ಪುತ್ತೂರು: ಬರಪರಿಹಾರ ಬಿಡುಗಡೆ ಮಾಡದಿದ್ದಲ್ಲಿ ವಿಧಾನಸಭೆಗೆ ಮುತ್ತಿಗೆ ಚಳುವಳಿ: ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪುತ್ತೂರು: ರಾಜ್ಯದ 216 ತಾಲೂಕುಗಳಲ್ಲಿ ಭೀಕರ ಬರಗಾಲ ಆವರಿಸಿದೆ. 36 ಲಕ್ಷ ಹೆಕ್ಟೇರ್ ಕೃಷಿ ಮತ್ತು 3 ಲಕ್ಷ ಹೆಕ್ಟೇರ್ ತೋಟಗಾರಿಕೆ ಪ್ರದೇಶದಲ್ಲಿ ಬರಗಾಲದ ಛಾಯೆ ಆವರಿಸಿದೆ. ಒಟ್ಟಾರೆ ರಾಜ್ಯದಲ್ಲಿ ಸುಮಾರು 33 ಸಾವಿರ ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಇಷ್ಟೆಲ್ಲ ಆಗಿದ್ದರೂ ಸಿದ್ದರಾಮಯ್ಯ ಸರಕಾರ ಕೇವಲ 320 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ.

ಸರಕಾರ ಒಂದು ವಾರದಲ್ಲಿ ಕನಿಷ್ಠ 10 ಸಾವಿರ ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯ ಬಿಜೆಪಿ ವಿಧಾನಸಭೆ ಮುತ್ತಿಗೆ ಚಳುವಳಿ ನಡೆಸಲಿದೆ ಎಂದು ವಿಧಾನಪರಿಷತ್ ಸದಸ್ಯರಾದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರ ಹಣ ಬಿಡುಗಡೆ ಮಾಡಬೇಕಾದ ರಾಜ್ಯ ಸರಕಾರ ಕೇಂದ್ರವನ್ನು ದೂರುತ್ತಾ ಕೂತಿದೆ. ರಾಜ್ಯಕ್ಕೆ ಪರಿಹಾರ ನೀಡುವಂತೆ ಕೋರಿ ಪ್ರಧಾನಿಯವರ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಲಿ. ಪ್ರತಿಪಕ್ಷವಾಗಿ ನಾವು ಕೂಡ ಬರುತ್ತೇವೆ. ತನ್ನ ಜವಾಬ್ದಾರಿ ನಿರ್ವಹಣೆ ಮಾಡದೆ ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದರು.ರಾಜ್ಯ ಬಿಜೆಪಿಯು 17 ತಂಡಗಳನ್ನು ರಚಿಸಿ 31 ಜಿಲ್ಲೆಗಳಲ್ಲೂ ಬರ ಸ್ಥಿತಿ ಅಧ್ಯಯನ ಮಾಡಿದೆ.

ನಾವು ಅಧ್ಯಯನ ಆರಂಭಿಸಿದ ಮೇಲೆ ರಾಜ್ಯ ಸರಕಾರ ಒಂದಷ್ಟು ಪರಿಹಾರ ಬಿಡುಗಡೆ ಮಾಡಿದೆ. ಈಗಾಗಲೇ ರಾಜ್ಯದ ಅನೇಕ ಕಡೆ ಮಳೆಯ ಸೂಚನೆ ಸಿಕ್ಕಿದೆ. ಸರಕಾರ ತಕ್ಷಣ ರೈತರ ನೆರವಿಗೆ ಬಂದು ಬಿತ್ತನೆ ಬೀಜ ಮತ್ತಿತರ ಸಹಕಾರ ನೀಡಬೇಕು. 10 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವಾ, ನಗರ ಮಂಡಲ ಅಧ್ಯಕ್ಷರಾದ ಪಿ.ಜಿ. ಜಗನ್ನಿವಾಸ ರಾವ್, ಜಿಲ್ಲಾ ಒಬಿಸಿ ಮೋರ್ಛಾ ಅಧ್ಯಕ್ಷರಾದ ಆರ್.ಸಿ. ನಾರಾಯಣ್, ಪುತ್ತೂರು ಮಂಡಲ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.