ಮೂಡುಬಿದಿರೆ: ಏರಿಳಿತ ತುಟ್ಟಿಭತ್ತೆ ಪಾವತಿಸಲು ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ
ಮೂಡುಬಿದಿರೆ : 2022ರ ಕೊನೆಯಲ್ಲಿ ಉಚ್ಛನ್ಯಾಯಲಯವು ಬೀಡಿ ಕಾರ್ಮಿಕರಿಗೆ ನೀಡಬೇಕಾದ ತುಟ್ಟಿಭತ್ತೆಯನ್ನು ನ್ಯಾಯೋಚಿತವಾಗಿದೆ ಎಂದು ತೀರ್ಪು ನೀಡಿದೆ. ಅದೇ ಸಂದರ್ಭದಲ್ಲಿ ಇನ್ನೊಂದು ತೀರ್ಪು ಮಾಲೀಕರ ಪರವಾಗಿ ಬಂದಿರುತ್ತದೆ. ಬೀಡಿ ಕಾರ್ಮಿಕರಿಗೆ ನ್ಯಾಯೋಚಿತವಾಗಿ ನೀಡಬೇಕಾದ ಏರಿಳಿತ ತುಟ್ಟಿಭತ್ತೆಯನ್ನು ನೀಡಬೇಕು. ಬೀಡಿ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಮೊತ್ತವನ್ನು ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರಕಾರ ಗಂಭೀರ ಶ್ರಮವಹಿಸಬೇಕೆಂದು ಬೀಡಿ ಫೆಡರೇಷನ್ ನ ಜಿಲ್ಲಾ ಅಧ್ಯಕ್ಷ ವಸಂತ ಆಚಾರಿ ಆಗ್ರಹಿಸಿದರು.
ಅವರು ಬೀಡಿ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಉಡುಪಿ ಮತ್ತು ದ.ಕ.ಜಿಲ್ಲೆ, ಉಚ್ಛ ನ್ಯಾಯಾಲಯದ ತೀರ್ಪಿನಂತೆ ಬೀಡಿ ಕಾರ್ಮಿಕರಿಗೆ 2015-2018ರ ತನಕದ ಏರಿಳಿತ ತುಟ್ಟಿಭತ್ತೆ ಪಾವತಿಸಲು ಒತ್ತಾಯಿಸಿ ಮೂಡುಬಿದಿರೆ ಪ್ರದೇಶ ಬೀಡಿ ಕೆಲಸಗಾರರ ಸಂಘ(ರಿ)ದ ವತಿಯಿಂದ ಶುಕ್ರವಾರ ತಾಲೂಕು ಆಡಳಿತ ಸೌಧದ ಎದುರು ನಡೆದ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ ಹೊಗೆಸೊಪ್ಪು, ಎಲೆ, ನೂಲು ಸೇರಿ ಕೇವಲ ರೂ 497 ಬೀಡಿ ಮಾಲೀಕರಿಗೆ ಖರ್ಚಾಗುತ್ತದೆ. ಆದರೆ 1000 ಬೀಡಿಗೆ ರೂ 900 ಸಿಗುತ್ತದೆ ಆದರೆ ಕಾರ್ಮಿಕರಿಗೆ ಕಿಂಚಿತ್ತ್ ಸಂಬಳಕ್ಕೂ ಸತಾಯಿಸುತ್ತಾರೆ ಇದಕ್ಕೆ ನಾವು ಕೋರ್ಟ್, ಹೋರಾಟ ಹಾಗೂ ಜಿಲ್ಲಾಡಳಿತದ ಮೂಲಕ ಗಮನ ಸೆಳೆಯಲಿದ್ದೇವೆ ಎಂದು ಎಚ್ಚರಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಮೂಡುಬಿದಿರೆ ವಲಯದ ಅಧ್ಯಕ್ಷ ಸುಂದರ ಶೆಟ್ಟಿ, ಮೂಡುಬಿದಿರೆ ತಾಲೂಕು ಸಂಘದ ಅಧ್ಯಕ್ಷೆ ರಮಣಿ, ಕಾರ್ಯದರ್ಶಿ ರಾಧಾ, ಖಜಾಂಜಿ ಗಿರಿಜಾ, ಪದಾಧಿಕಾರಿಗಳಾದ ಲಕ್ಷ್ಮೀ, ಬೇಬಿ, ಕೃಷ್ಣಪ್ಪ, ಕಲ್ಯಾಣಿ ಮತ್ತಿತರರು ಭಾಗವಹಿಸಿದ್ದರು.