ ಪೌರಕಾರ್ಮಿಕರು ಮಾತ್ರ ಈ ದಿನದಂದು ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಗಮನ ಸೆಳೆದಿದ್ದಾರೆ.

ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ವತಿಯಿಂದ ಪೂಜಿಸಲ್ಪಟ್ಟ ವಜೃ ಮಹೋತ್ಸವದ ಗಣೇಶನ ವಿಸರ್ಜನಾ ಸಮಾರಂಭವು ಸಂಜೆ ವೇಳೆಗೆ ಆರಂಭಗೊಂಡಿತು. ಸಂದರ್ಭದಲ್ಲಿ ರಸ್ತೆಗಳಲ್ಲೂದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಕಾಗದದ ಚೂರುಗಳು, ಪೇಪರ್ ಗ್ಲಾಸ್ ಗಳ ಮತ್ತು ತಿಂದು ಬಿಸಾಡಿರುವ ಜೋಳದ ಕಸವನ್ನು ಮೂಡುಬಿದಿರೆ ಪುರಸಭೆಯ ಪೌರ ಕಾರ್ಮಿಕರು ರಾತ್ರಿ ಒಂದು ಗಂಟೆಯ ನಂತರ ಗುಡಿಸಿ ಮೂಡುಬಿದಿರೆಯನ್ನು ಸ್ವಚ್ಚಗೊಳಿಸಿ ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ.ಅವರ ಮಾರ್ಗದರ್ಶನದಲ್ಲಿ ಪರಿಸರ ಅಭಿಯಂತರೆ ಶಿಲ್ಪಾ ಮತ್ತು ಸ್ವಚ್ಛತಾ ರಾಯಭಾರಿ ಸಂಧ್ಯಾ ಅವರ ನೇತೃತ್ವದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಸ್ವಚ್ಛ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಆಲಂಗಾರ್ ವರೆಗೂ ರಸ್ತೆಯ ಪಕ್ಕದಲ್ಲಿ ಗೋಣಿಚೀಲವನ್ನು ಇಟ್ಟು ಕಸಕಡ್ಡಿಗಳನ್ನು ಅದರಲ್ಲಿ ಹಾಕುವಂತೆ ಸೂಚನೆಯನ್ನು ಹಾಕಲಾಗಿತ್ತು.

ಆದರೆ ಅಧಿಕ ಜನಸಂದಣಿ ಇದ್ದುದರಿಂದ ಮತ್ತು ರಾತ್ರಿಯಾಗಿರುವುದರಿಂದ ಸಾರ್ವಜನಿಕರ ಗಮನಕ್ಕೆ ಇದು ಬಂದಿಲ್ಲದಿರುವುದರಿಂದ ಕುಡಿಯಲು ಬಳಸಿದ್ದ ಪಾನೀಯಗಳ ಬಾಟ್ಲಿಗಳು, ಗ್ಲಾಸುಗಳು, ತಿಂಡಿಯ ಪ್ಯಾಕೆಟ್ ಗಳು, ಪೇಪರ್ ಗಳು ರಸ್ತೆಯುದ್ಧಕ್ಕೂ ರಾಶಿ ಬಿದ್ದಿದ್ದವು.
ಇದನ್ನು ಅರಿತ ಸುಮಾರು 46 ಜನ ಪೌರ ಕಾರ್ಮಿಕರು ಒಂದು ಕೈಯಲ್ಲಿ ಹಿಡಿಸೂಡಿ ಇನ್ನೊಂದು ಕೈಯಲ್ಲಿ ಗೋಣಿಚೀಲವನ್ನು ಹಿಡಿದುಕೊಂಡು ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಮುಂಜಾನೆ 5.30 ರವರೆಗೂ ದುಡಿದಿದ್ದಾರೆ.

ಬೆಳಿಗ್ಗೆ ನೋಡಿದವರಿಗೆ ಅಚ್ಚರಿ, ರಾತ್ರಿ ರಸ್ತೆಯುದ್ದಕೂ ಬಿದ್ದಿದ್ದ ತ್ಯಾಜ್ಯ ಅದಾಗಲೇ ಲಾರಿಯನ್ನು ಸೇರಿ ತ್ಯಾಜ್ಯ ವಿಲೇವಾರಿ ಘಟಕದತ್ತ ಪ್ರಯಾಣ ಬೆಳೆಸಿಯಾಗಿದೆ. ಮೂಡುಬಿದಿರೆ ಪೇಟೆಯೂ ಸ್ವಚ್ಚ ಪರಿಸರದಂತೆ ಕಂಗೊಳಿಸಿದೆ ಇದನ್ನು ಕಂಡ ಸಾರ್ವಜನಿಕರು ಪುರಸಭೆ ಮತ್ತು ಪೌರಕಾರ್ಮಿಕರ ಕಾರ್ಯವನ್ನು ಕೊಂಡಾಡಿದ್ದಾರೆ.

Related Posts

Leave a Reply

Your email address will not be published.