ದ.ಕ. ಜಿಲ್ಲೆಯ ಕಡೆ 16 ಎನ್‍ಐಎ ದಾಳಿ
ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ ಆರೋಪದ ಮೇಲೆ ಬುಧವಾರ ಬೆಳಗ್ಗೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ವೇಣೂರು ಸೇರಿ ಒಟ್ಟು 16 ಕಡೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದ.ಕ ಜಿಲ್ಲೆಯ 16 ಕಡೆಗಳಲ್ಲಿ ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ,ಮನೆ, ಕಚೇರಿ,ಹಾಗೂ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಕೆಲ ಸಮಯದಿಂದ ಎನ್ ಐಎ ದಕ್ಷಿಣ ಭಾರತದ ಪಿಎಫ್ ಐ ಹವಾಲಾ ಹಣ ಜಾಲ ಭೇದಿಸುತ್ತಿದೆ. ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧೆಡೆ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಬಿಹಾರದ ಪಾಟ್ನಾದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣದ ಜಾಡನ್ನು ಹಿಡಿದು ಈ ದಾಳಿಯನ್ನು ನಡೆಸಲಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಎನ್ ಐಎ ದಾಳಿ ನಡೆಸಿತ್ತು. ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್, ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಅವರನ್ನು ಈ ಸಂಬಂಧ ಬಂಧಿಸಿತ್ತು. ದಾಳಿ ಸಂದರ್ಭದಲ್ಲಿ ಹಲವು ಡಿಜಿಟಲ್ ಸಾಕ್ಷ್ಯಗಳು ಮತ್ತು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಿದ್ದ ಬಗ್ಗೆ ದಾಖಲೆ ಪತ್ತೆಹಚ್ಚಿದ್ದರು.